ಬೆಂಗಳೂರು :  ಅಸಭ್ಯವಾಗಿ ವರ್ತಿಸಿದ ಪರಿಚಿತನನ್ನು ದಂಪತಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದ್ದು, ಆರೋಪಿಗಳನ್ನು ಶನಿವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಹುಳಿಮಾವು ನಿವಾಸಿ ಮಧು (30) ಹತ್ಯೆಯಾದ ಯುವಕ. ಘಟನೆ ಸಂಬಂಧ ರಾಜಗೋಪಾಲನಗರದ ಲವಕುಶನಗರ ನಿವಾಸಿ ಮೋಹನ್‌ (30) ಹಾಗೂ ಆತನ ಪತ್ನಿ ರಮ್ಯಾ(24) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮೋಹನ್‌ ಮತ್ತು ರಮ್ಯಾ ದಂಪತಿ ಮೂಲತಃ ಹಾಸನ ಜಿಲ್ಲೆಯ ಹೊಳೇನರಸಿಪುರ ತಾಲೂಕಿನವನಾಗಿದ್ದಾರೆ. ದಂಪತಿಗೆ ಮೂರು ವರ್ಷದ ಮಗು ಇದ್ದು, ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದರು. ಮೋಹನ್‌ ಹಾಗೂ ಕೊಲೆಯಾದ ಮಧು ಆತ್ಮೀಯ ಸ್ನೇಹಿತರಾಗಿದ್ದು, ಒಂದೇ ಊರಿನವರಾಗಿದ್ದರು. ಅವಿವಾಹಿತನಾಗಿರುವ ಮಧು ಹುಳಿಮಾವಿನಲ್ಲಿ ಸ್ನೇಹಿತರ ಜತೆ ನೆಲೆಸಿದ್ದ.

ಮೋಹನ್‌ ಹಾಗೂ ಮಧು ಖಾಸಗಿ ಕಂಪನಿಗೆ ತಮ್ಮ ಕಾರುಗಳನ್ನು ಅಟ್ಯಾಚ್‌ ಮಾಡಿದ್ದರು. ಆಗ್ಗಾಗ್ಗೆ ಮಧು ಸ್ನೇಹಿತ ಮೋಹನ್‌ ಮನೆಗೆ ಬಂದು ಹೋಗುತ್ತಿದ್ದ. ಮಧು ಸ್ನೇಹಿತನ ಪತ್ನಿ ರಮ್ಯಾ ಹಾಗೂ ಅವರ ಸಹೋದರಿ ರಾಜರಾಜೇಶ್ವರಿ ನಗರದ ನಿವಾಸಿ ಬಿಂದು ಅವರಿಗೆ ಕರೆ ಮಾಡಿ ಆರೋಪಿ ಕೆಟ್ಟದಾಗಿ ಮಾತನಾಡುತ್ತಿದ್ದ. ‘ನಾನು ನಿನ್ನನ್ನು ಇಷ್ಟಪಟ್ಟಿದ್ದೇನೆ. ನನ್ನ ಜತೆ ಬರಬೇಕು’ ಎನ್ನುತ್ತಿದ್ದ. ಇದೇ ರೀತಿ ರಮ್ಯಾ ಅವರಿಗೂ ಆರೋಪಿ ಕರೆ ಮಾಡಿದ್ದ. ‘ನಾನು ಹೇಳಿದಂತೆ ಕೇಳದಿದ್ದರೆ ನಿನ್ನ ಪತಿಗೆ ನಿನ್ನ ಮೇಲೆ ಇಲ್ಲ ಸಲ್ಲದನ್ನು ಹೇಳುತ್ತೇನೆ’ ಎಂದು ಹೆದರಿಸುತ್ತಿದ್ದ. ರಮ್ಯಾ ಮಧುವಿನ ಯಾವುದೇ ಧಮ್ಕಿಗೆ ಹೆದರಿರಲಿಲ್ಲ.

ರಮ್ಯಾ ಪತಿ ಬಳಿ ‘ಮಧು, ಬಿಂದುವಿಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದಾನೆ. ಆತನ ವರ್ತನೆ ಸರಿ ಇಲ್ಲ’ ಎಂದು ಹೇಳಿದ್ದಳು. ಆತ್ಮೀಯ ಸ್ನೇಹಿತನಾದ ಕಾರಣ ಮೋಹನ್‌, ಮಧುಗೆ ಒಮ್ಮೆ ಎಚ್ಚರಿಕೆ ನೀಡಿ ಸುಮ್ಮನಾಗಿದ್ದ.

ಮಧು ಮತ್ತು ಮೋಹನ್‌ ಶನಿವಾರ ಮನೆ ಸಮೀಪದ ಬಾರ್‌ವೊಂದರಲ್ಲಿ ಮದ್ಯ ಸೇವಿಸಿದ್ದರು. ಮೋಹನ್‌ ಮನೆಗೆ ಪತ್ನಿಯ ಸಹೋದರಿ ಅರಕಲಗೂಡಿನಲ್ಲಿದ್ದ ಸೌಮ್ಯಾ ಅವರು ಇತ್ತೀಚೆಗೆ ಬಂದಿದ್ದರು. ಪಾನಮತ್ತನಾಗಿದ್ದ ಮಧು ಸ್ನೇಹಿತ ಮೋಹನ್‌ ಜತೆ ಶನಿವಾರ ಸಂಜೆ 5ರ ಸುಮಾರಿಗೆ ಆತನ ಮನೆಗೆ ಬಂದಿದ್ದ. ಮಧು ನೇರವಾಗಿ ಕೊಠಡಿಯಲ್ಲಿ ಮಲಗಿದ್ದ ಸೌಮ್ಯಾ ಅವರ ಬಳಿ ತೆರಳಿ ಮಲಗಿದ್ದಾನೆ. ಇದರಿಂದ ಆತಂಕಗೊಂಡ ಸೌಮ್ಯಾ ಮೇಲೆದ್ದು ಮಧುನನ್ನು ಪ್ರಶ್ನಿಸಿದ್ದರು.

ಇಷ್ಟಕ್ಕೆ ಆರೋಪಿ ಮಹಿಳೆಯ ಮುಖಕ್ಕೆ ಗುದ್ದಿ ಗಾಯಗೊಳಿಸಿದ್ದ. ಅಡುಗೆ ಮನೆಯಲ್ಲಿದ್ದ ರಮ್ಯಾ ಕೂಡಲೇ ಓಡಿ ಬಂದು ಮಧುವಿಗೆ ಎಚ್ಚರಿಕೆ ನೀಡಿದ್ದರು. ಈ ವೇಳೆ ಮಧು, ರಮ್ಯಾ ಮೇಲೂ ಹಲ್ಲೆ ನಡೆಸಿದ್ದ. ಪತ್ನಿಯನ್ನು ಮಧುನಿಂದ ರಕ್ಷಿಸುವ ಸಲುವಾಗಿ ಮೋಹನ್‌, ಮಧುನನ್ನು ಹಿಂದಿನಿಂದ ಹಿಡಿದುಕೊಂಡಿದ್ದ. ಈ ವೇಳೆ ಮಹಿಳೆ ಮನೆಯಲ್ಲಿದ್ದ ರಾಡ್‌ನಿಂದ ಮಧುವಿನ ತಲೆಗೆ ಹೊಡೆದಿದ್ದರು. ತೀವ್ರ ರಕ್ತಸ್ರಾವವಾಗಿ ಮಧು ಸ್ಥಳದಲ್ಲಿಯೇ ಮೃತಪಟ್ಟಿದ್ದ. ಮನೆಯಲ್ಲಿ ನಡೆಯುತ್ತಿದ್ದ ಜಗಳದ ಶಬ್ದ ಕೇಳಿ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋದಾಗ ಕೊಲೆ ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸರು ಹೇಳಿದರು.

ಮಧುವಿಗೆ ಹಿಗ್ಗಾಮುಗ್ಗ ಥಳಿತ

ಬಂಧಿತ ರಮ್ಯಾ, ಮಧು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತಿದ್ದಳು. ಆತನ ಮೇಲಿರುವ ಕೋಪಕ್ಕೆ ಮನಬಂದಂತೆ ಆತನ ದೇಹದ ಮೇಲೆ ಹತ್ತಾರು ಬಾರಿ ರಾಡ್‌ನಿಂದ ಚುಚ್ಚಿದ್ದಾಳೆ. ಅಲ್ಲದೆ, ಮಧು ತಲೆಗೆ ಏಳೆಂಟು ಬಾರಿ ಹೊಡೆದು ಹತ್ಯೆ ಮಾಡಲಾಗಿದೆ. ಈ ವೇಳೆ ಪತಿ ಮೋಹನ್‌, ಮಧುನನ್ನು ಹಿಂದಿನಿಂದ ಹಿಡಿದುಕೊಂಡಿದ್ದ. ಹತ್ಯೆಯಲ್ಲಿ ರಮ್ಯಾ ಸಹೋದರಿ ಸೌಮ್ಯಾ ಅವರ ಪಾತ್ರ ಇಲ್ಲ. ಸೌಮ್ಯಾ ಮುಖಕ್ಕೆ ಮಧು ಹೊಡೆದಿದ್ದರಿಂದ ಗಾಯವಾಗಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.