Asianet Suvarna News Asianet Suvarna News

ತಂದೆಗೆ ಸ್ಥಾನ ಸಿಗದ್ದಕ್ಕೆ ಹುದ್ದೆ ತಿರಸ್ಕರಿಸಿದ ಪುತ್ರಿ ಸೌಮ್ಯರೆಡ್ಡಿ

ತಂದೆಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ರಾಮಲಿಂಗಾ ರೆಡ್ಡಿ ಪುತ್ರಿ, ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿ ತೀವ್ರ ಅಸಮಾಧಾನಗೊಂಡಿದ್ದಾರೆ. 

Congress MLA Sowmya Reddy Rejects Parliamentary Secretary Post
Author
Bengaluru, First Published Dec 22, 2018, 11:29 AM IST

ಬೆಂಗಳೂರು: ಶನಿವಾರ ನಡೆಯಲಿರುವ ಸಚಿವ ಸಂಪುಟ ಪುನಾರಚನೆಯಲ್ಲಿ ತಮ್ಮ ತಂದೆ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಹುದ್ದೆ ಕೈತಪ್ಪಿದ ಬೆನ್ನಲ್ಲೇ, ಅವರ ಪುತ್ರಿ, ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿ ತೀವ್ರ ಅಸಮಾಧಾನಗೊಂಡಿದ್ದಾರೆ. ಇದೇ ಕಾರಣಕ್ಕಾಗಿಯೇ ತಮಗೆ ನೀಡಲಾಗಿದ್ದ ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನು ಅವರು ತಿರಸ್ಕರಿಸಿದ್ದಾರೆ.

ನೂತನ ಸಚಿವರ ಪಟ್ಟಿಬಿಡುಗಡೆಯಾದ ಬೆನ್ನಲ್ಲೇ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಸೌಮ್ಯಾ ರೆಡ್ಡಿ, ‘ ಕಾಂಗ್ರೆಸ್‌ ಪಕ್ಷ ನನಗೆ ಜಯನಗರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಟಿಕೆಟ್‌ ನೀಡಿದ್ದು, ಕ್ಷೇತ್ರದ ಮತದಾರರು ನನಗೆ ಆಶೀರ್ವದಿಸಿದ್ದಾರೆ. ಜಯನಗರ ವಿಧಾನಸಭಾ ಕ್ಷೇತ್ರವನ್ನು ಮಾದರಿಯಯಾಗಿ ಅಭಿವೃದ್ಧಿ ಮಾಡಬೇಕಿದೆ. ನನಗೀಗ ಯಾವ ರೀತಿಯ ಸಂಸದೀಯ ಕಾರ್ಯದರ್ಶಿ ಹುದ್ದೆ ಸೇರಿದಂತೆ ಯಾವುದೇ ಹುದ್ದೆ ಬೇಡ. ಸದ್ಯಕ್ಕೆ ಕಾಂಗ್ರಸ್‌ ಪಕ್ಷಕ್ಕೆ ದುಡಿದವರಿಗೆ ಸ್ವಲ್ಪ ಹಿಂದೇಟು ಆಗುವುದು ಖಂಡಿತ. ಅದು ರಾಜಕೀಯದ ಒಂದು ಭಾಗ. ಆದರೆ ಈ ರೀತಿ ಪಕ್ಷಕ್ಕೆ ನಿಷ್ಠೆ ತೋರಿದವರಿಗೆ ಹಿಂದೇಟು ಆದರೆ ಬೇಸರವಾಗುತ್ತದೆ’.

‘ನಾನು ಮೊದಲನೇ ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದೇನೆ. ನನ್ನ ಕ್ಷೇತ್ರದ ಹಲವಾರು ಕೆಲಸಗಳನ್ನು ಮಾಡಲು ನನಗೆ ಇನ್ನೂ ಬಹಳ ಸಮಯ ಬೇಕಿದೆ. ಹೀಗಾಗಿ ನನಗೆ ನೀಡಿರುವ ಸಂಸದೀಯ ಕಾರ್ಯದರ್ಶಿ ಹುದ್ದೆ ಸದ್ಯಕ್ಕ ಬೇಡ. ಅದು ಯಾರಿಗೆ ಅವಶ್ಯಕತೆ ಇದೆ, ಅವರಿಗೆ ಪಕ್ಷ ಕೊಡಲಿ. ನಾನು ನನ್ನ ಕ್ಷೇತ್ರದ ಜನರಿಗಾಗಿ ಕೆಲಸ ಮಾಡಿ ಅವರ ಋುಣವನ್ನು ತೀರಿಸಬೇಕಿದೆ. ನನ್ನ ತಂದೆ ಎರಡು ಬಾರಿ ಡಿಸಿಸಿ ಅಧ್ಯಕ್ಷರಾಗಿ, 7 ಬಾರಿ ಶಾಸಕರಾಗಿ, ಬೆಂಗಳೂರಿನಲ್ಲಿ ಕಾಂಗ್ರೆಸ್‌ಗಾಗಿ ದುಡಿದಿದ್ದಾರೆ. ಕೇವಲ ಒಂದು ಶಾಸಕರಿಂದ ಈಗ 15ಕ್ಕೂ ಹೆಚ್ಚು ಶಾಸಕರು ಆಯ್ಕೆಯಾಗಲು ಶ್ರಮಿಸಿದ್ದಾರೆ. ಅವರನ್ನು ಮಂತ್ರಿಯಾಗಿ ನೋಡಲು ಇಷ್ಟಪಡುತ್ತೇನೆ. ಬೆಂಗಳೂರಿನ ಎಲ್ಲಾ 28 ಕ್ಷೇತ್ರದಲ್ಲೂ ಕಾಂಗ್ರೆಸ್‌ ಶಾಸಕರು ಗೆಲ್ಲಲು ಶ್ರಮಿಸಬೇಕಾದ ಅಗತ್ಯವಿದೆ’ ಎನ್ನುವ ಮೂಲಕ ತಮ್ಮ ತಂದೆಗೆ ಮಂತ್ರಿಗಿರಿ ನೀಡದೇ ಇರುವ ಪಕ್ಷದ ಹೈಕಮಾಂಡ್‌ ನಿರ್ಧಾರವನ್ನು ವಿರೋಧಿಸಿದ್ದಾರೆ.

Follow Us:
Download App:
  • android
  • ios