ಬೆಂಗಳೂರು : ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಾಲೀಮು ಆರಂಭಿಸಿದ್ದು, ಶುಕ್ರವಾರ ಉಡುಪಿ-ಚಿಕ್ಕ ಮಗಳೂರು ಹಾಗೂ ದಕ್ಷಿಣ ಕನ್ನಡ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ಈ ವೇಳೆ ಉಡುಪಿ- ಚಿಕ್ಕ ಮಗಳೂರು ಲೋಕ ಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹಾಗೂ ಬಿ.ಕೆ. ಹರಿಪ್ರಸಾದ್ ಮತ್ತು ದಕ್ಷಿಣ ಕನ್ನಡಕ್ಕೆ ರಮಾನಾಥ ರೈ ಹೆಸರು ಪ್ರಸ್ತಾಪವಾಗಿದೆ. 

ಪಕ್ಷದ ರಾಜ್ಯ ಪ್ರಭಾರಿ ಕೆ.ಸಿ. ವೇಣುಗೋಪಾಲ ಹಾಗೂ ಇತರ ನಾಯಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಕ್ಷೇತ್ರದ ಅಭ್ಯರ್ಥಿ ಆಯ್ಕೆ, ಪಕ್ಷ ಸಂಘಟನೆ, ಚುನಾವಣಾ ತಯಾರಿ ಬಗ್ಗೆ ಚರ್ಚೆ ನಡೆಯಿತು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹಾಗೂ ಬಿ.ಕೆ.ಹರಿಪ್ರಸಾದ್ ಅವರ ಹೆಸರು ಪ್ರಸ್ತಾಪವಾಯಿತು.

ದಕ್ಷಿಣ ಕನ್ನಡಕ್ಕೆ ‘ರೈ’ ಸೈ: ಇನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಹೊಣೆಯನ್ನು ಮಾಜಿ ಸಚಿವ ರಮಾನಾಥ ರೈ ಅವರಿಗೆ ವಹಿಸಲಾಗಿದೆ. ಈ ಮಧ್ಯೆ, ಕ್ಷೇತ್ರ ದಿಂದ ರಮಾನಾಥ ರೈ ಅವರನ್ನೇ ಕಣಕ್ಕಿಳಿಸುವಂತೆ ಜಿಲ್ಲೆಯ ನಾಯಕರು ಬೆಂಬಲಿಸಿದ್ದಾರೆ. ಹಾಸನದಲ್ಲಿ ಮೈತ್ರಿಗೆ ವಿರೋಧ: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ಹಾಸನ ಜಿಲ್ಲಾ ಕಾಂಗ್ರೆಸ್ ನಾಯಕರಿಂದ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. 

ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಬಾರದು. ಒಂದು ವೇಳೆ ಬಿಟ್ಟುಕೊಟ್ಟರೆ ಅಲ್ಲಿ ಪಕ್ಷ ಉಳಿಯುವುದು ಕಟ್ಟವಾಗುತ್ತದೆ ಎಂದು ಮಾಜಿ ಸಚಿವ ಎ. ಮಂಜು ನೇತೃತ್ವದ ಸ್ಥಳೀಯ ನಾಯಕರು ಪಕ್ಷದ ನಾಯಕರಿಗೆ ಒತ್ತಡ ಹಾಕಿದ್ದಾರೆ. ಆದರೂ, ನಾಯಕರು ಈ ಬಗ್ಗೆ ಚುನಾವಣೆ ವೇಳೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರುವುದಾಗಿ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.