ನವದೆಹಲಿ: ರಫೇಲ್ ಯುದ್ಧ ವಿಮಾನಗಳ ಖರೀದಿ ಸಂಬಂಧದ ಭಾರತ-ಫ್ರಾನ್ಸ್ ಒಪ್ಪಂದದಲ್ಲಿ ಗೌಪ್ಯತೆಯ ಷರತ್ತು ಇದೆ ಎಂಬುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಹಕ್ಕುಚ್ಯುತಿ ಗೊತ್ತುವಳಿ ಮಂಡನೆಗೆ ಅವಕಾಶ ಕೋರಿ ಕಾಂಗ್ರೆಸ್ ಮಂಗಳವಾರ ಲೋಕಸಭಾ ಸ್ಪೀಕರ್‌ಗೆ ನೋಟಿಸ್ ರವಾನಿಸಿದೆ. 

ಜುಲೈ 20 ರಂದು ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ ವೇಳೆ ರಫೇಲ್ ಖರೀದಿ ಒಪ್ಪಂದ ಮಾಹಿತಿ ಬಹಿರಂಗ ಮಾಡದಂತೆ ಗೌಪ್ಯತೆಯ ಷರತ್ತು ಇದೆ ಎಂದಿದ್ದರು.  

ಈ ಮೂಲಕ ಸುಳ್ಳು ಹೇಳಿ ಸದನವನ್ನು ಮಾತ್ರವಲ್ಲದೇ ಇಡೀ ದೇಶದ ದಿಕ್ಕು ತಪ್ಪಿಸಿದ್ದಾರೆ. ಅದೇ ರೀತಿ ಪ್ರಧಾನಿ ಮೋದಿ ಸದನಕ್ಕೆ ನೀಡಿರುವ ಮಾಹಿತಿ ಅಸತ್ಯವಾಗಿದ್ದು, ಸದನದ ದಿಕ್ಕುತಪ್ಪಿಸುವ ಉದ್ದೇಶ ಹೊಂದಿದೆ ಎಂದು ನೋಟಿಸ್ ನೀಡಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.