ಬೆಂಗಳೂರು [ಜು.3] :  ರಾಜ್ಯದಲ್ಲಿ ಆರಂಭವಾಗಿರುವ ಅತೃಪ್ತ ಕಾಂಗ್ರೆಸ್‌ ಶಾಸಕರ ರಾಜೀನಾಮೆ ಪರ್ವದ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಕೈವಾಡವಿದ್ದು, ರಾಜ್ಯದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಸುವ ಕುತಂತ್ರವನ್ನು ಬಿಜೆಪಿ ಹೈಕಮಾಂಡ್‌ ನಡೆಸಿದೆ ಎಂದು ಕಾಂಗ್ರೆಸ್‌ ನಾಯಕರು ಬಿಜೆಪಿ ಹೈಕಮಾಂಡ್‌ ವಿರುದ್ಧ ಮಂಗಳವಾರ ನೇರ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಂಗಳವಾರ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕ ಎಚ್‌.ಕೆ. ಪಾಟೀಲ್‌ ಹಾಗೂ ಸಚಿವರಾದ ಡಿ.ಕೆ. ಶಿವಕುಮಾರ್‌ ಮತ್ತು ಕೃಷ್ಣ ಬೈರೇಗೌಡ ಅವರು ಅತೃಪ್ತ ಶಾಸಕರ ರಾಜೀನಾಮೆ ಸಲ್ಲಿಕೆಯ ಹಿಂದೆ ಬಿಜೆಪಿ ರಾಷ್ಟ್ರೀಯ ನಾಯಕರ ಷಡ್ಯಂತ್ರವಿದೆ ಎಂದು ಆರೋಪಿಸಿದರು.

ಪುರಭವನದಲ್ಲಿ ನಡೆದ ಕಾರ್ಯಕ್ರಮವೊಂದರ ನಂತರ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಬಿಜೆಪಿಗೆ ಜನಾದೇಶ ದೊರಕಿಲ್ಲ. ಆದರೂ, ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ವಾಮಮಾರ್ಗ ಅನುಸರಿಸಲು ಮುಂದಾಗಿದೆ. ಅತೃಪ್ತ ಶಾಸಕರನ್ನು ಸೆಳೆಯುತ್ತಿಲ್ಲ. ಅವರಾಗೇ ಬಂದರೆ ಸರ್ಕಾರ ರಚಿಸುತ್ತೇವೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಇದು ಅಪ್ಪಟ ಸುಳ್ಳು. ವಾಸ್ತವವಾಗಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಆಪರೇಷನ್‌ ಕಮಲ ನಡೆಸಲಾಗುತ್ತಿದೆ. ಈ ಆಪರೇಷನ್‌ ಹಿಂದೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ನೇರ ಪಾತ್ರವಹಿಸಿದ್ದು, ಪ್ರಧಾನಿ ಮೋದಿ ಕೂಡ ಈ ಷಡ್ಯಂತ್ರದ ಭಾಗವಾಗಿದ್ದಾರೆ ಎಂದು ಆರೋಪಿಸಿದರು.

ಹಣ, ಅಧಿಕಾರದ ಆಮಿಷವೊಡ್ಡಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರನ್ನು ಸೆಳೆದು ಸರ್ಕಾರ ಬೀಳಿಸಲು ನೋಡುತ್ತಿದ್ದಾರೆ. ಈ ಹಿಂದೆ ಇಂತಹ ಪ್ರಯತ್ನ ಮಾಡಿ ವಿಫಲರಾಗಿದ್ದವರು ಈಗ ಮತ್ತೆ ಶುರು ಮಾಡಿಕೊಂಡಿದ್ದಾರೆ. ಈ ಕುತಂತ್ರದಲ್ಲಿ ಅಮಿತ್‌ ಶಾ ನೇರ ಭಾಗಿಯಾಗಿದ್ದಾರೆ. ಆದರೆ, ಈ ಬಾರಿಯೂ ಬಿಜೆಪಿಯವರ ಪ್ರಯತ್ನ ಫಲಿಸುವುದಿಲ್ಲ. ಸರ್ಕಾರ ಶೇ.100ರಷ್ಟುಸುಭದ್ರವಾಗಿದೆ ಎಂದರು.

ಸಚಿವ ಜಿ.ಟಿ.ದೇವೇಗೌಡ ಅವರು ಅಮಿತ್‌ಶಾ, ಮೋದಿ ಆಪರೇಷನ್‌ ಕಮಲ ಪ್ರಯತ್ನ ಮಾಡಿರಲಿಕ್ಕಿಲ್ಲ ಎಂದಿದ್ದಾರಲ್ಲಾ ಎಂಬ ಪ್ರಶ್ನೆಗೆ, ಅವರಿಗೆ ಮಾಹಿತಿ ಇಲ್ಲ ಅಂತ ಅನಿಸುತ್ತದೆ. ಅವರು ಮಾಹಿತಿ ಪಡೆದುಕೊಂಡು ಮಾತನಾಡಲಿ ಎಂದರು.

ಶಾಸಕಾಂಗ ಸಭೆಯ ಅಗತ್ಯವಿಲ್ಲ-ಸಿದ್ದು:

ಇನ್ನೂ 10 ಮಂದಿ ಶಾಸಕರು ರಾಜೀನಾಮೆ ಕೊಡುತ್ತಾರೆ ಅನ್ನೋ ಮಾತು ಕೇಳಿಬರುತ್ತಿವೆಯಲ್ಲಾ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಕೇವಲ ಮುಗುಳ್ನಕ್ಕರು. ಜತೆಗೆ, ರಾಜೀನಾಮೆ ನೀಡಿರುವ ಶಾಸಕರಾದ ಆನಂದ್‌ ಸಿಂಗ್‌ ಮತ್ತು ರಮೇಶ್‌ ಜಾರಕಿಹೊಳಿ ಇಬ್ಬರೂ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಅವರು ದೂರವಾಣಿ ಕರೆಗೆ ಸಿಕ್ಕಿಲ್ಲ. ಬೇರೆ ಯಾವ ಶಾಸಕರೂ ರಾಜೀನಾಮೆ ನೀಡುವುದಿಲ್ಲ. ಯಾರೂ ಬಿಜೆಪಿಗೂ ಹೋಗುವುದಿಲ್ಲ ಎಂದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ತುರ್ತು ಸಭೆ ಕರೆಯುತ್ತೀರಿ ಎಂಬ ಸುದ್ದಿ ಇದೆಯಲ್ಲಾ ಎಂಬ ಪ್ರಶ್ನೆಗೆ, ಯಾವ ತುರ್ತು ಸಭೆಯನ್ನೂ ಕರೆದಿಲ್ಲ, ಕರೆಯುವ ಅವಶ್ಯಕತೆಯೂ ಇಲ್ಲ. ಜನ ಬಿಜೆಪಿಯವರಿಗೆ ಬಹುಮತ ನೀಡದಿದ್ದರೂ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಪ್ರಯತ್ನ ಪಡುತ್ತಿದ್ದಾರೆ. ಆದರೆ, ಅದು ಫಲಿಸುವುದಿಲ್ಲ. ಸರ್ಕಾರ ಸುಭದ್ರವಾಗಿದೆ ಎಂದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ನಾಯಕ ಎಚ್‌.ಕೆ. ಪಾಟೀಲ್‌ ಸಹ ಕಾಂಗ್ರೆಸ್‌ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ರಾಷ್ಟ್ರೀಯ ನಾಯಕರ ಕೈವಾಡವಿದೆ. ಬಿಜೆಪಿ ರಾಜ್ಯದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರೆ, ಸಚಿವ ಡಿ.ಕೆ. ಶಿವಕುಮಾರ್‌ ಅವರು, ಈ ಆಪರೇಷನ್‌ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿದೆ. ಯಾರೂ ಇಲ್ಲಿ ಕಣ್ಣುಮುಚ್ಚಿ ರಾಜಕೀಯ ಮಾಡುತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.