ಸತತ ಮೂರು ದಿನಗಳ ಕಾಲ ಐಟಿ ದಾಳಿ ಎದುರಿಸಿ ಕಂಗಾಲಾಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮಾನಸಿಕ ಸ್ಥೈರ್ಯ ತುಂಬಲು ಕಾಂಗ್ರೆಸ್ ನಾಯಕರು ಹಾಗೂ ಹಿತೈಷಿಗಳು ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿ ಬೆಂಬಲ ನೀಡಿದರು.
ಬೆಂಗಳೂರು (ಆ.06): ಸತತ ಮೂರು ದಿನಗಳ ಕಾಲ ಐಟಿ ದಾಳಿ ಎದುರಿಸಿ ಕಂಗಾಲಾಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮಾನಸಿಕ ಸ್ಥೈರ್ಯ ತುಂಬಲು ಕಾಂಗ್ರೆಸ್ ನಾಯಕರು ಹಾಗೂ ಹಿತೈಷಿಗಳು ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿ ಬೆಂಬಲ ನೀಡಿದರು.
ಬುಧವಾರದಿಂದ ಶನಿವಾರ ಬೆಳಗ್ಗೆ 10 ರವರೆಗೆ ಒಟ್ಟು 74 ಗಂಟೆಗಳ ಕಾಲ ನಡೆದ ಐಟಿ ದಾಳಿ ಬಳಿಕ ಶನಿವಾರ ಮಧ್ಯಾಹ್ನದಿಂದಲೇ ಮತ್ತೆ ಅಖಾಡಕ್ಕೆ ಇಳಿದಿದ್ದ ಡಿ.ಕೆ. ಶಿವಕುಮಾರ್ ಗುಜರಾತ್ ಶಾಸಕರ ಜತೆ ಸೇರಿಕೊಂಡಿದ್ದರು. ಈ ಮೂಲಕ ತಾವು ಕುಗ್ಗಿಲ್ಲ ಎಂದು ಬಿಂಬಿಸಿಕೊಂಡರೂ ಪಕ್ಷದ ವತಿಯಿಂದ ಬಲ ತುಂಬಲು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಚಿವರಾದ ಎಂ.ಬಿ. ಪಾಟೀಲ್, ರಮೇಶ್ ಜಾರಕಿಹೊಳಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದರು. ಅಲ್ಲದೇ ನೂರಾರು ಮಂದಿ ಹಿತೈಷಿಗಳು, ಅಭಿಮಾನಿಗಳ ಜತೆಗೆ ಒಕ್ಕಲಿಗ ಮಠದ ನಂಜಾವಧೂತ ಸ್ವಾಮೀಜಿ, ಮೇಯರ್ ಜಿ. ಪದ್ಮಾವತಿ, ಶಿವಕುಮಾರ್ ತಾಯಿ ಗೌರಮ್ಮ ಅವರು ಸೇರಿದಂತೆ ಹಲವರು ಸದಾಶಿವನಗರದ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದರು.
ತಮ್ಮ ಹುಟ್ಟುಹಬ್ಬದ ದಿನದಂದೇ ಪಕ್ಷದ ಪ್ರಭಾವಿ ಸಚಿವರ ನಿವಾಸಕ್ಕೆ ಆಗಮಿಸಿದ ಜಿ. ಪರಮೇಶ್ವರ್ ಕೆಲ ಕಾಲ ವೈಯಕ್ತಿಕವಾಗಿ ಶಿವಕುಮಾರ್ ಜತೆ ಚರ್ಚೆ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಮೇಲೆ ನಡೆದಿರುವ ದಾಳಿ ರಾಜಕೀಯ ಪ್ರೇರಿತ ಎಂಬುದನ್ನು ಈಗಾಗಲೇ ಹೇಳಿದ್ದೇವೆ. ಶಿವಕುಮಾರ್ ಸಾಮರ್ಥ್ಯ ಅರಿತು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಸಮರ್ಥವಾಗಿದೆ. ಇಂತಹವುಗಳನ್ನು ಸಮರ್ಥವಾಗಿ ಎದುರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಿವಕುಮಾರ್ ಭೇಟಿ ಬಳಿಕ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಕಾಂಗ್ರೆಸ್ ಪಕ್ಷವು ಡಿ.ಕೆ. ಶಿವಕುಮಾರ್ ಅವರೊಂದಿಗಿದೆ. ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದ್ದು, ಇದಕ್ಕೆ ಅವರು ಸಮರ್ಥವಾಗಿ ಉತ್ತರ ನೀಡಲಿದ್ದಾರೆ ಎಂದರು.
ಪಕ್ಷ ಸಂಪೂರ್ಣ ಸಹಕಾರ ಕೊಟ್ಟಿದೆ: ಡಿಕೆಶಿ
ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ನನಗೆ ಎಲ್ಲಾ ದಾಖಲೆ ಸಿಗಬೇಕಾಗಿದೆ. ನನ್ನ ಬೆಂಬಲಿಗರು ಮತ್ತು ಸಂಬಂಧಿಕರ ಮೇಲೆ ಆದ ದಾಳಿ ಬಗ್ಗೆ ದಾಖಲೆ ತೆಗೆದುಕೊಳ್ಳಬೇಕು. ದಾಖಲೆ ಬಂದ ಬಳಿಕ ಮಾಧ್ಯಮಗಳ ಮುಂದೆ ಬಂದು ಮಾತನಾಡುತ್ತೇನೆ. ನನಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಸಹಕಾರ ಕೊಟ್ಟಿದೆ. ದಾಖಲೆ ದೊರೆತ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಮಟ್ಟದಲ್ಲಿ ಚರ್ಚೆ ಮಾಡುತ್ತೇನೆ. ಕಷ್ಟದ ಕಾಲದಲ್ಲಿ ಪಕ್ಷ ನನ್ನ ಬೆಂಬಲಕ್ಕೆ ನಿಂತಿದೆ ಎಂದು ನೆನೆಸಿಕೊಂಡರು. ಜಿ.ಪರಮೇಶ್ವರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರಿಗೆ ಶುಭ ಕೋರಿದ್ದೇನೆ. ಗುಜರಾತ್ ಶಾಸಕರು ದೆಹಲಿಗೆ ಹೋಗುವ ವಿಚಾರದಲ್ಲಿ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತೇವೆ. ಶಾಸಕರು ಮೈಸೂರು ಕಡೆಗೆ ಹೋಗಬೇಕಿತ್ತು. ನಿಮಗೆ ಹೆದರಿಕೊಂಡು ಪ್ರವಾಸ ಕಾರ್ಯಕ್ರಮ ರದ್ದು ಮಾಡಿದ್ದಾರೆ ಎಂದು ಮಾಧ್ಯಮಗಳತ್ತ ಕೈ ತೋರಿದರು.
