Asianet Suvarna News Asianet Suvarna News

ನಗರ ಸ್ಥಳೀಯ ಚುನಾವಣೆ:ನಿಟ್ಟುಸಿರು ಬಿಟ್ಟ ಕಾಂಗ್ರೆಸ್

ಸಮ್ಮಿಶ್ರ ಸರ್ಕಾರ ರಚನೆಯಾದ ನಂತರವೂ ನೆಲೆ ಭದ್ರಪಡಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೆ ನಗರಗಳಲ್ಲಿ ಹಿನ್ನಡೆಯಾಗಿದೆ. ಅರೆನಗರ ಪ್ರದೇಶಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ. ತನ್ಮೂಲಕ ಗ್ರಾಮೀಣ ಭಾಗದಲ್ಲಿ ಪಕ್ಷ ಈಗಲೂ ಭದ್ರ ಎಂಬ ಸಂದೇಶ ಸಿಕ್ಕಿದೆ. ಮೈತ್ರಿ ಧರ್ಮ ಪಾಲಿಸುತ್ತಲೇ ಹಳೆ ಮೈಸೂರು ಭಾಗದಲ್ಲಿ ಅಸ್ತಿತ್ವ ಕಾಪಾಡಿಕೊಳ್ಳಲು ಸೂಕ್ತ ಉಪಾಯ ಮಾಡಬೇಕಾಗಿದೆ.

Congress touches its victory line in Local Body Election 2018
Author
Bengaluru, First Published Sep 4, 2018, 9:08 AM IST

ಬೆಂಗಳೂರು (ಸೆ.04): ಬಹುಮತ ಗಳಿಸುವಲ್ಲಿ ವಿಫಲವಾಗಿದ್ದರೂ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾದ ಕಾಂಗ್ರೆಸ್ ಧೋರಣೆಗೆ ಜನಸಾಮಾನ್ಯರು ಕುಪಿತಗೊಂಡಿದ್ದಾರೆ ಎಂಬುದು ತಪ್ಪು ಗ್ರಹಿಕೆ ಎಂದು ಸ್ಥಳೀಯ ಸಂಸ್ಥೆಗಳ ಚುನಾವಣೆ
ನಿರೂಪಿಸಿದೆ ಎಂಬ ದೊಡ್ಡ ಸಮಾಧಾನವನ್ನು ಈ ಫಲಿತಾಂಶ ಕಾಂಗ್ರೆಸ್‌ಗೆ ನೀಡಿದೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಗಳಿಸಿದ ಸ್ಥಾನಗಳ ಸಂಖ್ಯೆ ಹಾಗೂ ಮತ ಗಳಿಕೆ ಪ್ರಮಾಣ ಸರಿಸುಮಾರು ಕಳೆದ ಬಾರಿಯಷ್ಟೇ ಇರುವುದರಿಂದ ಕಾಂಗ್ರೆಸ್ ದೊಡ್ಡ ಸಾಧನೆ ಮಾಡಿದೆ ಎಂದು ಹೇಳಿಕೊಳ್ಳುವಂತಹ ಸ್ಥಿತಿಯಂತೂ ಇಲ್ಲ. ‘ಸಮ್ಮಿಶ್ರ ಸರ್ಕಾರಕ್ಕೆ ಜನ ಮನ್ನಣೆಯಿಲ್ಲ. ಆದರೂ, ಅಪವಿತ್ರ ಮೈತ್ರಿ ಮಾಡಿಕೊಳ್ಳಲಾಗಿದೆ. ಇದಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ’ ಎಂದು ಪ್ರತಿಪಕ್ಷವಾದ ಬಿಜೆಪಿ ವಾದಿಸಿತ್ತು.

ಸ್ಥಳೀಯ ಸಂಸ್ಥೆ ಚುನಾವಣೆ ಈ ಮಾತನ್ನು ಹುಸಿಗೊಳಿಸಿದೆ. ಸಮ್ಮಿಶ್ರ ಸರ್ಕಾರ ರಚನೆಯಾದ ನಂತರವೂ ಕಾಂಗ್ರೆಸ್ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ನಗರ ಪ್ರದೇಶಗಳಲ್ಲಿ ಕಾಂಗ್ರೆಸ್ ತುಸು ಹಿನ್ನಡೆ
ಸಾಧಿಸಿದ್ದರೂ, ಅರೆ ನಗರ ಪ್ರದೇಶಗಳಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ. ಪಟ್ಟಣ ಪಂಚಾಯತಿಗಳಲ್ಲಿನ ಈ ಪ್ರಾಬಲ್ಯ ಕಾಂಗ್ರೆಸ್‌ನ ಬೇರುಗಳು ಅರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಭದ್ರವಾಗಿವೆ
ಎಂಬುದನ್ನು ಸೂಚಿಸುತ್ತದೆ.

ಆದರೆ, ನಗರ ಪ್ರದೇಶಗಳಲ್ಲಿ ಮುಂದುವರೆದಿರುವ ಕಳಪೆ ಪ್ರದರ್ಶನ ಕಾಂಗ್ರೆಸ್ ಪಾಲಿಗೆ ಕಾಳಜಿಯ ವಿಷಯ. ಜೆಡಿಎಸ್ ಜತೆಗೆ ಫ್ರೆಂಡ್ಲಿ ಫೈಟ್ ಮಾಡಿದ್ದರೂ ನಗರ ಪ್ರದೇಶಗಳಲ್ಲಿ ಹಿನ್ನಡೆಯಿರುವುದು ಈ ಪ್ರದೇಶಗಳಲ್ಲಿ ತನ್ನ ಸಂಘಟನೆ ಬಗ್ಗೆ ಪಕ್ಷ ಹೆಚ್ಚಿನ ಗಮನ ನೀಡಬೇಕಾದ ಅನಿವಾರ್ಯತೆಯನ್ನು ಹೇಳುತ್ತಿದೆ. ಇನ್ನು ಜೆಡಿಎಸ್ ಜತೆಗಿನ ಮೈತ್ರಿ ಕಾಂಗ್ರೆಸ್ಗೆ ಕೆಲ ಪ್ರದೇಶಗಳಲ್ಲಿ ಅನುಕೂಲ ತಂದುಕೊಟ್ಟಿದ್ದರೂ, ಹಳೆ ಮೈಸೂರು ಭಾಗದಲ್ಲಿ ಪಕ್ಷ ದುರ್ಬಲಗೊಳ್ಳುತ್ತಿದೆ
ಎಂಬುದು ಎದ್ದು ಕಾಣುತ್ತಿದೆ.

ಇದು ಪಕ್ಷದ ಮೇಲೆ ದೂರಗಾಮಿ ಪರಿಣಾಮ ಬೀರುವುದು ಖಚಿತ. ಮೈತ್ರಿ ಧರ್ಮ ಪಾಲಿಸುತ್ತಲೇ ಹಳೆ ಮೈಸೂರು ಭಾಗದಲ್ಲಿ ತನ್ನ ಅಸ್ತಿತ್ವ ಕಾಪಾಡಿಕೊಳ್ಳಲು ಕಾಂಗ್ರೆಸ್ ಸೂಕ್ತ ಉಪಾಯವನ್ನು ಶೀಘ್ರ ಕಂಡುಕೊಳ್ಳಬೇಕಾದ
ಅನಿವಾರ್ಯತೆಯನ್ನು ಈ ಫಲಿತಾಂಶ ಸೂಚಿಸುತ್ತಿದೆ. ಆದರೆ, ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಫಲಿತಾಂಶ ಮೈತ್ರಿ ಕೂಟಕ್ಕೆ ಸಂತಸವನ್ನು ಹಾಗೂ ಹೊಸ ಹುರುಪನ್ನು ನೀಡಿರುವುದಂತೂ ನಿಜ.

ಕಾಂಗ್ರೆಸ್ ಹಾಗೂ ಜೆಡಿಎಸ್ ಸಮರ್ಪಕವಾಗಿ ಕ್ಷೇತ್ರಗಳನ್ನು ಹಂಚಿಕೊಂಡು ಸೂಕ್ತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕೂಟ ಬಿಜೆಪಿಗೆ ದೊಡ್ಡ ಕಂಟಕವಾಗುವುದರಲ್ಲಿ ಸಂಶಯವಿಲ್ಲ ಎಂಬುದನ್ನು ಈ ಫಲಿತಾಂಶದಿಂದ ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರರು ಆಯ್ಕೆಯಾಗಿದ್ದಾರೆ ಮತ್ತು ಈ ಪಕ್ಷೇತರರ ಪೈಕಿ ಹೆಚ್ಚಿನವರು ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿದ್ದವರೇ ಆಗಿದ್ದರು. ಬಹುಶಃ ಈಗ ಮತ್ತೆ ಕಾಂಗ್ರೆಸ್ ಅನ್ನು ಅವರು ಸೇರಬಹುದು. ಆದರೆ, ಟಿಕೆಟ್ ಹಂಚಿಕೆ ವೇಳೆ ಎಲ್ಲಾ ನಾಯಕರಲ್ಲಿ ಒಗ್ಗಟ್ಟು ಮೂಡದಿದ್ದರೆ ಪಕ್ಷಕ್ಕೆ ಹಾನಿಯಾಗುತ್ತದೆ ಎಂಬುದಂತೂ ಇದರಿಂದ ಸ್ಪಷ್ಟ. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಿರುವ ಕಾಂಗ್ರೆಸ್ ಈ ದಿಸೆಯಲ್ಲಿ ಎಚ್ಚರ ವಹಿಸಬೇಕು ಎಂಬ ಸಂದೇಶವನ್ನು ಈ ಫಲಿತಾಂಶ ರವಾನಿಸಿದೆ.

Follow Us:
Download App:
  • android
  • ios