ರಾಯ್‌ಪುರ್(ಜು.27): ಸಂಸಾರವೆಂಬುದು ಒಂದು ರಥವಿದ್ದಂತೆ, ಗಂಡ-ಹೆಂಡತಿ ಅದರ ಎರಡು ಚಕ್ರಗಳು. ಒಂದು ಚಕ್ರ ನಿಂತರೆ ಮತ್ತೊಂದು ಮುಂದೆ ಸಾಗಲಾರದು. ಇದು ಮದುವೆಯಾದ ನವಜೋಡಿಗೆ ನಮ್ಮ ಗುರು ಹಿರಿಯರು ಹೇಳುವ ಕಿವಿಮಾತು.

ಆದರೆ ಛತ್ತೀಸ್'ಗಡ್'ನ ಈ ದಂಪತಿ ಈ ಮಾತನ್ನು ಕೇವಲ ಸಂಸಾರಕ್ಕಷ್ಟೇ ಸೀಮಿತಗೊಳಿಸದೇ, ಆಡಳಿತ ಕ್ಷೇತ್ರಕ್ಕೂ ವಿಸ್ತರಿಸಿ ಹೊಸದೊಂದು ಮುನ್ನುಡಿ ಬರೆದಿದ್ದಾರೆ.

ಹೌದು, ಇತ್ತಿಚಿಗೆ ನಡೆದ ಛತ್ತೀಸ್'ಗಡ್ ನಾಗರಿಕ ಸೇವಾ ಪರೀಕ್ಷೆಯಲ್ಲಿ ಜೋಡಿಯೊಂದು ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ್ದು, ಇಡೀ ದೇಶ ನಿಬ್ಬೆರಗಾಗುವಂತೆ ಮಾಡಿದ್ದಾರೆ.

ಛತ್ತೀಸ್'ಗಡ್' ಲೋಕಸೇವಾ ಆಯೋಗ ಮುಖ್ಯ ಪುರಸಭೆ ಆಡಳಿತಾಧಿಕಾರಿ ಹುದ್ದೆಗೆ ನಡೆಸಿದ್ದ ಪರೀಕ್ಷೆಯಲ್ಲಿ ಅನುಭವ್ ಸಿಂಗ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರೆ, ಅವರ ಪತ್ನಿ ವಿಭಾ ಸಿಂಗ್ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅನುಭವ್ ಒಟ್ಟು 298.3744 ಅಂಕ ಗಳಿಸಿದ್ದರೆ, ವಿಭಾ ಒಟ್ಟು 283.9151 ಅಂಕ ಗಳಿಸಿ ಗಮನ ಸೆಳೆದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ದಂಪತಿ, ಪರೀಕ್ಷೆಗಾಗಿ ಇಬ್ಬರೂ ಒಟ್ಟಿಗೆ ತಯಾರಿ ನಡೆಸಿದ್ದು, ಪರಸ್ಪರ ಮಾಹಿತಿ ಹಂಚಿಕೊಳ್ಳುವ ಮೂಲಕ ಅಧ್ಯಯನ ಮಾಡುತ್ತಿದ್ದೇವು ಎಂದು ಸಂತಸ ಹಂಚಿಕೊಂಡಿದ್ದಾರೆ. ಪರೀಕ್ಷೆ ಫಲಿತಾಂಶದಿಂದ ತಾವು ತುಂಬ ಸಂತುಷ್ಟರಾಗಿದ್ದು, ತಮಗೆ ದೊರೆಯಲಿರುವ ಹುದ್ದೆಯ ಮೂಲಕ ಜನರ ಸೇವೆ ಮಾಡುವುದಾಗಿ ದಂಪತಿ ತಿಳಿಸಿದ್ದಾರೆ.