ಗೋವಾ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ನಲ್ಲಿ ಪುನರ್ 'ರಚನೆ ಪರ್ವ ಶುರುವಾಗಿದ್ದು, ಇದು ಪಕ್ಷದ ರೋಟಿನ್ ಆಗಿದ್ದು, ಕಾಲದಿಂದ ಕಾಲಕ್ಕೆ ಆಗಬೇಕಾದ ಬದಲಾವಣೆ ಎಂದು ಪಕ್ಷದ ಮುಖಂಡ ಮನೀಶ್ ತಿವಾರಿ ಹೇಳಿದ್ದಾರೆ.
ನವದೆಹಲಿ (ಏ.30): ಗೋವಾ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ನಲ್ಲಿ ಪುನರ್ ರಚನೆ ಪರ್ವ ಶುರುವಾಗಿದ್ದು, ಇದು ಪಕ್ಷದ ರೋಟಿನ್ ಆಗಿದ್ದು, ಕಾಲದಿಂದ ಕಾಲಕ್ಕೆ ಆಗಬೇಕಾದ ಬದಲಾವಣೆ ಎಂದು ಪಕ್ಷದ ಮುಖಂಡ ಮನೀಶ್ ತಿವಾರಿ ಹೇಳಿದ್ದಾರೆ.
ಇದರಲ್ಲಿ ಹೊಸದೇನೂ ಇಲ್ಲ. ಜನರು ಹೊಸ ಜವಾಬ್ದಾರಿಗಳನ್ನು ನೀಡಿದ್ದಾರೆ. ಹಾಗಾಗಿ ಪುನರ್ ರಚನೆ ಮಾಡಬೇಕಾಗಿದೆ ಎಂದು ತಿವಾರಿ ಹೇಳಿದ್ದಾರೆ.
ಗೋವಾ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ಸರ್ಕಾರ ರಚಿಸಲು ವೈಫಲ್ಯವಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ಸಚಿವ ಸ್ಥಾನದಿಂದ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ರನ್ನು ಕೈಬಿಡಲಾಗಿದೆ. ಅದೇ ರೀತಿ ರಾಹುಲ್ ಗಾಂಧಿಗೆ ಬಹಳ ಆಪ್ತ ಎನ್ನಲಾದ ಮಧುಸೂದನ್ ಮಿಸ್ತ್ರಿಯವರನ್ನೂ ಕೂಡಾ ಎಐಸಿಸಿ ಜನರಲ್ ಸೆಕ್ರೆಟರಿ ಸ್ಥಾನದಿಂದ ಹೊರಗಿಡಲಾಗಿದೆ. ಇದರಿಂದ ಪಕ್ಷದಲ್ಲಿ ಆಂತರಿಕ ಕಲಹ ಶುರುವಾಗಿದೆ ಎನ್ನಲಾಗಿತ್ತು.
ಕಳೆದ ವರ್ಷ ಮಧುಸೂದನ್ ಮಿಸ್ತ್ರಿಯವರನ್ನು ಉತ್ತರ ಪ್ರದೇಶ ಉಸ್ತುವಾರಿ ಸ್ಥಾನದಿಂದ ತೆಗೆದು ಹಾಕಿ ಅವರ ಸ್ಥಾನಕ್ಕೆ ಗುಲಾಂ ನಬಿ ಆಜಾದ್'ರನ್ನು ಕೂರಿಸಲಾಗಿತ್ತು. ಕಾಂಗ್ರೆಸ್ ಪಕ್ಷದ ಈ ನಡೆಯಿಂದ ಕಾಂಗ್ರೆಸ್ ಹೈ ಕಮಾಂಡ್ ಎಐಸಿಸಿಯನ್ನು ಪುನಾರಚಿಸಲು ನಿರ್ಧರಿದ್ದರು ಎನ್ನುವುದು ಸ್ಪಷ್ಟವಾಗಿತ್ತು. ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಜನರಲ್ ಸೆಕ್ರೆಟರಿಗಳ ಬದಲಾವಣೆ ಸೇರಿದಂತೆ ಸಾಕಷ್ಟು ಬದಲಾವಣೆಗಳು ಆಗಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಗೋವಾ ಚುನಾವಣಾ ಫಲಿತಾಂಶದ ನಂತರ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯೇರಿತು. ಈ ಸಂದರ್ಭದಲ್ಲಿ ದಿಗ್ವಿಜಯ್ ಸಿಂಗ್ ಪಾತ್ರದ ಬಗ್ಗೆ ವಿಮರ್ಶೆಗಳು ಕೇಳಿ ಬಂತು. ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮನೋಹರ್ ಪರ್ರಿಕರ್, ಸಿಂಗ್'ರವರು ಏನೂ ಮಾಡದೇ ಇದ್ದುದರಿಂದ ನನಗೆ ಸರ್ಕಾರ ರಚಿಸಲು ಸುಲಭವಾಯಿತು ಎಂದು ಸಾರ್ವಜನಿಕವಾಗಿ ಹೇಳಿದ್ದು ದಿಗ್ವಿಜಯ್ ಸಿಂಗ್ ಬಗ್ಗೆ ಇನ್ನಷ್ಟು ಅಸಮಾಧಾನ ಉಂಟಾಗಲು ಕಾರಣವಾಯಿತು.
ಕರ್ನಾಟಕದಲ್ಲೂ ದಿಗ್ವಿಜಯ್ ಸಿಂಗ್ ಸ್ಥಾನ ಬದಲಾಗಲಿದ್ದು, ಕಾಂಗ್ರೆಸ್ ಉಸ್ತುವಾರಿ ಸ್ಥಾನವನ್ನು ಕೇರಳದ ಕಾಂಗ್ರೆಸ್ ಸಂಸದ ವೇಣುಗೋಪಾಲ್ ಅಲಂಕರಿಸಲಿದ್ದಾರೆ. ಗೋವಾದಲ್ಲಿ ದಿಗ್ವಿಜಯ್ ಸಿಂಗ್ ಸ್ಥಾನವನ್ನು ಚೆಲ್ಲಾ ಕುಮಾರ್ ತುಂಬಲಿದ್ದಾರೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಜನರಲ್ ಸೆಕ್ರೆಟರಿಯಾಗಿ ಸಿಂಗ್ ರವರೇ ಮುಂದುವರೆಯಲಿದ್ದಾರೆ.
