ಟೋಲ್ ಪ್ಲಾಜಾ ನಿರ್ಮಾಣಕ್ಕಾಗಿ ಕೆಲವೇ ಲಕ್ಷಗಳಲ್ಲಿ ಆಗಬಹುದಾಗಿದ್ದ ಭೂಸ್ವಾಧೀನ ಪ್ರಕ್ರಿಯೆಗೆ 30 ಕೋಟಿ ರೂ.ಗಳಿಗೂ ಅಧಿಕ ಪರಿಹಾರ ಪಡೆದಿರುವುದು ಮತ್ತು ಅದಕ್ಕೆ ಸಚಿವ ಜಿಗಜಿಣಗಿ ಪೂರಕವಾಗಿ ಸರ್ಕಾರಕ್ಕೆ ಪತ್ರ ಬರೆದಿರುವುದು ಒಟ್ಟು ಹಗರಣದ ಹೂರಣ.

ಬೆಂಗಳೂರು(ಜು.07): ರಾಷ್ಟ್ರೀಯ ಹೆದ್ದಾರಿಯ ಟೋಲ್‌ಪ್ಲಾಜಾವನ್ನು ಕೆಲ ವ್ಯಕ್ತಿಗಳ ವೈಯಕ್ತಿಕ ಲಾಭಕ್ಕಾಗಿ ಸ್ಥಳಾಂತರಿಸುವುದಲ್ಲದೇ ಸರ್ಕಾರಕ್ಕೆ ವಂಚನೆ ಮಾಡಿ ಕೋಟ್ಯಂತರ ರುಪಾಯಿ ಹಣವನ್ನು ಪರಿಹಾರದ ರೂಪದಲ್ಲಿ ಪಡೆದ ಹಗರಣದಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಹೆಸರು ಕೇಳಿಬಂದಿದ್ದು, ಸರ್ಕಾರಕ್ಕೆ ವಂಚಿಸಿದ ವ್ಯಕ್ತಿಗಳ ಪರವಾಗಿ ಸಚಿವ ಜಿಗಜಿಣಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದು ಪ್ರಭಾವ ಬೀರಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸೊಲ್ಲಾಪುರ-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 13ರ ಪೈಕಿ ವಿಜಯಪುರ ಜಿಲ್ಲೆಯ ಅಗಸನಾಳ ಟೋಲ್ ಪ್ಲಾಜಾವನ್ನು ತಿಡಗುಂದಿಗೆ ಸ್ಥಳಾಂತರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಪತ್ರ ಬರೆದು ಒತ್ತಡ ತಂದಿರುವುದನ್ನು ಸುವರ್ಣ ನ್ಯೂಸ್-ಕನ್ನಡಪ್ರಭದ ‘ಕವರ್ ಸ್ಟೋರಿ’ ತಂಡ ನಡೆಸಿದ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಟೋಲ್ ಪ್ಲಾಜಾ ನಿರ್ಮಾಣಕ್ಕಾಗಿ ಕೆಲವೇ ಲಕ್ಷಗಳಲ್ಲಿ ಆಗಬಹುದಾಗಿದ್ದ ಭೂಸ್ವಾಧೀನ ಪ್ರಕ್ರಿಯೆಗೆ 30 ಕೋಟಿ ರೂ.ಗಳಿಗೂ ಅಧಿಕ ಪರಿಹಾರ ಪಡೆದಿರುವುದು ಮತ್ತು ಅದಕ್ಕೆ ಸಚಿವ ಜಿಗಜಿಣಗಿ ಪೂರಕವಾಗಿ ಸರ್ಕಾರಕ್ಕೆ ಪತ್ರ ಬರೆದಿರುವುದು ಒಟ್ಟು ಹಗರಣದ ಹೂರಣ.

ವಿಜಯಪುರ ನಗರದಿಂದ 20 ಕಿಮೀ ದೂರದಲ್ಲಿರುವ ತಿಡಗುಂದಿಯ ಬಳಿ ಟೋಲ್ ಪ್ಲಾಜಾ ನಿರ್ಮಾಣಕ್ಕಾಗಿ ವಿಠಲಗೌಡ ರುದ್ರಗೌಡ ಬಿರಾದಾರ್ ಪಾಟೀಲ್ ಹಾಗೂ ಸುಶೀಲ್‌ಭಾಯ್ ಹನುಮಂತ ಉಟಗಿ ಎಂಬುವವರಿಂದ ಹೆದ್ದಾರಿ ಪ್ರಾಧಿಕಾರ ಭೂಸ್ವಾಧೀನ ಮಾಡಿಕೊಂಡಿದೆ. ಈ ವೇಳೆ ಪ್ರತಿ ಚದರ ಮೀಟರ್ ಜಾಗೆಗೆ 6,064 ರು.ಗಳನ್ನು ನಿಗದಿಪಡಿಸಲಾಗಿದೆ. ಆದರೆ ತಿಡಗುಂದಿ ಗ್ರಾಮದಲ್ಲಿ ವಾಸ್ತವವಾಗಿ ವಾಣಿಜ್ಯ ಬಳಕೆಯ ಭೂಮಿಯ ಬೆಲೆ ಪ್ರತಿ ಚದರ ಮೀಟರ್‌ಗೆ ಕೇವಲ 41 ರು.ಗಳು ಮಾತ್ರ ಇದೆ. ಪರಿಹಾರದ ಮೊತ್ತ 41 ರು.ಗಳಿಂದ 6,064 ರು.ಗಳಿಗೆ ಹೆಚ್ಚಳ ಆಗಿರುವುದು ಹೇಗೆ ಎಂಬುದನ್ನು ‘ಕವರ್ ಸ್ಟೋರಿ’ ತಂಡ ತನಿಖೆ ನಡೆಸಿದಾಗ ನಕಲಿ ಸೇಲ್ ಡೀಡ್‌ಗಳನ್ನು ಸೃಷ್ಟಿಸಿ, ತಿಡಗುಂದಿಯಲ್ಲಿನ ಜಮೀನಿನ ಮೌಲ್ಯವನ್ನು ಕೃತಕವಾಗಿ ಹೆಚ್ಚಳ ಮಾಡಿರುವ ಕುರಿತಂತೆ ದಾಖಲೆಗಳು ಲಭ್ಯವಾಗಿವೆ. ದುರಂತವೆಂದರೆ, ನಕಲಿ ಸೇಲ್ ಡೀಡ್ ಸೃಷ್ಟಿಸಿ ಸರ್ಕಾರಕ್ಕೆ ವಂಚನೆ ಮಾಡಿರುವ ವಿಠಲಗೌಡ ಹಾಗೂ ಸುಶೀಲ್‌ಭಾಯ್ ಪರವಾಗಿ ಸಚಿವ ಜಿಗಜಿಣಗಿ ಪ್ರಾಧಿಕಾರದ ಮೇಲೆ ಪ್ರಭಾವ ಬೀರಿದ್ದಾರೆ. ಅಷ್ಟೇ ಅಲ್ಲ, ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರಿಗೂ ಬರೆದಿರುವ ಪತ್ರದ ಪ್ರತಿಗಳು ‘ಕವರ್ ಸ್ಟೋರಿ’ ತಂಡಕ್ಕೆ ಲಭ್ಯವಾಗಿವೆ.

ಜಿಗಜಿಣಗಿ ಪತ್ರದಲ್ಲಿ ಏನಿದೆ?

ಕೇಂದ್ರ ಸಚಿವ ಜಿಗಜಿಣಗಿ ಅವರು ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥ ರಿಗೆ ಪತ್ರ ಬರೆದು, ವಿಜಯಪುರದ ಅಗಸನಾಳದಲ್ಲಿರುವ ಟೋಲ್ ಪ್ಲಾಜಾವನ್ನು ತಿಡಗುಂದಿಗೆ ಶಿಫ್ಟ್ ಮಾಡಿ. ಅಲ್ಲದೆ ಟೋಲ್ ಪ್ಲಾಜಾಗೆ ಭೂಮಿ ಕಳೆದುಕೊಂಡ ಸುಶೀಲ್‌ಭಾಯ್ ಹನುಮಂತ ಉಟಗಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ ಎಂದು ಮನವಿ ಮಾಡಿದ್ದಾರೆ. ಈ ಪತ್ರದ ಪರಿಣಾಮವಾಗಿಯೇ ಟೋಲ್ ಪ್ಲಾಜಾ ಅಗಸನಾಳದಿಂದ ತಿಡಗುಂದಿಗೆ ಶಿಫ್ಟ್ ಆಗಿದೆ. ಟೋಲ್ ಪ್ಲಾಜಾ ಶಿಫ್ಟ್ ಆಗಿದ್ದರಿಂದ ವಿಠಲಗೌಡ ಹಾಗೂ ಸುಶೀಲ್‌ಭಾಯ್ ಕುಟುಂಬಕ್ಕೆ ಅಕ್ರಮವಾಗಿ 30 ಕೋಟಿ ರುಪಾಯಿ ಪರಿಹಾರ ಸಂದಾಯವಾಗಿದೆ. ಆದರೆ ಸಚಿವ ಜಿಗಜಿಣಗಿ ಅವರ ಈ ಪತ್ರದಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ. ಹೆದ್ದಾರಿ ಪ್ರಾಧಿಕಾರದ ಪ್ರಕಾರವೇ ಅಗಸನಾಳದಲ್ಲಿ ಟೋಲ್ ಪ್ಲಾಜಾ ನಿರ್ಮಾಣವಾಗಿದ್ದರೆ ಭೂಸ್ವಾಧೀನಕ್ಕಾಗಿ ಪ್ರತಿ ಚದರ ಮೀಟರ್‌ಗೆ ಕೇವಲ 377 ರುಪಾಯಿ ಪರಿಹಾರ ನೀಡಬೇಕಿತ್ತು. ಅದರೆ ಭ್ರಷ್ಟ ಅಕಾರಿಗಳು ಕೂಡ ಶಾಮೀಲಾಗಿ ಟೋಲ್ ಪ್ಲಾಜಾ ತಿಡಗುಂದಿಗೆ ಸ್ಥಳಾಂತರಗೊಂಡಿದ್ದಲ್ಲದೇ ಭಾರಿ ದೊಡ್ಡ ಮೊತ್ತದ ಪರಿಹಾರ ನೀಡಲಾಗಿದೆ.

ಸ್ವಾಧೀನಕ್ಕೆ ಮುನ್ನವೇ ಷಡ್ಯಂತ್ರ?

ಹಗರಣದ ಆಳಕ್ಕೆ ಹೋದಂತೆ ಹಲವಾರು ಆತಂಕಕಾರಿ ವಿಚಾರಗಳು ಬಯಲಿಗೆ ಬಂದಿವೆ. ಟೋಲ್ ಪ್ಲಾಜಾ ಯೋಜನೆ ಮೂಲಕ ಭಾರಿ ಪ್ರಮಾಣದ ಪರಿಹಾರ ಪಡೆಯುವ ಕುರಿತಂತೆ ಸಾಕಷ್ಟು ಹಿಂದೆಯೇ ವ್ಯವಸ್ಥಿತವಾಗಿ ಯೋಜನೆ ರೂಪುಗೊಂಡಿರುವುದು ಸಾಬೀತಾಗಿದೆ. ಅಗಸನಾಳದ ಟೋಲ್ ಪ್ಲಾಜಾವನ್ನು ತಿಡಗುಂದಿಗೆ ಶ್‌ಟಿ ಮಾಡಿ ಎಂದು ವಿಠಲಗೌಡ ಬಿರಾದಾರ 2011ರ ಡಿಸೆಂಬರ್ 1ರಂದು ಪ್ರಾಕಾರದ ಯೋಜನಾಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಭೂಸ್ವಾಧೀನ ಅಧಿಸೂಚನೆ ಹೊರಡಿಸಿರುವುದು ಮಾತ್ರ 2011ರ ಡಿಸೆಂಬರ್ 8ರಂದು ಎಂಬುದು ಗಮನಾರ್ಹ. ಬಿರಾದಾರ್ ಬರೆದ ಪತ್ರದ ಜೊತೆಗೆ ಆಗ ಸಂಸದರಾಗಿದ್ದ ರಮೇಶ್ ಜಿಗಜಿಣಗಿಯವರ ಶಿಫಾರಸು ಪತ್ರವೂ ಇರುವುದು ಈಗ ಸಚಿವರಾಗಿರುವ ಜಿಗಜಿಣಗಿ ಅವರ ಮೇಲೆ ಅನುಮಾನ ಉಂಟಾಗಲು ಕಾರಣವಾಗಿದೆ. ಹೀಗಾಗಿ ಯೋಜನೆಯ ಆರಂಭದಿಂದಲೇ ಪರಿಹಾರದಲ್ಲಿ ಗೋಲ್‌ಮಾಲ್ ಮಾಡುವ ಷಡ್ಯಂತ್ರ ಇತ್ತೆ ಎಂಬ ಅನುಮಾನ ಮೂಡಿದೆ.

ಅಧಿಕಾರಿಗಳು ಶಾಮೀಲು

ಇಡೀ ಪ್ರಕರಣದಲ್ಲಿ ವಿಜಯಪುರ ಜಿಲ್ಲಾಕಾರಿ, ಉಪ ವಿಭಾಗಾಕಾರಿಗಳಿಂದ ಹಿಡಿದು ಹೆದ್ದಾರಿ ಪ್ರಾಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಕೈಜೋಡಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಏಕೆಂದರೆ 2011ರಲ್ಲಿ ಟೋಲ್ ಪ್ಲಾಜಾ ನಿರ್ಮಾಣದ ಸುಳಿವು ಸಿಕ್ಕ ಬಳಿಕ ವಿಠಲಗೌಡ ಬಿರಾದಾರ್ ರತ್ನಮ್ಮ ಎಂಬುವವರಿಂದ ಕೇವಲ 4 ಗುಂಟೆ ಜಮೀನನ್ನು 25 ಲಕ್ಷ ರು. ಕೊಟ್ಟು ಖರೀದಿಸಿದ್ದಾರೆ. ಅಂದರೆ ಪ್ರತಿ ಚದರ ಮೀಟರ್‌ನ ವೌಲ್ಯ 6,200 ರು.ಗಳಷ್ಟು ಆಗುತ್ತದೆ. ಅಂದರೆ ಸರ್ಕಾರಕ್ಕೆ ಭೂಸ್ವಾಧೀನದ ವೇಳೆ ಸುತ್ತಮುತ್ತಲಿನ ಖರೀದಿ ಪತ್ರಗಳನ್ನು ಸಾಕ್ಷಿಯಾಗಿ ಕೊಡಬೇಕಾಗುತ್ತದೆ. ಅದನ್ನು ಆಧರಿಸಿಯೇ ಪರಿಹಾರದ ಮೊತ್ತ ನಿಗದಿ ಮಾಡಲಾಗುತ್ತದೆ. ಆದರೆ ತಿಡಗುಂದಿಯಲ್ಲಿ ಪ್ರತಿ ಚದರ ಮೀಟರ್‌ಗೆ 41 ರು.ಗಳಿಗೆ ಜಮೀನು ಕೇಳುವವರೇ ಇಲ್ಲ. ಆದಾಗ್ಯೂ ಭಾರಿ ಮೊತ್ತದ ಖರೀದಿ ತೋರಿಸಿ, ಸರ್ಕಾರಕ್ಕೆ ವಂಚನೆ ಮಾಡಲಾಗಿದೆ. ಇಂತಹ ವಂಚನೆ ಅಧಿಕಾರಿಗಳು ಶಾಮೀಲಾಗದೇ ನಡೆಯಲು ಸಾಧ್ಯವೇ ಇಲ್ಲ.

ಈ ಅಕ್ರಮಕ್ಕೆ ಪುಷ್ಠಿ ನೀಡುವಂತೆ ತಿಡಗುಂದಿಯ ಬಸನಗೌಡ ಹರನಾಳ ಎಂಬ ವ್ಯಕ್ತಿ ತನ್ನ 4 ಗುಂಟೆ ಜಮೀನನ್ನು 24 ಲಕ್ಷ ರು.ಗಳಿಗೆ ತನಗೇ ಮಾರಾಟ ಮಾಡಿಕೊಂಡ ಪ್ರಹಸನವೂ ನಡೆದಿದೆ. ಇದರ ಖರೀದಿ ಪತ್ರವನ್ನೂ ಪರಿಹಾರ ನಿಗದಿ ಸಮಿತಿಗೆ ಸಲ್ಲಿಸಲಾಗಿದೆ. ಆದರೆ ಅಕಾರಿಗಳು ಕಣ್ಣುಮುಚ್ಚಿಕೊಂಡು ಪರಿಹಾರ ನಿಗದಿ ಮಾಡಿದ್ದಾರೆ. ಇದೇ ಆಧಾರದ ಮೇಲೆ ವಿಠಲಗೌಡ 3.51 ಕೋಟಿ ರು.ಗಳ ಪರಿಹಾರವನ್ನು ಸರ್ಕಾರದಿಂದ ಪಡೆದಿದ್ದಾರೆ. ಇದಕ್ಕೆ ಪೂರಕವಾಗಿ ನಂತರ ನಡೆದ ಎಲ್ಲ ಭೂಸ್ವಾಧೀನ ಪ್ರಕರಣಗಳಿಗೂ ಇದೇ ಪರಿಹಾರದ ಮೊತ್ತವನ್ನು ನೀಡಿರುವ ಚಾಣಾಕ್ಷ ಅಧೀಕಾರಿಗಳು, ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರು.ಗಳ ವಂಚನೆ ಮಾಡಿದ್ದಾರೆ.

ಸುಶೀಲ್‌ಭಾಯ್ ಎಂಬ ಮತ್ತೊಬ್ಬ ವ್ಯಕ್ತಿ 8.5 ಗುಂಟೆ ಜಮೀನಿಗೆ 2.32 ಕೋಟಿ ರು.ಗಳ ಪರಿಹಾರ ಪಡೆದಿದ್ದಾರೆ. ಇವರೂ ಕೂಡ 2013ರಲ್ಲಿ ಎರಡನೇ ಅಧಿಸೂಚನೆ ಹೊರಡುವ ಮುನ್ನವೇ 1.60 ಲಕ್ಷ ರು.ಗಳಿಗೆ ನಾಲ್ಕು ಎಕರೆ ಜಮೀನು ಖರೀದಿಸಿದ್ದಾರೆ.

ಹೀಗೆ ಕಳೆದ ಆರು ವರ್ಷಗಳ ಅವಯಲ್ಲಿ ಎನ್‌ಎಚ್-13ರ ವ್ಯಾಪ್ತಿಗೆ ಒಳಪಡುವ ವಿಜಯಪುರ-ಸೊಲ್ಲಾಪುರ ನಡುವಣ ಚತುಷ್ಪಥ ಹೆದ್ದಾರಿ ನಿರ್ಮಾಣದ ವೇಳೆ ರಾಜಕಾರಣಿಗಳು, ಅಕಾರಿಗಳು ಮತ್ತು ಕೆಲ ಪ್ರಭಾವಿ ವ್ಯಕ್ತಿಗಳು ನೂರಾರು ಕೋಟಿ ರು.ಗಳನ್ನು ದೋಚಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆದರೆ ಇನ್ನಷ್ಟು ಅಕ್ರಮಗಳು ಹೊರಬರುವ ಸಾಧ್ಯತೆಗಳಿವೆ.

ವರದಿ:ವಿಜಯಲಕ್ಷ್ಮೀ ಶಿಬರೂರು