ಹಾಸನ [ಆ.27]: ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ನೆರೆ ಬಗ್ಗೆ ಚರ್ಚಿಸಲು ಕೂಡಲೇ ಮುಖ್ಯಮಂತ್ರಿಗಳು ವಿಧಾನ ಸಭೆ ಅಧಿವೇಶನ ಕರೆಯಬೇಕು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಪ್ರವಾಹ ಉಂಟಾಗಿದೆ. ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ಮಳೆಯಿಂದ ಸಾಕಷ್ಟು ಹಾನಿ ಉಂಟಾಗಿದೆ. ಆದ್ದರಿಂದ ವಿಧಾನಸಭೆ ಅಧಿವೇಶನ ಕರೆಯುವುದು ಅಗತ್ಯವಾಗಿದೆ. ರಾಜ್ಯದ ನೆರೆ ಪರಿಸ್ಥಿತಿ ಬಗ್ಗೆ ವಿಪಕ್ಷ ನಾಯಕರನ್ನೂ ಕರೆದು ಮಾತನಾಡಿ ನಂತರ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಬೇಕು. ಇದರಿಂದ ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯಲು ಸಾಧ್ಯ ಎಂದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಎಂಎಫ್ ಬಗ್ಗೆ ಮಾತನಾಡಲ್ಲ: ನಾನು ಕೆಎಂಎಫ್ ಚುನಾವಣೆ ಬಗ್ಗೆ ಮಾತನಾಡುವುದಿಲ್ಲ. ಈಗ ರಾಜಕೀಯ ಮಾತನಾಡುವ ಸಮಯವಲ್ಲ. ಜನರು ಸಂಕಷ್ಟದಲ್ಲಿ ಇದ್ದಾರೆ. ನಾನು ಉತ್ತರ ಕರ್ನಾಟಕ ಪ್ರವಾಸ ಮಾಡಿದ್ದು, ಹಾಸನ, ಮಡಿಕೇರಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಸಾಕಷ್ಟು ಹಾನಿಯಾಗಿದೆ. ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಪರಿಹಾರ ನೀಡುವುದಕ್ಕೆ ಆದ್ಯತೆ ನೀಡಬೇಕಾಗಿದೆ ಎಂದರು. 

ನಾನು ಚೀಫ್ ಆಫೀಸರ್ ಕರೆಯಲು ಬೆಲ್  ಮಾಡಿದೆ. ಅದನ್ನು ತಪ್ಪಾಗಿ ಕೆಲವರು ಅಪಪ್ರಚಾರ ಮಾಡಿದರು. ನಮ್ಮ ಹೊಳೆನರಸೀಪುರ ಬಳಿ ಹರಿಯುವ ಹೇಮಾವತಿ ನದಿಗೆ ತಡೆಗೋಡೆ ನಿರ್ಮಿಸದಿದ್ದರೆ ಹೊಳೆನರಸೀಪುರ ಅರ್ಧ ಕೊಚ್ಚಿಹೋಗೋದು. ಈ ಬಗ್ಗೆ  ಹಿಂದೆ ಸಾಕಷ್ಟು ಟೀಕೆ ಮಾಡಲಾಯಿತು. ತಡೆಗೋಡೆ ಮಾಡಿದ್ದು ಸೂಕ್ತವಾಗಿದೆ ಎಂದು ಈಗ ಹೇಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.