ಮಂತ್ರಿಗಿರಿಗಾಗಿ ಎಂಬಿ ಪಾಟೀಲ್‌ ಭಾರಿ ಲಾಬಿ

Congress MLA MB  Patil Makes Lobbying for Ministerial Post
Highlights

ಸರ್ಕಾರದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಹತ್ತಿರವಾಗುತ್ತಿದ್ದಂತೆ ಮಾಜಿ ಸಚಿವ ಎಂ.ಬಿ. ಪಾಟೀಲ್‌ ಸಚಿವ ಸ್ಥಾನಕ್ಕೆ ಕಸರತ್ತು ತೀವ್ರಗೊಳಿಸಿದ್ದು, ಶನಿವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒತ್ತಡ ಹಾಕಿದರು.

ಬೆಂಗಳೂರು :  ಸರ್ಕಾರದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಹತ್ತಿರವಾಗುತ್ತಿದ್ದಂತೆ ಮಾಜಿ ಸಚಿವ ಎಂ.ಬಿ. ಪಾಟೀಲ್‌ ಸಚಿವ ಸ್ಥಾನಕ್ಕೆ ಕಸರತ್ತು ತೀವ್ರಗೊಳಿಸಿದ್ದು, ಶನಿವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒತ್ತಡ ಹಾಕಿದರು.

ಶನಿವಾರ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ ಅತೃಪ್ತ ಶಾಸಕ ಎಂ.ಬಿ. ಪಾಟೀಲ್‌ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಿದ್ದರಾಮಯ್ಯ ಅವರೊಂದಿಗೆ ಗೌಪ್ಯವಾಗಿ ಮಾತುಕತೆ ನಡೆಸಿದರು. ಈ ವೇಳೆ ಸಚಿವ ಸಂಪುಟ ವಿಸ್ತರಣೆ ವೇಳೆ ತಮ್ಮ ಹೆಸರು ಪರಿಗಣಿಸುವಂತೆ ಒತ್ತಡ ಹೇರಲು ಮನವಿ ಮಾಡಿದರು ಎಂದು ತಿಳಿದುಬಂದಿದೆ. ಇವರ ಜತೆಗೆ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಅವರು ಸಹ ಪ್ರತ್ಯೇಕವಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಲಾಬಿ ನಡೆಸಿದರು.

ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಎಂ.ಬಿ.ಪಾಟೀಲ್‌ ಅತೃಪ್ತರ ಸಭೆಗಳನ್ನು ನಡೆಸುವ ಮೂಲಕ ಬಂಡಾಯ ಬಣದಲ್ಲಿ ಗುರುತಿಸಿಕೊಂಡಿದ್ದರು. ಸ್ವತಃ ಹೈಕಮಾಂಡ್‌ ಎಂ.ಬಿ.ಪಾಟೀಲ್‌ ಅವರನ್ನು ಕರೆಸಿ ಸಮಾಧಾನದಿಂದ ಇರುವಂತೆ ಹೇಳಿ ಕಳಿಸಿತ್ತು. ಇದರ ಬೆನ್ನಲ್ಲೇ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವಾಗ ಸಿದ್ದರಾಮಯ್ಯ ಅವರು ಎಂ.ಬಿ. ಪಾಟೀಲ್‌ ಅತೃಪ್ತರ ಸಭೆಗಳನ್ನು ನಡೆಸಿದ್ದು ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಎಂ.ಬಿ.ಪಾಟೀಲ್‌ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.

ಭೇಟಿ ವೇಳೆ ಎಂ.ಬಿ.ಪಾಟೀಲ್‌ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದು, ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ವೇಳೆ ಪರಿಗಣಿಸುವಂತೆ ಸಿದ್ದರಾಮಯ್ಯ ಬಳಿ ಅಳಲು ತೋಡಿಕೊಂಡರು. ಬಜೆಟ್‌ ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಂ.ಬಿ. ಪಾಟೀಲ್‌ ತೀವ್ರ ಒತ್ತಡ ಹಾಕಿದರು ಎಂದು ತಿಳಿದುಬಂದಿದೆ. ಜತೆಗೆ ತಮ್ಮ ಬೆಂಬಲಿಗರ ಪರವಾಗಿಯೂ ಬ್ಯಾಟ್‌ ಬೀಸಿರುವ ಅವರು ಪ್ರಮುಖ ನಿಗಮ-ಮಂಡಳಿಗಳನ್ನು ನೀಡುವಂತೆಯೂ ಪಟ್ಟು ಹಿಡಿದರು ಎನ್ನಲಾಗಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ವಿಚಾರ ಚರ್ಚೆ ಮಾಡಲು ಬಂದಿರಲಿಲ್ಲ. ಪ್ರಕೃತಿ ಚಿಕಿತ್ಸೆ ಕೇಂದ್ರದಲ್ಲಿ ಸಿದ್ದರಾಮಯ್ಯ ಅವರು ಚಿಕಿತ್ಸೆ ಪಡೆಯುವಾಗ ಅನೇಕರು ಭೇಟಿ ಮಾಡಿದ್ದರು. ಈ ವೇಳೆ ಭೇಟಿ ಮಾಡಿ ಆರೋಗ್ಯ ವಿಚಾರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದು ಭೇಟಿಯಾಗಿದ್ದೆ ಅಷ್ಟೇ ಎಂದು ಹೇಳಿದರು.

loader