ಬೆಂಗಳೂರು ವಿವಿ ಕುಲಪತಿ ಹುದ್ದೆ ವಿಚಾರವಾಗಿ ಸರ್ಕಾರದ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಶುರುವಾಗಿದೆ. ಹೌದು. ಇದಕ್ಕೆ ಕಾರಣವಾಗಿರೋದು ರಾಜ್ಯಪಾಲ ವಜುಭಾಯ್ ವಾಲಾ ಅವರ ನಡೆ. ಸರ್ಕಾರ ಸೂಚಿಸಿದ್ದ ಹೆಸರನ್ನ ತಿರಸ್ಕರಿಸಿರುವ ಗವರ್ನರ್ ನಡೆಯಿಂದ ಸರ್ಕಾರಕ್ಕೆ ಮುಖಭಂಗವಾಗಿದ್ದರೂ, ಅದೇ ಹೆಸರನ್ನ ಪುನಃ ರಾಜ್ಯಪಾಲರಿಗೆ ಸೂಚಿಸಲು ಸರ್ಕಾರ ಮುಂದಾಗಿದೆ.
ಬೆಂಗಳೂರು(ಜೂ.16): ಬೆಂಗಳೂರು ವಿವಿ ಕುಲಪತಿ ಹುದ್ದೆ ವಿಚಾರವಾಗಿ ಸರ್ಕಾರದ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಶುರುವಾಗಿದೆ. ಹೌದು. ಇದಕ್ಕೆ ಕಾರಣವಾಗಿರೋದು ರಾಜ್ಯಪಾಲ ವಜುಭಾಯ್ ವಾಲಾ ಅವರ ನಡೆ. ಸರ್ಕಾರ ಸೂಚಿಸಿದ್ದ ಹೆಸರನ್ನ ತಿರಸ್ಕರಿಸಿರುವ ಗವರ್ನರ್ ನಡೆಯಿಂದ ಸರ್ಕಾರಕ್ಕೆ ಮುಖಭಂಗವಾಗಿದ್ದರೂ, ಅದೇ ಹೆಸರನ್ನ ಪುನಃ ರಾಜ್ಯಪಾಲರಿಗೆ ಸೂಚಿಸಲು ಸರ್ಕಾರ ಮುಂದಾಗಿದೆ.
ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ನೇಮಕ ವಿಚಾರ ಮತ್ತಷ್ಟು ಕಗ್ಗಂಟಾಗಿದೆ. ಸರ್ಚ್ ಕಮಿಟಿ ಶಿಫಾರಸ್ಸು ಮಾಡಿದ್ದ ಹೆಸರುಗಳ ಪೈಕಿ ರಾಜ್ಯ ಸರ್ಕಾರ ಸೂಚಿಸಿದ್ದ ಹೆಸರಿಗೆ ರಾಜ್ಯಪಾಲರು ಸಮ್ಮತಿ ವ್ಯಕ್ತಪಡಿಸಿಲ್ಲ. ಪ್ಯಾನಲ್ನಲ್ಲಿದ್ದ ಮತ್ತೊಬ್ಬ ಪ್ರಾಧ್ಯಾಪಕರ ಹೆಸರನ್ನು ರಾಜ್ಯಪಾಲರು ಸೂಚಿಸಿ ಸರ್ಕಾರಕ್ಕೆ ಕಡತ ವಾಪಸ್ ಕಳಿಸಿದ್ದಾರೆ ಎಂದು ಸುವರ್ಣ ನ್ಯೂಸ್'ಗೆ ಉನ್ನತ ಮೂಲಗಳಿಂದ ತಿಳಿದುಬಂದಿದೆ. ರಾಜ್ಯಪಾಲರ ಈ ನಿರ್ಧಾರ ಸರ್ಕಾರದೊಂದಿಗೆ ಸಂಘರ್ಷಕ್ಕೆಡೆ ಮಾಡಿಕೊಡುವ ಸಾಧ್ಯತೆಗಳಿವೆ.
ಬೆಂಗಳೂರು ವಿವಿ ಕುಲಪತಿ ನೇಮಕ ಸಂಬಂಧ ರಚನೆಯಾಗಿದ್ದ ಸರ್ಚ್ ಕಮಿಟಿ ಒಟ್ಟು ಮೂವರ ಹೆಸರನ್ನ ಶಿಫಾರಸ್ಸು ಮಾಡಿತ್ತು. ಯುವಿಸಿಇ ಪ್ರಿನ್ಸಿಪಾಲ್ ವೇಣುಗೋಪಾಲ್, ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿರೋ ಸಂಗಮೇಶ್ವರ ಪಾಟೀಲ್, ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನಾಗಭೂಷಣ್ ಅವರ ಹೆಸರು ಪ್ಯಾನಲ್ನಲ್ಲಿತ್ತು. ಈ ಪೈಕಿ ಸರ್ಕಾರ ಸಂಗಮೇಶ್ವರ ಪಾಟೀಲ್ ಅವರ ಹೆಸರನ್ನು ಸೂಚಿಸಿ ರಾಜ್ಯಪಾಲರಿಗೆ ಕಡತ ಕಳಿಸಿತ್ತು.
ಸಂಗಮೇಶ್ವರ್ ಪಾಟೀಲ್ ಹೆಸರು ಕೈ ಬಿಟ್ಟ ರಾಜ್ಯಪಾಲರು
ಸರ್ಚ್ ಕಮಿಟಿ ಮಾಡಿದ್ದ ಶಿಫಾರಸ್ಸಿನ ಪೈಕಿ ಸರ್ಕಾರ ಸೂಚಿಸಿದ್ದ ಸಂಗಮೇಶ್ವರ ಪಾಟೀಲ್ ಅವರ ಹೆಸರಿಗೆ ರಾಜ್ಯಪಾಲ ವಜುಭಾಯ್ ವಾಲಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವೇಣುಗೋಪಾಲ್ ಹೆಸರಿಗೆ ರಾಜ್ಯಪಾಲರ ಅನುಮೋದನೆ!
ಬೆಂಗಳೂರು ವಿಶ್ವವಿದ್ಯಾಲಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ವೇಣುಗೋಪಾಲ್ ಅವರ ಹೆಸರನ್ನು ರಾಜ್ಯಪಾಲ ವಜುಭಾಯ್ ವಾಲಾ ಅವರು ಅನುಮೋದಿಸಿದ್ದಾರೆ. ಸರ್ಕಾರದ ಜತೆ ಸಮಾಲೋಚಿಸದೆಯೇ ವೇಣುಗೋಪಾಲ್ ಅವರ ಹೆಸರನ್ನು ರಾಜ್ಯಪಾಲರು ಸೂಚಿಸಿದ್ದಾರೆ. ಹೀಗಾಗಿ ಅವರ ಹೆಸರಿಗೆ ಸರ್ಕಾರ ಸಮ್ಮತಿ ವ್ಯಕ್ತಪಡಿಸಿಲ್ಲ.
ಸದ್ಯದಲ್ಲೇ ಸಂಗಮೇಶ್ವರ ಪಾಟೀಲ್ ಅವರ ಹೆಸರನ್ನೇ ಪುನಃ ರಾಜ್ಯಪಾಲರಿಗೆ ಕಳಿಸಲಿದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.
ವರದಿ: ಜಿ.ಮಹಾಂತೇಶ್, ಸುವರ್ಣನ್ಯೂಸ್
