Asianet Suvarna News Asianet Suvarna News

ಒಂದೇ ದೇಶ, ಒಂದೇ ತೆರಿಗೆ ನೀತಿಗೆ ಒತ್ತು: ರಾಹುಲ್‌

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಎನ್ನುವುದು ‘ಗಬ್ಬರ್‌ ಸಿಂಗ್‌ ಟ್ಯಾಕ್ಸ್‌’ ಎಂದು ಮತ್ತೆ ಮೂದಲಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದೊಡನೆ ಸ್ಟೇಟ್‌ ಜಿಎಸ್‌ಟಿ ಹಾಗೂ ಸೆಂಟ್ರಲ್‌ ಜಿಎಸ್‌ಟಿ ಎಂಬ ಎರಡು ತೆರಿಗೆ ಪದ್ಧತಿಗಳನ್ನು ರದ್ದುಗೊಳಿಸಿ ಒಂದೇ ತೆರಿಗೆಯನ್ನು ಜಾರಿಗೆ ತರುತ್ತೇವೆ ಎಂದು ಘೋಷಿಸಿದ್ದಾರೆ.

Congress President Rahul Gandhi promises change in Tax system

ಮೈಸೂರು : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಎನ್ನುವುದು ‘ಗಬ್ಬರ್‌ ಸಿಂಗ್‌ ಟ್ಯಾಕ್ಸ್‌’ ಎಂದು ಮತ್ತೆ ಮೂದಲಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದೊಡನೆ ಸ್ಟೇಟ್‌ ಜಿಎಸ್‌ಟಿ ಹಾಗೂ ಸೆಂಟ್ರಲ್‌ ಜಿಎಸ್‌ಟಿ ಎಂಬ ಎರಡು ತೆರಿಗೆ ಪದ್ಧತಿಗಳನ್ನು ರದ್ದುಗೊಳಿಸಿ ಒಂದೇ ತೆರಿಗೆಯನ್ನು ಜಾರಿಗೆ ತರುತ್ತೇವೆ ಎಂದು ಘೋಷಿಸಿದ್ದಾರೆ.

ಜನಾಶೀರ್ವಾದ ಯಾತ್ರೆಯ ಭಾಗವಾಗಿ ಶನಿವಾರ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೊಂದಿಗಿನ ಸಂವಾದ ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳು ಜಿಎಸ್‌ಟಿ ತೆರಿಗೆ ನೀತಿ ಎಷ್ಟರ ಮಟ್ಟಿಗೆ ಸರಿಯಿದೆ ಎಂದು ಕೇಳಿದಾಗ, ‘ಒಂದೇ ದೇಶ, ಒಂದೇ ತೆರಿಗೆ ನೀತಿ’ಗೆ ಒತ್ತು ಕೊಡುತ್ತೇವೆ ಎಂದು ರಾಹುಲ್‌ ಹೇಳಿದರು.

ಮೋದಿ ಅಧಿಕಾರಕ್ಕೆ ಬರುವ ಮುನ್ನ ವಿದೇಶಗಳಿಂದ ಕಪ್ಪು ಹಣ ವಾಪಸ್‌ ತರುವುದಾಗಿ ವಾಗ್ದಾನ ನೀಡಿದ್ದರು. ಈಗ ಎಷ್ಟುಹಣ ಹೊರ ಬಂದಿದೆ ಎಂದು ವಿದ್ಯಾರ್ಥಿನಿ ಆಯೇಷಾ ಮರ್ಯಾಂ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ರಾಹುಲ್‌, ದೇಶದ ಶೇ. 90 ರಷ್ಟುಕಪ್ಪು ಹಣ ಸ್ವಿಸ್‌ ಬ್ಯಾಂಕ್‌ ಖಾತೆ, ರಿಯಲ್‌ ಎಸ್ಟೇಟ್‌, ಚಿನ್ನದ ರೂಪದಲ್ಲಿದ್ದು ಅದರ ಬಗ್ಗೆ ಕ್ರಮ ಕೈಗೊಳ್ಳದೆ ಸಾಮಾನ್ಯ ಜನರಿಗೆ ಅನನುಕೂಲವಾದ ನೋಟು ಅಮಾನ್ಯೀಕರಣದಂತಹ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದರು.

ವಿವಿಗಳಲ್ಲಿ ಆರ್‌ಎಸ್‌ಎಸ್‌ ಹಸ್ತಕ್ಷೇಪ ; ವಿದ್ಯಾರ್ಥಿನಿ ನೇತ್ರಾವತಿ ಕೇಳಿದ ಸಂಶೋಧಕರ ಶಿಷ್ಯವೇತನ ಕಡಿತದ ಬಗ್ಗೆ ಉತ್ತರಿಸಿದ ರಾಹುಲ್‌, ಶಿಕ್ಷಣ ಕ್ಷೇತ್ರದಲ್ಲಿ ಯಾರ ಹಸ್ತಕ್ಷೇಪವೂ ಇರಬಾರದು. ಆದರೆ ವಿವಿಗಳಲ್ಲಿ ಇತ್ತೀಚೆಗೆ ಆರ್‌ಎಸ್‌ಎಸ್‌, ಬಿಜೆಪಿ ಹಸ್ತಕ್ಷೇಪ ಮಾಡುತ್ತಿದ್ದು ವೈವಿಧ್ಯತೆಯನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದರು.

ಜಾತಿ ಆಧರಿತವಾಗಿ ಏಕೆ ಯೋಜನೆ ರೂಪಿಸುತ್ತೀರಿ?

ವಿದ್ಯಾರ್ಥಿನಿ ಮಹದೇವಮ್ಮ ಎಂಬಾಕೆ ‘ಸರ್ಕಾರ ಯಾಕೆ ಜಾತಿ ಆಧಾರಿತವಾಗಿ ಯೋಜನೆ ರೂಪಿಸುತ್ತದೆ?’ ಎಂದು ಕನ್ನಡದಲ್ಲಿ ಕೇಳಿದಾಗ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಇಂಗ್ಲಿಷ್‌ಗೆ ಭಾಷಾಂತರಿಸಿದರು. ‘ಯಾವ ಸರ್ಕಾರ ಹಾಗೆ ಮಾಡುತ್ತಿದೆ’ ಎಂದು ರಾಹುಲ್‌ ಕೇಳಿದಾಗ, ಪರಮೇಶ್ವರ್‌ ‘ರಾಜ್ಯ ಸರ್ಕಾರ’ ಎಂದರು. ಕೂಡಲೇ ಈ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸುತ್ತಾರೆ ಎಂದು ರಾಹುಲ್‌ ಮೈಕ್‌ ಹಸ್ತಾಂತರಿಸಿದರು. ಆಗ ಸಿದ್ದರಾಮಯ್ಯ ಮಾತನಾಡಿ, ‘ನೋಡಮ್ಮ ನಮ್ಮ ಸಮಾಜ ಜಾತಿ ಆಧಾರಿತವಾಗಿದೆ. ಎಲ್ಲಿ ಅಸಮಾನತೆ, ಸಾಮಾಜಿಕ ನ್ಯಾಯ ಇರುವುದಿಲ್ಲವೋ ಅಲ್ಲಿ ನಾವು ನ್ಯಾಯ ಕೊಡಬೇಕು. ಈಗ ಮನೆಯಲ್ಲಿ ಒಂದು ಮಗು ಗಟ್ಟಿಮುಟ್ಟಾಗಿದ್ದು ಮತ್ತೊಂದು ಮಗು ದುರ್ಬಲವಾಗಿದ್ದಾಗ ನಾವು ದುರ್ಬಲ ಮಗುವಿನ ಕಡೆಗೆ ಗಮನ ಕೊಡುತ್ತೇವೆ ಅಲ್ಲವಾ.. ಅದೇ ರೀತಿ ಸಮಾಜದಲ್ಲಿ ಯಾರು ದುರ್ಬಲರಿದ್ದಾರೋ ಅವರಿಗೆ ಕಾರ್ಯಕ್ರಮ ಮಾಡಬೇಕಲ್ವಮ್ಮಾ...’ ಎಂದರು.ನೀವೇಕೆ ರಾಜಕೀಯ ಆಯ್ಕೆ ಮಾಡಿಕೊಂಡಿರಿ!

ಪ್ರಥಮ ಬಿಎಸ್ಸಿ ಯ ಎಂ.ಎನ್‌. ಅನ್ನಪೂರ್ಣ ‘ನೀವು ಯಾಕೆ ರಾಜಕೀಯ ಆಯ್ಕೆ ಮಾಡಿಕೊಂಡಿರಿ, ಏನನ್ನು ಸಾಧಿಸಲು?’ ಎಂದು ಪ್ರಶ್ನೆ ಎಸೆದರು. ಅದಕ್ಕೆ ರಾಹುಲ್‌, ‘ನಮ್ಮ ಕುಟುಂಬ ರಾಜಕೀಯ ಹಿನ್ನೆಲೆ ಹೊಂದಿರುವುದರಿಂದ ಹಲವು ವರ್ಷಗಳಿಂದ ರಾಜಕೀಯವೇ ನಮ್ಮ ಕಾರ್ಯಕ್ಷೇತ್ರವಾಗಿದೆ. ನನ್ನ ತಂದೆ ಕೊಲೆಯಾದ ಬಳಿಕ, ನಾನು ರಾಜಕೀಯ ಪ್ರವೇಶಿಸಿದೆ. ರಾಜಕೀಯವೇ ನನ್ನ ವೃತ್ತಿಯಲ್ಲ, ಅದೊಂದು ಜೀವನವಾಗಿದೆ. ನನಗೆ ಸ್ಥಾನಮಾನ ಸಿಕ್ಕರೆ ಭಾರತವನ್ನು ಪ್ರಜ್ವಲಿಸುವ ನಿಟ್ಟಿನಲ್ಲಿ ಕಾರ್ಯತತ್ಪರನಾಗುತ್ತೇನೆ ಎಂದು ತಿಳಿಸಿದರು.

ಸಂವಾದದ ಮಧ್ಯೆಯೇ ಆಫ್ರಿನ್‌ ಜತೆ ಸೆಲ್ಫಿ

ಸಂವಾದ ನಡೆಯುವ ವೇಳೆ ಎದ್ದುನಿಂತ ಆಫ್ರಿನಾ ಎಂಬ ವಿದ್ಯಾರ್ಥಿನಿ ತನ್ನ ಮೊಬೈಲ್‌ ತೋರಿಸಿ ಒಂದು ಸೆಲ್ಫಿ ತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದರು. ಆಗ ವೇದಿಕೆಯಿಂದ ಇಳಿದು ಬಂದ ರಾಹುಲ್‌ ಗಾಂಧಿ ಆಫ್ರಿನಾ ಜತೆ ಸೆಲ್ಫಿಗೆ ಸಾಥ್‌ ನೀಡಿದರು. ಕಾರ್ಯಕ್ರಮ ಮುಗಿದ ಬಳಿಕ ವಿದ್ಯಾರ್ಥಿ ಸಮೂಹದೆಡೆಗೆ ಬಂದಾಗ ವಿದ್ಯಾರ್ಥಿನಿಯರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

Follow Us:
Download App:
  • android
  • ios