ರಾಜರಾಜೇಶ್ವರಿ ನಗರ ಕ್ಷೇತ್ರದ ಲಗ್ಗೆರೆ ವಾರ್ಡ್‌ನಲ್ಲಿ 800 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಭಾಷಣದ ಬಳಿಕ ಮಂಜುಳಾ ಎನ್. ಸ್ವಾಮಿ ತಮ್ಮ ಅಹವಾಲು ಹೇಳಿಕೊಳ್ಳಲು ಮೈಕ್ ಬಳಿ ಹೋಗಿ ನಿಂತರು. ಈ ವೇಳೆ ಅಡ್ಡಗಟ್ಟಿದ ಮೇಯರ್ ಜಿ. ಪದ್ಮಾವತಿ ಮಾತನಾಡದಂತೆ ಕೈ ಹಿಡಿದುಕೊಂಡು ಕೆಳಗೆ ಕರೆದುಕೊಂಡು ಬಂದರು.

ಬೆಂಗಳೂರು(ಮೇ.19): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಅಕೃತ ಸರ್ಕಾರಿ ಕಾರ್ಯಕ್ರಮದಲ್ಲೇ ಬಿಬಿಎಂಪಿ ಸದಸ್ಯೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆಯಾದ ಮಂಜುಳಾ ಎನ್.ಸ್ವಾಮಿ ಅವರ ಸೀರೆ ಎಳೆದಾಡಿ ಕಾಂಗ್ರೆಸ್ ಕಾರ್ಯಕರ್ತರು ದೌರ್ಜನ್ಯ ಮೆರೆದ ಘಟನೆ ನಡೆದಿದೆ.

ರಾಜರಾಜೇಶ್ವರಿ ನಗರ ಕ್ಷೇತ್ರದ ಲಗ್ಗೆರೆ ವಾರ್ಡ್‌ನಲ್ಲಿ 800 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಭಾಷಣದ ಬಳಿಕ ಮಂಜುಳಾ ಎನ್. ಸ್ವಾಮಿ ತಮ್ಮ ಅಹವಾಲು ಹೇಳಿಕೊಳ್ಳಲು ಮೈಕ್ ಬಳಿ ಹೋಗಿ ನಿಂತರು. ಈ ವೇಳೆ ಅಡ್ಡಗಟ್ಟಿದ ಮೇಯರ್ ಜಿ. ಪದ್ಮಾವತಿ ಮಾತನಾಡದಂತೆ ಕೈ ಹಿಡಿದುಕೊಂಡು ಕೆಳಗೆ ಕರೆದುಕೊಂಡು ಬಂದರು.

ಈ ವೇಳೆ ತಮಗೆ ಆದ ಅನ್ಯಾಯದ ಬಗ್ಗೆ ಮಂಜುಳಾ ಎನ್. ಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಲು ಮುಂದಾದರು. ಈ ವೇಳೆ ಅಡ್ಡಗಟ್ಟಿದ ಸ್ಥಳೀಯ ಶಾಸಕ ಮುನಿರತ್ನ ಬೆಂಬಲಿಗರು ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ತಡೆಯಲು ಯತ್ನಿಸಿದರು.

ಜೆಪಿ ಪಾರ್ಕ್ ವಾರ್ಡ್ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸುನಂದಾ ಅವರ ತಂಡವು ಸುದ್ಧಿವಾಹಿನಿಗಳಿಗೆ ಬೈಟ್ ನೀಡುತ್ತಿದ್ದ ಮಂಜುಳಾ ಎನ್.ಸ್ವಾಮಿ ಅವರ ಬಳಿ ಬಂದು ಏಕಾಏಕಿ ಸ್ಥಳೀಯ ಶಾಸಕ ಮುನಿರತ್ನ ಪರ ಘೋಷಣೆ ಕೂಗುತ್ತಾ ಹಲ್ಲೆಗೆ ಮುಂದಾದರು. ಈ ವೇಳೆ ಸುನಂದಾ ಅವರ ತಂಡದ ಮಹಿಳೆಯೊಬ್ಬರು ಸೀರೆ ಎಳೆದಿದ್ದಲ್ಲದೇ ಹಲ್ಲೆ ನಡೆಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸಿದರು. ಬಳಿಕವೂ ಸುದ್ದಿಗಾರರೊಂದಿಗೆ ಮಾತನಾಡಲು ಅವಕಾಶ ನೀಡದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಸಹಕಾರದೊಂದಿಗೆ ಮಂಜುಳಾ ಅವರನ್ನು ಕರೆದೊಯ್ದು ಸ್ಥಳೀಯ ಸರ್ಕಾರಿ ಶಾಲೆಗೆ ಹಾಕಿ ಬೀಗ ಹಾಕಿದರು. ಮಾಧ್ಯಮದವರು ಒಳಗೆ ಹೋಗದಂತೆ ಗೇಟು ಬಾಗಿಲು ಮುಚ್ಚಿದರು.

ಕಡೆಗಣನೆಆರೋಪ

ಲಗ್ಗೆರೆ ವಾರ್ಡ್ ಕಾರ್ಪೋರೇಟರ್ ಆಗಿ ಆಯ್ಕೆಯಾದಾಗಿನಿಂದ ಶಾಸಕ ಮುನಿರತ್ನ ಬೆಂಬಲಿಗರು ಕಿರುಕುಳ ನೀಡುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಸಲು ಬಿಡುತ್ತಿಲ್ಲ ಎಂದು ಕಾರ್ಪೋರೇಟರ್ ಮಂಜುಳಾ ಆರೋಪಿಸಿದರು. ಅಲ್ಲದೆ ವಾರ್ಡ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ನೀಡುವುದಿಲ್ಲ. ಶಿಷ್ಟಾಚಾರಕ್ಕಾದರೂ ಬ್ಯಾನರ್‌ಗಳಲ್ಲಿ ನನ್ನ ಪೋಟೊ ಹೆಸರು ಬಳಸುವುದಿಲ್ಲ ಎಂದು ಅಳಲು ತೋಡಿಕೊಂಡರು. ಈ ಬಗ್ಗೆ ವೇದಿಕೆಯಲ್ಲಿ ಮಾತನಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವಕಾಶ ನೀಡಲಿಲ್ಲ. ಸುದ್ದಿಗಾರರೊಂದಿಗೆ ಹೇಳಿಕೊಳ್ಳಲು ಹೋದರೆ ಸುಖಾ ಸುಮ್ಮನೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗುವುದು ಎಂದು ಹೇಳಿದರು.