ಉತ್ತರಾಖಂಡ[ಫೆ.23]: ಒಂದೆಡೆ ದೇಶ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಕಳೆದುಕೊಂಡ ದುಃಖದಲ್ಲಿದೆ. ಆದರೆ ಇತ್ತ ಉತ್ತರಾಖಂಡ್‌ನ ಹರಿದ್ವಾರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಹುತಾತ್ಮರನ್ನು ಗೇಲಿ ಮಾಡಿರುವ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಹಾಡೊಂದನ್ನು ಹಾಕಲಾಗಿದ್ದು, ಈ ವೇಳೆ ನೋಟುಗಳನ್ನು ಎಸೆಯಲಾಗಿದೆ. ಇಲ್ಲಿನ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಮಗ ವೀರೇಂದ್ರ ರಾವತ್ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರೆಂಬುವುದು ಗಮನಾರ್ಹ ವಿಚಾರ. 

ಫೆ. 22 ರಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹಾಡು ಹಾಡುತ್ತಿದ್ದ ಗಾಯಕರ ಮೇಲೆ ಮಾತ್ರವಲ್ಲದೇ, ಮುಖ್ಯ ಅತಿಥಿ ವಿರೆಂದ್ರ ರಾವತ್ ಮೇಲೂ ಕಾರ್ಯಕರ್ತರು ನೋಟುಗಳನ್ನು ಎಸೆದಿದ್ದಾರೆ. ಆದರೆ ಕಾರ್ಯಕರ್ತರು ಹೀಗೆ ವರ್ತಿಸುತ್ತಿದ್ದರೂ, ಅವರನ್ನು ತಡೆಯದ ವಿರೇಂದ್ರ ರಾವತ್ ಖುಷಿಯಲ್ಲಿ ನಕ್ಕಿದ್ದು ಮತ್ತಷ್ಟು ಟೀಕೆಗೆ ಕಾರಣವಾಗಿದೆ. 

ಇನ್ನು ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಿರೇಂದ್ರ ರಾವತ್ 'ಇದೊಂದು ಶ್ರದ್ಧಾಂಜಲಿ ಸಭೆ ಹಾಗೂ ಈ ಸಭೆಯ ಮೂಲಕ 56 ಇಂಚಿನ ಎದೆಯುಳ್ಳ ಪ್ರಧಾನಿ ಮೋದಿಯನ್ನು ಎಬ್ಬಿಸಲು ಇಚ್ಛಿಸುತ್ತೇನೆ' ಎಂದಿದ್ದಾರೆ.

ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಈ ಬಲಿದಾನವನ್ನು ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುವುದು ಉಲ್ಲೇಖನೀಯ. ಕೆಲ ದಿನಗಳ ಹಿಂದಷ್ಟೇ ಬಿಜೆಪಿ ನಾಯಕ ಹುತಾತ್ಮ ಯೋಧನ ಚಿತೆಯ ಬಳಿ ಚಪ್ಪಲಿ ಹಾಕಿ ಕುಳಿತಿದ್ದರೆಂಬ ವಿಚಾರ ಭಾರೀ ವಿವಾದ ಸೃಷ್ಟಿಸಿತ್ತು. ಕಾಂಗ್ರೆಸ್ ಕೂಡಾ ಇದನ್ನು ಕಟುವಾಗಿ ಖಂಡಿಸಿತ್ತು.