ಜೈಪುರ[ಆ.27]: ರಾಜಸ್ಥಾನದ ಚಿತ್ತೋರ್ಘರ್ ನಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವ ಪೊಲೀಸ್ ಅಧಿಕಾರಿಯೊಬ್ಬರಿಗೆ ತಮ್ಮ ಪ್ರೀ ವೆಡ್ಡಿಂಗ್ ವಿಡಿಯೋ ಬಹುದೊಡ್ಡ ಸಂಕಷ್ಟವಾಗಿ ಪರಿಣಮಿಸಿದೆ. ತಾನು ಮದುವೆಯಾಗಲಿರುವ ಯುವತಿಯೊಂದಿಗೆ ಪೊಲೀಸ್ ಅಧಿಕಾರಿ ಸುಂದರವಾದ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದು, ಇದರಲ್ಲಿ ದಾಖಲಾದ ದೃಶ್ಯವೊಂದರಿಂದ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇದು ಹೇಗಾಯ್ತು? ಪೊಲೀಸ್ ಅಧಿಕಾರಿ ಮಾಡಿದ್ದೇನು? ಇಲ್ಲಿದೆ ವಿವರ

ರಾಜಸ್ಥಾನದ ಮಾಂಡಕಿಯಾದ SHO ಧನ್ ಪತ್ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್ ಸೂಟ್ ಮಾಡಿಸಲು ಮುಂದಾಗಿದ್ದಾರೆ. ಿದರ ಅನ್ವಯ ತಾನು ಮದುವೆಯಾಗಲಿರುವ ಹುಡುಗಿಯೊಂದಿಗೆ ವಿಡಿಯೋ ಶೂಟ್ ಮಾಡಿಸಿಕೊಂಡಿದ್ದಾನೆ. ಆದರೆ ಇದರಲ್ಲಿರುವ ಒಂದು ದೃಶ್ಯದಲ್ಲಿ, ಪೊಲೀಸ್ ಅಧಿಕಾರಿಯಾಗಿರುವ ಧನ್ ಪತ್, ಮದುವೆಯಾಗಲಿರುವ ಹುಡುಗಿಯನ್ನು ಟ್ರಾಫಿಕ್ ನಿಯಮ ಉಲ್ಲಂಘಿಸಿದಕ್ಕಾಗಿ ರಸ್ತೆಯಲ್ಲಿ ನಿಲ್ಲಿಸುತ್ತಾನೆ. ಈ ವೇಳೆ ಪೊಲೀಸ್ ಅಧಿಕಾರಿಯಿಂದ ತಪ್ಪಿಸಿಕೊಳ್ಳಲು ಯುವತಿ ಆತನಿಗೆ ಲಂಚ ನೀಡುತ್ತಾಳೆ, ಇದನ್ನು ಪೊಲೀಸ್ ಸ್ವೀಕರಿಸುತ್ತಾನೆ. 

ಸಾಲದೆಂಬಂತೆ ಈ ದೃಶ್ಯದಲ್ಲಿ ಯುವತಿ ಖುದ್ದು, ತನ್ನ ಕೈಯ್ಯಾರೆ ಪೊಲೀಸ್ ಅಧಿಕಾರಿಯ ಜೇಬಿಗೆ ಹಣ ಹಾಕುತ್ತಾಳೆ ಹಾಗೂ ಪರ್ಸ್ ತೆಗೆದುಕೊಂಡು ಹೋಗುತ್ತಾಳೆ. ಮುಂದಿನ ದೃಶ್ಯದಲ್ಲಿ ಪರ್ಸ್ ಮರಳಿಸುವ ನೆಪದಲ್ಲಿ ಪೊಲೀಸ್ ಅಧಿಕಾರಿಯನ್ನು ಮತ್ತೆ ಆ ಯುವತಿ ಭೇಟಿಯಾಗುತ್ತಾಳೆ. ಇನ್ನು ಈ ಎರಡೂ ದೃಶ್ಯಗಳಲ್ಲಿ ಪೊಲೀಸ್ ಅಧಿಕಾರಿ ತನ್ನ ಸಮವಸ್ತ್ರದಲ್ಲಿರುತ್ತಾನೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಧನ್ ಪತ್ ಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ನಲ್ಲಿ ಪ್ರೀ ವೆಡ್ಡಿಂಗ್ ಸೂಟ್ ನಲ್ಲಿ ಪೊಲೀಸ್ ಅಧಿಕಾರಿ ತಾನು ಮದುವೆಯಾಗಲಿರುವ ಹುಡುಗಿಯ ವಾಹನ ನಿಲ್ಲಿಸಿ, ಲಂಚ ಪಡೆಯುತ್ತಿದ್ದಾನೆ. ಇಂತಹ ವಿಡಿಯೋವನ್ನು ಖುದ್ದು ಓರ್ವ ಪೊಲೀಸ್ ಅಧಿಕಾರಿ ಶೂಟ್ ಮಾಡಿಸಿರುವುದು ಧೌರ್ಭಾಗ್ಯ. ಈ ಮೂಲಕ ಕಾನೂನು ಉಲ್ಲಂಘನೆಯಾಗಿದೆ. ಇಂತಹ ಚಟುವಟಿಕೆ ಪೊಲೀಸ್ ಸಮವಸ್ತ್ರ ಹಾಗೂ ಇಲಾಖೆಯ ಘನತೆ ಕೆಡಿಸುತ್ತದೆ. ಹೀಗಾಗಿ ಈ ಪ್ರಕರಣ ಸಂಬಂಧ ತನಿಖೆ ನಡೆಸಲಾಗುವುದು ಎಂದಿದ್ದಾರೆ