ಬೆಂಗಳೂರು[ಜು.21]: ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಎರಡು ಬಾರಿ ನಿರ್ದೇಶನ ನೀಡಿದರೂ ಅದನ್ನು ಪರಿಗಣಿಸದ ಮೈತ್ರಿ ಸರ್ಕಾರದ ವಿರುದ್ಧ ರಾಜ್ಯಪಾಲರು ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ.

ರಾಜ್ಯಪಾಲ ವಿ.ಆರ್‌. ವಾಲಾ ಅವರು ರಾಜ್ಯ ರಾಜಕೀಯದ ಪರಿಸ್ಥಿತಿ ಕುರಿತು ಕೇಂದ್ರ ಗೃಹ ಕಾರ್ಯದರ್ಶಿಗೆ ವರದಿ ನೀಡಿದ್ದಾರೆ. ಕರ್ನಾಟಕದಲ್ಲಿನ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗಳಿಗೆ ಎರಡು ಬಾರಿ ಸೂಚನೆ ನೀಡಲಾಗಿತ್ತು. ಆದರೂ ರಾಜ್ಯ ಸರ್ಕಾರ ಸೂಚನೆಯನ್ನು ಪಾಲನೆ ಮಾಡದೆ ಉಲ್ಲಂಘನೆ ಮಾಡಿದೆ.

ಕರ್ನಾಟಕದಲ್ಲಿ ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ರಾಜ್ಯಪಾಲರು ವರದಿಯಲ್ಲಿ ತಿಳಿಸಿದ್ದಾರೆ. ರಾಜಕೀಯ ಬೆಳವಣಿಗೆ ಜತೆಗೆ ವಿಶ್ವಾಸಮತ ನಿರ್ಣಯ ಕುರಿತು ಸದನದಲ್ಲಿ ನಡೆದ ಕಲಾಪ ಕುರಿತು ವಿಸ್ತೃತವಾಗಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜಭವನದ ವಿಶೇಷ ಅಧಿಕಾರಿ ರಮೇಶ್‌ ಅವರು ಸದನದ ಕಲಾಪವನ್ನು ವೀಕ್ಷಿಸಿ ಸಲ್ಲಿಸಿದ ವರದಿಯ ಆಧಾರದ ಮೇಲೆ ಕೇಂದ್ರಕ್ಕೆ ರಾಜ್ಯಪಾಲರು ತಮ್ಮದೇ ವರದಿಯನ್ನು ನೀಡಿದ್ದಾರೆ. ಮೈತ್ರಿ ಸರ್ಕಾರದ 15 ಶಾಸಕರು ತಮ್ಮ ಬಳಿ ಬಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಸ್ಪೀಕರ್‌ ಕಚೇರಿಗೆ ಹೋಗಿದ್ದ ವೇಳೆ ಸಭಾಧ್ಯಕ್ಷರು ಇರಲಿಲ್ಲ. ಹೀಗಾಗಿ ವಿಧಾನಸಭೆಯ ಕಾರ್ಯದರ್ಶಿಗೆ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಅದರ ಪ್ರತಿಯನ್ನು ಸಹ ಸಲ್ಲಿಕೆ ಮಾಡಿದ್ದಾರೆ. ಅಲ್ಲದೇ, ಸರ್ಕಾರಕ್ಕೆ ಬೆಂಬಲ ನೀಡಿದ್ದ ಇಬ್ಬರು ಪಕ್ಷೇತರರು ಸಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ ಎಂದು ಹೇಳಲಾಗಿದೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

224 ಸದಸ್ಯರ ಪೈಕಿ ಸದ್ಯಕ್ಕೆ ಸಮ್ಮಿಶ್ರ ಸರ್ಕಾರದ ಜತೆಗೆ 101 ಸದಸ್ಯರು ಇದ್ದು, ಬಹುಮತಕ್ಕೆ 113 ಸದಸ್ಯರ ಅಗತ್ಯ ಇದೆ. ಆದರೆ, ಶಾಸಕರು ರಾಜೀನಾಮೆ ನೀಡಿರುವ ಕಾರಣ ಅಲ್ಪಮತಕ್ಕೆ ಕುಸಿದಿದೆ. ಸರ್ಕಾರಕ್ಕೆ ಬಹುಮತ ಇಲ್ಲದ ಕಾರಣ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳದಂತೆ ಸೂಚನೆ ನೀಡಲಾಗಿದೆ. ಆದರೂ ವರ್ಗಾವಣೆ ಸೇರಿದಂತೆ ಕೆಲವು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ ಎಂದು ವರದಿಯಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.

ವರದಿಯಲ್ಲೇನಿದೆ?

1. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ

2. ಬಹುಮತ ಸಾಬೀತಿಗೆ 2 ಬಾರಿ ಸೂಚನೆ ಕೊಟ್ಟಿದ್ದೆ. ಸರ್ಕಾರದ ಆದೇಶ ಪಾಲಿಸಿಲ್ಲ

3. ಬಹುಮತ ಇಲ್ಲದೆ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳಬೇಡಿ ಎಂದಿದ್ದೆ

4. ಆದರೆ, ಸರ್ಕಾರ ನೌಕರರ ವರ್ಗಾವಣೆ ಸೇರಿ ಕೆಲ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ

5. ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಿದ ವಿಸ್ತೃತ ವರದಿಯಲ್ಲಿ ಗೌರ್ನರ್‌ ವಿವರಣೆ