ತುಮಕೂರು(ಸೆ.15): ಸರ್ಕಾರಿ ಅಧಿಕಾರಿಗಳು ಮಾಡುವ ಕೆಲಸದ ಬಗ್ಗೆ ಸಾಕಷ್ಟು ಆಕ್ಷೇಪಗಳಿವೆ. ಅಕ್ರಮವನ್ನು ಬಯಲಿಗೆಳೆಯಬೇಕಾದವರು ಮಾಡಬಾರದ್ದು ಮಾಡಿ ಹಾಳು ಮಾಡುವುದು ಗೊತ್ತೇ ಇದೆ. ಆದರೆ ಗುತ್ತಿಗೆ ಅಧಿಕಾರಿಯೊಬ್ಬ ಪ್ರಾಮಾಣಿಕತೆ ಮರೆದಿದ್ದಕ್ಕೆ ಎಂಥಾ ಭಾಗ್ಯ ಸಿಕ್ಕಿದೆ ಗೊತ್ತಾ. ನೀವು ಮಾಡಿದ್ದು ತಪ್ಪು ಅಂತಾ ಹೇಳಿದ್ದಕ್ಕೆ ಅಧಿಕಾರಿಯ ಕೈಯನ್ನೇ ಕಟ್​ ಮಾಡಲಾಗಿದೆ. ಇದು ಜಂಗಲ್​ರಾಜ್​, ಯಾಕಂದ್ರೆ ನೋವು ಅನುಭವಿಸುತ್ತಿರುವ ಅಧಿಕಾರಿಯ ನೆರವಿಗೆ ಯಾರೂ ಬಂದಿಲ್ಲ. ಮಾಡಿದ ಒಳ್ಳೇ ಕೆಲಸಕ್ಕೆ ಪಡಬಾರದ ಯಾತನೆ ಪಡುತ್ತಿದ್ದಾರೆ.

ಕೆಲಸ ಗುತ್ತಿಗೆಯಾದರೂ ಪ್ರಾಮಾಣಿಕತೆ ಮರೆದಿದ್ದ!: ನಿಷ್ಠಾವಂತ ಕೆಲಸಕ್ಕೆ ಸಿಕ್ಕಿದ್ದು ಆಸ್ಪತ್ರೆ ಸೇರೋ ದೌರ್ಭಾಗ್ಯ!

ತುಮಕೂರು ಜಿಲ್ಲೆಯ ಕುಣಿಗಲ್​ ತಾಲೂಕಿನಲ್ಲಿ ನರೇಗಾ ಯೋಜನೆಯ ಟೆಕ್ನಿಕಲ್​ ಕನ್ಸಲ್ಟೆಂಟ್​ ಇಂಜನಿಯರ್ ಆಗಿರೋ ಶ್ರೀನಿವಾಸ್, ಕೆಲಸದಲ್ಲಿ ಕಟ್ಟುನಿಟ್ಟು. ಮಾಡ್ತಿರೋ ಕೆಲಸ ಸರ್ಕಾರಿ ಕೆಲಸವಲ್ಲ. ಆದ್ರೂ ಇವರು ಪ್ರಾಮಾಣಿಕತೆ ಮೆರೆದಿದ್ದರು. ನರೇಗಾ ಯೋಜನೆಯಲ್ಲಿ ಅವ್ಯವಹಾರ ಪತ್ತೆ ಹಚ್ಚಿದ್ದೇ ಇವರಿಗೆ ಮುಳುವಾಯಿತು. ಭ್ರಷ್ಟ ಗುತ್ತಿಗೆದಾರರು ಇವರ ಕೈಯನ್ನೇ ಕಟ್ ಮಾಡಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಯ ಗುಣಮಟ್ಟ ಪರೀಕ್ಷಿಸಿ ಪಿಡಿಒಗೆ ವರದಿ ಕೊಡೋದು ಇವರಿಗಿದ್ದ ಕೆಲಸ. ಅದನ್ನು ಕಟ್ಟು ನಿಟ್ಟಾಗಿ ಮಾಡಿದ್ದರು. ಕೆಲವು ಕಂಟ್ರಾಕ್ಟರ್ ಗಳು ದುಡ್ಡು ಮಾಡಲು ಬೇಕಾಬಿಟ್ಟಿ ಕೆಲಸ ಮಾಡಿದ್ದರು. ಈ ಅವ್ಯವಹಾರ ಪತ್ತೆ ಹಚ್ಚಿದ ಶ್ರೀನಿವಾಸ್, ಬಿಡುಗಡೆಯಾಗಬೇಕಾಗಿದ್ದ ಹಣವನ್ನು ಕಡಿತಗೊಳಿಸಿದ್ದರು. ಇದ್ರಿಂದ ಕುಪಿತಗೊಂಡ ಕಂಟ್ರಾಕ್ಟರ್​ ಕೇಶವ್​ ಮತ್ತು ಮಂಜುನಾಥ್​, ಸೋಮವಾರ ಕೆಲಸ ಮುಗಿಸಿ ಕುಣಿಗಲ್​ನಿಂದ ಮಾಗಡಿಗೆ ಬರುತ್ತಿದ್ದ ಶ್ರೀನಿವಾಸ್ ಅವರನ್ನು ಅಡ್ಡಗಟ್ಟಿ ಕೈ ಕತ್ತರಿಸಿ ಪರಾರಿಯಾಗಿದ್ದಾರೆ.

ಈ ಸಂಬಂಧ ಕುದೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ ಕುಟುಂಬ ಶ್ರೀನಿವಾಸ್​ರನ್ನು ಬೆಂಗಳೂರಿನ ಬಸವೇಶ್ವರನಗರದಲ್ಲಿರುವ ಪುಣ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಆಸ್ಪತ್ರೆಯಲ್ಲಿ ಮಲಗಿರೋ ಶ್ರೀನಿವಾಸ್​ರನ್ನು ಇದುವರೆಗೂ ಸಂಬಂಧಿಸಿದವರು ಬಂದು ವಿಚಾರಿಸಿಲ್ಲ. ನೀವು ಒಳ್ಳೇ ಕೆಲಸ ಮಾಡಿದ್ದೀರಿ ನಿಮ್ಮೊಂದಿಗೆ ನಾವಿದ್ದೇವೆ ಅನ್ನೋ ಅಭಯವನ್ನೂ ಕೊಟ್ಟಿಲ್ಲ. ಜೊತೆಗೆ ಹಲ್ಲೆ ನಡೆಸಿದ ಕಂಟ್ರಾಕ್ಟರ್ ಗಳನ್ನೂ ಬಂಧಿಸಿಲ್ಲ. ಸರ್ಕಾರಿ ಅಧಿಕಾರಿಗಳು ಶ್ರೀನಿವಾಸ್​ ಮಾಡಿರುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದರೋ ಗೊತ್ತಿಲ್ಲ. ಆದರೆ ಗುತ್ತಿಗೆ ಆಧಾರದ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ್​ ಒಳ್ಳೇ ಕೆಲಸ ಮಾಡಿದ್ದಾರೆ. ಆದರೆ ಅವರ ಬೆನ್ನಿಗೆ ಯಾರು ನಿಂತಿಲ್ಲವಲ್ಲ ಎನ್ನುವುದೇ ವಿಪರ್ಯಾಸ.