ಜೈಪುರ : ರಾಜಸ್ಥಾನದಲ್ಲಿ ಕಳೆದ ಡಿಸೆಂಬರ್ 7 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 99 ಸ್ಥಾನ ಪಡೆದುಕೊಂಡು ಅಧಿಕಾರ ಗದ್ದುಗೆಗೆ ಏರಿದ್ದ ಕಾಂಗ್ರೆಸ್ ಗೆ ಇದೀಗ ಮತ್ತೊಂದು ಸ್ಥಾನ ಸೇರ್ಪಡೆಯಾಗಿದೆ. 

ಇಲ್ಲಿನ ರಾಮ್ ಗರ್ ಕ್ಷೇತ್ರದಲ್ಲಿ ಜನವರಿ 28 ರಂದು ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು,  ಕಾಂಗ್ರೆಸ್ ಅಭ್ಯರ್ಥಿ ಸಫಿಯಾ ಜುಬಿರ್ ಭರ್ಜರಿ ಜಯಭೇರಿ ಭಾರಿಸಿದ್ದಾರೆ.  ಬಿಜೆಪಿ ಅಭ್ಯರ್ಥಿ ಸುಕ್ವಂತ್ ಸಿಂಗ್ ಅವರನ್ನು 12,228 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. 

ಈ ಮೂಲಕ ರಾಜಸ್ಥಾನ 200 ವಿಧಾನಸಭಾ ಕ್ಷೇತ್ರಗಳ ಪೈಕಿ 100 ಸ್ಥಾನಗಳು ಕಾಂಗ್ರೆಸ್ ಪಾಲಾದಂತಾಗಿದೆ. ಸದ್ಯ ಆರ್ ಎಲ್ ಡಿಯೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಸರ್ಕಾರ ರಚನೆ ಮಾಡಿದ್ದು, ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಮತ್ತೊಂದು ಸ್ಥಾನ ಸೇರಿ ಕಾಂಗ್ರೆಸ್  ಸುರಕ್ಷಿತತೆಯನ್ನು ಕಾಪಾಡಿಕೊಂಡಂತಾಗಿದೆ. 

ರಾಮ್ ಗರ್ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಫಿಯಾ ಜುಬಿರ್  ಒಟ್ಟು 83,311 ಮತಗಳನ್ನು ಪಡೆದರು, ಬಿಜೆಪಿ ಅಭ್ಯರ್ಥಿ ಸುಕ್ವಂತ್ ಸಿಂಗ್ 71,083 ಮತಗಳ ಪಡೆದಿದ್ದಾರೆ. ಇನ್ನು ಇದೇ ಕ್ಷೇತ್ರಕ್ಕೆ ಮೂರನೇ ಅಭ್ಯರ್ಥಿಯಾಗಿ ಬಿಎಸ್ ಪಿಯ ಜಗತ್ ಸಿಂಗ್ 24,856 ಮತ ಪಡೆದಿದ್ದಾರೆ.  

ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಎಸ್ ಪಿ ಅಭ್ಯರ್ಥಿ ನಿಧನದಿಂದಾಗಿ ಕಳೆದ ಡಿಸೆಂಬರ್ 7 ರಂದು ನಡೆಯಬೇಕಿದ್ದ ಚುನಾವಣೆ ಮುಂದೂಡಲಾಗಿದ್ದು, ಜನವರಿ 28 ರಂದು ಚುನಾವಣೆ ನಡೆಸಲಾಗಿತ್ತು.  ಇದೀಗ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಗೆಲುವು ಪಡೆದು ರಾಮ್ ಗರ್ ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ.