ಬೆಂಗಳೂರು (ಆ. 09): ಗ್ರಾಹಕರೇ ಚೆಕ್‌ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕೊರಿಯರ್‌ ಮಾಡುವ ಮುನ್ನ ತುಸು ಎಚ್ಚರ ವಹಿಸಿ!

ಇಲ್ಲೊಂದು ಪ್ರಕರಣದಲ್ಲಿ ಬಿಹಾರ ಮೂಲದ ಕೊರಿಯರ್‌ ಸಿಬ್ಬಂದಿಯೊಬ್ಬ ಕೊರಿಯರ್‌ನಲ್ಲಿ ಬಂದಿದ್ದ ಚೆಕ್‌ ಕದ್ದು, .12 ಲಕ್ಷ ಹಣ ಡ್ರಾ ಮಾಡಿ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬಿಹಾರ ಮೂಲದ ಅಶ್ವಿನ್‌ ಕುಮಾರ್‌ಸಿಂಗ್‌ (35) ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬ್ಯಾಟರಾಯನಪುರ ಪೊಲೀಸರು ಬಲೆ ಬೀಸಿದ್ದಾರೆ.

ಸೋಂಪುರ ನಿವಾಸಿ ದೇವಿಕಾ ಎಂಬುವವರು ಕಳೆದ ಎರಡು ವರ್ಷಗಳಿಂದ ಮೈಸೂರು ರಸ್ತೆಯಲ್ಲಿರುವ ಹೊಸಗುಡ್ಡದಹಳ್ಳಿಯಲ್ಲಿ ಏಕದಂತ ಎಂಟರ್‌ ಪ್ರೈಸಸ್‌ ಹೆಸರಿನ ಡಿಟಿಡಿಸಿ ಕೊರಿಯರ್‌ ನಡೆಸುತ್ತಿದ್ದಾರೆ. ಇದರ ಕೇಂದ್ರ ಕಚೇರಿ ಚಾಮರಾಜಪೇಟೆಯಲ್ಲಿದೆ. ಜು.12 ರಂದು ಆರೋಪಿ ಅಶ್ವಿನ್‌ ಕುಮಾರ್‌ ಕೊರಿಯರ್‌ ಬಾಯ್‌ ಆಗಿ ಕೆಲಸಕ್ಕೆ ಸೇರಿದ್ದ. ಜು.15ರಂದು ಸಾಯಿರಾಧ ಫಾರ್ಮ್ ಇಂಡಿಯ ಪ್ರೈ.ಲಿ ಉಡುಪಿಯಿಂದ ಟಿಂಬರ್‌ ಯಾರ್ಡ್‌ನಲ್ಲಿರುವ ಎಂಪಿ ಡಿಸ್ಟ್ರಿಬ್ಯೂಟ​ರ್‍ಸ್ನವರಿಗೆ ದಾಖಲೆ ಇದ್ದ ಕೊರಿಯರ್‌ ಕಳುಹಿಸಿತ್ತು.

ಕೊರಿಯರ್‌ ನೀಡಲು ಹೋಗಿದ್ದ ಅಶ್ವಿನ್‌ ಐದು ಗಂಟೆಗೆ ಕಚೇರಿಗೆ ಬಂದು ಎಲ್ಲಾ ದಾಖಲೆಗಳನ್ನು ಸಂಬಂಧಪಟ್ಟವರಿಗೆ ಕೊಟ್ಟಿರುವುದಾಗಿ ಹೇಳಿ ಆತುರವಾಗಿ ಹೊರಟು ಹೋದ. ಸ್ವೀಕೃತಿ ಸ್ಥಳದಲ್ಲಿ ಖಾಲಿ ಇದ್ದರಿಂದ ಅನುಮಾನಗೊಂಡ ದೇವಿಕಾ ಅವರು ಆರೋಪಿಗೆ ಕರೆ ಮಾಡಿದಾಗ ಆತನ ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು.

ಎರಡು ದಿನದ ಬಳಿಕ ಆರೋಪಿಯೇ ಕಚೇರಿಗೆ ಬಂದು ನನಗೆ ಡೆಂಘೀ ಜ್ವರ ಇದ್ದು, ಗುಣಮುಖನಾದ ಬಳಿಕ ಕೆಲಸಕ್ಕೆ ಬರುವುದಾಗಿ ಹೇಳಿದ್ದ. ಸ್ವೀಕೃತಿ ಸ್ಥಳದಲ್ಲಿ ಖಾಲಿ ಇದ್ದ ಬಗ್ಗೆ ಪ್ರಶ್ನಿಸಿದಾಗ ವಸ್ತುವನ್ನು ಡೆಲವರಿ ಮಾಡಿದ್ದೇನೆ. ಆತುರದಲ್ಲಿ ಮರೆತು ಸ್ವೀಕೃತಿ ಪತ್ರ ಪಡೆದುಕೊಂಡಿಲ್ಲ ಎಂದು ಹೇಳಿದ್ದ. ಆರೋಪಿ ಮಾತನ್ನು ದೇವಿಕಾ ಕೂಡ ನಂಬಿ ಸುಮ್ಮನಾಗಿದ್ದರು.

ಆ.3ರಂದು ಎಂಪಿ ಡಿಸ್ಟ್ರಿಬ್ಯೂಟರ್‌ ನವರು ದೇವಿಕಾ ಅವರಿಗೆ ಕರೆ ಮಾಡಿ ಸಾಯಿರಾಧ ಫಾರ್ಮ್ ಇಂಡಿಯಾ ಪ್ರೈ.ಲಿ.ನಿಂದ ಬರಬೇಕಿದ್ದ ಎರಡು ದಾಖಲೆಗಳಲ್ಲಿ ಒಂದು ದಾಖಲೆ ತಲುಪಿದ್ದು, ಮತ್ತೊಂದು ದಾಖಲೆ ಕೈ ಸೇರಿಲ್ಲ ಎಂದು ಹೇಳಿದ್ದರು. ಅಲ್ಲದೆ, ಕೊರಿಯಾರ್‌ನಲ್ಲಿದ್ದ ನಾಲ್ಕು ಚೆಕ್‌ಗಳು ಇದ್ದವು. ಈ ಚೆಕ್‌ಗಳ ಪೈಕಿ ಎಂಪಿ ಡಿಸ್ಟ್ರಿಬ್ಯೂಟ​ರ್‍ಸ್ನ ಹೆಸರಿನಲ್ಲಿ ಮಲ್ಲೇಶ್ವರಂನಲ್ಲಿ ಜನ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನಲ್ಲಿ ಹಣ ಡ್ರಾ ಆಗಿರುವುದಾಗಿ ತಿಳಿಸಿದ್ದಾರೆ.

ಆರೋಪಿಯನ್ನು ಸಂಪರ್ಕ ಮಾಡಿದಾಗ ಆತನ ಮೊಬೈಲ್‌ ಸ್ವಿಚ್‌ ಆಗಿರುವುದು ತಿಳಿದಿದೆ. ಅಲ್ಲದೆ, ಕೆಲಸಕ್ಕೆ ಸೇರಿದ ಆರೋಪಿ ಆಧಾರ್‌ ಕಾರ್ಡ್‌ಅನ್ನು ಮಾತ್ರ ನೀಡಿದ್ದ. ನಗರದಲ್ಲಿ ಎಲ್ಲಿ ನೆಲೆಸಿದ್ದಾನೆ ಎಂಬ ಬಗ್ಗೆ ಕೊರಿಯರ್‌ ಸಂಸ್ಥೆಗೆ ದಾಖಲೆ ನೀಡಿಲ್ಲ. ನಕಲಿ ಖಾತೆ ತೆರೆದು ಹಣ ಡ್ರಾ ಮಾಡಿ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.