ಮಂಗಳವಾರ ರಾಜ್ಯದ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಯ ಪರಿಶೀಲನಾ ಸಮಿತಿಯ ಸಭೆ ನಡೆಯುತ್ತಿರುವಾಗಲೇ ವಾಟ್ಸಾಪ್‌ಗಳಲ್ಲಿ ಕಾಂಗ್ರೆಸ್‌ನ 131 ಅಭ್ಯರ್ಥಿಗಳ ಪಟ್ಟಿಹರಿದಾಡುತ್ತಿತ್ತು.
ನವದೆಹಲಿ : ವಿಧಾನಸಭೆಯೇ ಆಗಲಿ ಲೋಕಸಭೆಯೇ ಆಗಲಿ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿಬಿಡುಗಡೆ ಮಾಡುವುದು ಕೇಂದ್ರ ಚುನಾವಣಾ ಸಮಿತಿಯ ಸಭೆಯ ಬಳಿಕವೇ. ಆದರೆ ಮಂಗಳವಾರ ರಾಜ್ಯದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯ ಪರಿಶೀಲನಾ ಸಮಿತಿಯ ಸಭೆ ನಡೆಯುತ್ತಿರುವಾಗಲೇ ವಾಟ್ಸಾಪ್ಗಳಲ್ಲಿ ಕಾಂಗ್ರೆಸ್ನ 131 ಅಭ್ಯರ್ಥಿಗಳ ಪಟ್ಟಿಹರಿದಾಡುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಇದು ಬಿಜೆಪಿ ಐಟಿ ಸೆಲ್ ಕೃತ್ಯವಾಗಿದ್ದು, ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕೇಂದ್ರ ಚುನಾವಣಾ ಸಮಿತಿಯ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರ ಸಹಿ ಮತ್ತು ಎಐಸಿಸಿಯ ಮುದ್ರೆಯನ್ನು ಈ ಪಟ್ಟಿಹೊಂದಿತ್ತು. ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿರುವ ಆಸ್ಕರ್ ಫರ್ನಾಂಡಿಸ್ ಅವರ ಆಪ್ತರಿಗೆ ಈ ಪಟ್ಟಿಯ ಬಗ್ಗೆ ಕೇಳಿದಾಗ ಅವರಿಗೆ ಅಚ್ಚರಿ ಆಗಿತ್ತು. ಬಳಿಕ ತಕ್ಷಣವೇ ಅವರು ಸಿಇಸಿ ಸಭೆಯೇ ಆಗಿಲ್ಲ. ಇದೊಂದು ಬೋಗಸ್ ಪಟ್ಟಿಎಂದು ಹೇಳಿದರು. ಅಷ್ಟರಲ್ಲಿ ಈ ನಕಲಿ ಪಟ್ಟಿವೈರಲ್ ಆಗಿತ್ತು.
ಬಿಜೆಪಿ ಐಟಿ ಸೆಲ್ ಕೃತ್ಯ:
ತಕ್ಷಣವೇ ಪ್ರತಿಕ್ರಿಯಿಸಿದ ರಾಜ್ಯ ಉಸ್ತುವಾರಿ, ಎಐಸಿಸಿ ಕಾರ್ಯದರ್ಶಿ ಮಧು ಯಕ್ಷಿ ಗೌಡ್, ಇದು ಬಿಜೆಪಿ ಐಟಿ ಸೆಲ್ ಕೃತ್ಯ. ನಾವು ಈ ಬಗ್ಗೆ ಪೊಲೀಸ್ ದೂರು ನೀಡುತ್ತೇವೆ. ಬಿಜೆಪಿಯವರು ಇಂತಹ ಫೇಕ್ ಸುದ್ದಿ ಸೃಷ್ಟಿಸುವಲ್ಲಿ ನಿಸ್ಸೀಮರು. ಕೇಂದ್ರ ಚುನಾವಣಾ ಸಮಿತಿಯ ಸಭೆಯೇ ನಡೆದಿಲ್ಲ. ಪ್ರಧಾನಿ ಮೋದಿ, ಕೇಂದ್ರ ಸಚಿವೆ ಸ್ಮೃತಿ ಇರಾನಿಯ ಶೈಕ್ಷಣಿಕ ಸರ್ಟಿಫಿಕೇಟ್ಗಳೇ ನಕಲಿ. ಅಂತಹವರೇ ಇಂತಹ ಪಟ್ಟಿತಯಾರಿಸಿದ್ದಾರೆ ಎಂದು ಹರಿಹಾಯ್ದರು.
ಆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಟ್ವೀಟ್ ಮಾಡಿ, ಕರ್ನಾಟಕ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯೊಂದು ಹರಿದಾಡುತ್ತಿದೆ ಎಂದು ಮಾಹಿತಿ ನನಗೆ ಸಿಕ್ಕಿದೆ. ಎಐಸಿಸಿ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೂ ಅಂಗೀಕರಿಸಿಲ್ಲ. ಹರಿದಾಡುತ್ತಿರುವ ಪಟ್ಟಿನಕಲಿ. ಇದು ಗೊಂದಲ ಸೃಷ್ಟಿಸಲು ಮಾಡಿರುವ ಕೃತ್ಯ. ನಕಲಿ ಸುದ್ದಿ ಕಾರ್ಖಾನೆಯ ಉತ್ಪನಕ್ಕೆ ಪ್ರೋತ್ಸಾಹ ನೀಡಬೇಡಿ ಎಂದು ಮನವಿ ಮಾಡಿಕೊಂಡರು.
