ಹುಬ್ಬಳ್ಳಿ[ಮೇ.04]: ಚಿಂಚೋಳಿ ಹಾಗೂ ಕುಂದಗೋಳ ಎರಡೂ ವಿಧಾನಸಭಾ ಕ್ಷೇತ್ರದ ಉಪಚನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಕುರಿತು ಒಳ್ಳೆಯ ಬೆಂಬಲ ವ್ಯಕ್ತವಾಗುತ್ತಿದ್ದು ಗೆಲುವು ಖಚಿತ ಎಂದರು. ಸುಮಲತಾ ಮನೆಯಲ್ಲಿ ಕಾಂಗ್ರೆಸ್‌ನ ಚಲುವರಾಯಸ್ವಾಮಿ ಊಟ ಮಾಡಿರುವ ಕುರಿತು ತಮ್ಮ ಹೇಳಿಕೆ ಪುನರುಚ್ಛರಿಸಿದ ಸಿದ್ದರಾಮಯ್ಯ, ಚಲುವರಾಯಸ್ವಾಮಿ ಅವರನ್ನು ಅಮಾನತು ಮಾಡುವಂತೆ ಯಾರೂ ಪತ್ರ ಬರೆದಿಲ್ಲ. ನಿಮ್ಮ ಮನೆಯಲ್ಲಿ ಊಟ ಮಾಡಿದರೆ ತಪ್ಪೇನ್ರಿ, ಅದು ಅಶಿಸ್ತು ಆಗುತ್ತದೆಯಾ? ಎಂದು ಮಾಧ್ಯಮದವರಿಗೆ ಪ್ರಶ್ನೆ ಮಾಡಿದರು.

5 ಕೋಟಿ ಎಲ್ಲಿಂದ ಕೊಡ್ತಾರೆ?:

ಶಿವಾನಂದ ಬೆಂತೂರು ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಕುಸುಮಾವತಿ ಶಿವಳ್ಳಿ ಬಳಿ .5 ಪೈಸೆ ಇಲ್ಲ, ಅಂತಹ ಸ್ಥಿತಿಯಲ್ಲಿದ್ದಾರೆ. ಪಕ್ಷವೇ ಅವರ ಚುನಾವಣಾ ವೆಚ್ಚ ಭರಿಸುತ್ತಿದೆ. ಅವರೆಲ್ಲಿಂದ ನಮಗೆ 5 ಕೋಟಿ ಕೊಡುತ್ತಾರೆ? ಈ ರೀತಿ ಆರೋಪ ಮಾಡಿರುವ ಶಿವಾನಂದ ಬೆಂತೂರು ಮುಖಕ್ಕೆ ಉಗೀಬೇಕಿತ್ತು. ಅದು ಕೇವಲ ಕೋಪದಿಂದ ಮಾತನಾಡಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.