ಬೀದರ್: ಸಮ್ಮಿಶ್ರ ಸರ್ಕಾರ ಕುರಿತಾಗಿ ಕಾಂಗ್ರೆಸ್‌ನಲ್ಲಿ ಅಸಮಾಧಾನಗಳು ಭುಗಿಲೇಳುತ್ತಿರುವ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ ಎಂದೇ ಗುರುತಿಸಿಕೊಳ್ಳುವ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಜೆಡಿಎಸ್ ಶಾಸಕರ ಸಂಖ್ಯೆಯನ್ನು ನೆನಪಿಸಿರುವ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ‘ಹೆಗಲಮ್ಯಾಗ್ ಕೂತು ಕಿವೀಗ ಎಣ್ಣಿ ಬಿಟ್ರೆ ಅಂದೇ ಸಿಎಂ ಕುರ್ಚಿಯಿಂದ ಇಳಿಸ್ತೇವೆ’ ಎಚ್ಚರಿಕೆ ನೀಡುವ ಮೂಲಕ ಸರ್ಕಾರದ ದೋಸ್ತಿಯನ್ನು ಕೆದಕಿದ್ದಾರೆ. 

ಬ್ರಹ್ಮರ್ಷಿ ನಾರಾಯಣಗುರು ಜಯಂತಿಯಲ್ಲಿ ಮಾತನಾಡಿದ ಅವರು ‘ಕುಮಾರಸ್ವಾಮಿ ಕಡೆಯಿಂದ 37 ಶಾಸಕರು ಇದ್ದಾರೆ, ನಮ್ಮ ಕಡೆಯಿಂದ 80 ಮಂದಿ ಇದ್ದಾರೆ. ನಮ್ಮ ಹೆಗಲ ಮೇಲೆ ಆತ ಕುಂತಿದ್ದಾನೆ. ನಮ್ಮ ಕಿವಿಗೆ ಎಣ್ಣೆ ಹಾಕದೇ ಹೋದ್ರೆ ನಾವು 5 ವರ್ಷ ಸರ್ಕಾರ ನಡೆಸ್ತೇವೆ. 

ಎಣ್ಣೆ ಹಾಕಲು ಶುರು ಮಾಡಿದ್ರೆ ಆಗಲೇ ಇಳಿಸ್ತೇವೆ. ಅದರಲ್ಲಿ ಎರಡು ಮಾತಿಲ್ಲ ಎಂದು ತಮ್ಮ ಎಂದಿನ ಶೈಲಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಮತ್ತೇ ಮುಖ್ಯಮಂತ್ರಿ ಆದರೆ ಹಿಂದುಳಿದ ಬಡ ಜನ ಬೆಳೀತಾರ, ಸದೃಢ ಆಗ್ತಾರೆ ಎಂದೆಲ್ಲ ಸಂಚು ಮಾಡಿ ಸಿಎಂ ಸ್ಥಾನದಿಂದ ವಂಚಿತ ಮಾಡುವಂಥ ಕೆಲಸವನ್ನು ದುಷ್ಟಶಕ್ತಿಗಳು ಮಾಡಿರುವುದು ಶಾಶ್ವತ ಅಲ್ಲ. ಸೂರ್ಯ ಬರುವುದು ಎಷ್ಟು ಸತ್ಯವೋ ಸಿದ್ದರಾಮಯ್ಯ ಸಿಎಂ ಆಗೋದೂ ಅಷ್ಟೇ ಸತ್ಯ ಎಂದರು.