ಲಕ್ನೋ[ಮೇ.10]: ಮೇ ತಿಂಗಳು ಆರಂಭವಾಗುತ್ತಿದ್ದಂತೆಯೇ ವಾತಾವರಣದಲ್ಲಿ ಶಾಖ ಏರಿಕೆ ಕಂಡಿದೆ. ತಾಪಮಾನ ಹೆಚ್ಚುತ್ತಿದ್ದಂತೆಯೇ ಮನೆಗಳಲ್ಲಿ ಫ್ಯಾನ್ ಹಾಗೂ ಕೂಲರ್ ಬಳಕೆಯೂ ಹೆಚ್ಚಲಾರಂಭಿಸಿದೆ. ಜನರು ಸೆಕೆ ತಡೆಯಲಾರದೆ ಕಂಗಾಲಾಗಿದ್ದಾರೆ. ನೀರಿನ ಸಮಸ್ಯೆಯೂ ತಲೆದೋರಿದೆ. ಆದರೆ ಯಾವತ್ತಾದರೂ ದೇವರಿಗೂ ಸೆಕೆಯಾಗಬಹುದೆಂದು ನೀವು ಅಂದುಕೊಂಡಿದ್ದೀರಾ? ಇದು ಕೊಂಚ ಅಚ್ಚರಿ ಮೂಡಿಸಿದರೂ ಇದು ನಂಬಲೇಬೇಕು.

ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ದೇವಸ್ಥಾನವೊಂದರಲ್ಲಿ ದೇವರು ಹಾಗೂ ಮೂರ್ತಿಗಳಿಗೂ ಸೆಕೆಯಾಗಲಾರಂಭಿಸಿದೆ. ಹೀಗಂತ ಅಲ್ಲಿನ ಅರ್ಚಕರೇ ಹೆಳಿದ್ದಾರೆ. ಇದೇ ಕಾರಣದಿಂದ ದೇವಸ್ಥಾನದಲ್ಲಿರುವ ಮೂರ್ತಿಗಳಿಗೆಲ್ಲಾ ಸೆಕೆಯಾಗದಂತೆ ಫ್ಯಾನ್ ಹಾಕಲಾಗಿದೆ. ಇಲ್ಲಿನ ಸಿದ್ಧಿ ವಿನಾಯಕ ಗಣೇಶ ಮಂದಿರದ ಅರ್ಚಕ ಸುರ್ಜೀತ್ ಕುಮಾರ್ ದುಬೆ ಪ್ರತಿಕ್ರಿಯಿಸುತ್ತಾ ದೇವರಿಗೂ ಸೆಕೆಯಾಗುತ್ತದೆ. ಅವರು ಕೂಡಾ ಮನುಷ್ಯರಂತೆಯೇ, ಹೀಗಾಗಿ ದೇವರಿಗೆ ಫ್ಯಾನ್ ಹಾಗೂ ಕೂಲರ್ ವ್ಯವಸ್ಥೆ ಮಾಡಿದ್ದೇವೆ. ಸೆಕೆಯಿಂದ ಕಾಪಾಡಲು ತೆಳು ಬಟ್ಟೆಗಳನ್ನು ಹೊದಿಸುತ್ತಿದ್ದೇವೆ ಎಂದಿದ್ದಾರೆ.