ನವದೆಹಲಿ(ಆ.03): ಕಣಿವೆ ರಾಜ್ಯಕ್ಕೆ ಹೆಚ್ಚುವರಿ ಸೇನೆ ರವಾನೆ ಹಾಗೂ 35ಎ ಕಲಂ, 370ನೇ ವಿಧಿ ರದ್ದತಿ ಕುರಿತು ಹರಡಿರುವ ವದಂತಿಗಳ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಕಣಿವೆಯಲ್ಲಿ ರಾಜ್ಯದಲ್ಲಿ ಯಾವುದೇ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ನವದೆಹಲಿಯಲ್ಲಿ ಪತ್ರಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೈ ನಾಯಕರು, ಸದ್ಯದ ಪರಿಸ್ಥಿತಿಯಲ್ಲಿ ಕಣಿವೆ ರಾಜ್ಯದಲ್ಲಿ ಯಾವುದೇ ದುಸ್ಸಾಹಸಕ್ಕೆ ಕೈ ಹಾಕಿದರೂ ಅದು ಗಂಭೀರ ಪರಿಣಾಮ ಬೀರಲಿದೆ ಎಂದು ಮೋದಿ ಸರ್ಕಾರವನ್ನು ಎಚ್ಚರಿಸಿದರು.

ಈ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಕೇಂದ್ರ ಸರ್ಕಾರ ಏನು ಮಾಡಲಿದೆ ಎಂಬುದು ಯಾರಿಗೂ ತಿಳಿದಿಲ್ಲ  ಎಂದು ಅಸಮಾಧಾನ ಹೊರಹಾಕಿದರು. ಸರ್ಕಾರ ಯಾವುದೇ ದುಸ್ಸಾಹಸಕ್ಕೆ ಮುಂದಾದರೆ ಉಂಟಾಗಬಹುದಾದ ಘೋರ ಪರಿಣಾಮಗಳ ಕುರಿತು ಕಾಂಗ್ರೆಸ್ ಚಿಂತಿವಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.