ಬೆಂಗಳೂರು :  ಕಾಂಗ್ರೆಸ್‌ ಸಚಿವ ಸ್ಥಾನಾಕಾಂಕ್ಷಿಗಳ ಕಣ್ಣು ಗುರುವಾರದ ಬೆಳವಣಿಗೆಗಳ ಮೇಲೆ ನೆಟ್ಟಿದೆ. ವಿದೇಶ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ನಗರಕ್ಕೆ ಹಿಂತಿರುಗುತ್ತಿದ್ದು, ಇದರ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್‌ ಜತೆ ಚರ್ಚಿಸುವ ದಿನ ನಿಗದಿ ಪಡಿಸುವ ಪ್ರಕ್ರಿಯೆ ಆರಂಭವಾಗಲಿದೆ.

ಮೂಲಗಳ ಪ್ರಕಾರ ದಿನೇಶ್‌ ಗುಂಡೂರಾವ್‌ ಅವರು ಗುರುವಾರ ಸಂಜೆಯ ವೇಳೆಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದು, ಈ ಭೇಟಿಯ ವೇಳೆ ದೆಹಲಿಗೆ ತೆರಳಲು ಹೈಕಮಾಂಡ್‌ನ ಸಮಯ ನಿಗದಿಪಡಿಸುವ ಕುರಿತು ಚರ್ಚೆ ನಡೆಯಲಿದೆ. 

ಈ ಎರಡು ಸಭೆಗಳಲ್ಲಿ ದೆಹಲಿ ಭೇಟಿಯ ಕುರಿತು ತೀರ್ಮಾನವಾಗಲಿದೆ. ಹೈಕಮಾಂಡ್‌ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ದೆಹಲಿಗೆ ಬರಲು ರಾಜ್ಯ ನಾಯಕರಿಗೆ ಸೂಚನೆ ನೀಡಿದರೆ, ಇಡೀ ಪ್ರಹಸನ ದೆಹಲಿಗೆ ಶಿಫ್ಟ್‌ ಆಗಲಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನಾಕಾಂಕ್ಷಿಗಳು ತೀವ್ರ ಲಾಬಿ ನಡೆಸಲು ಮಂದಾಗಿದ್ದು, ಹಲವರು ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಆರು ಸಚಿವ ಸ್ಥಾನ ಹಾಗೂ 20 ನಿಗಮ ಮಂಡಳಿಗೆ ನೇಮಕಾತಿ ನಡೆಯುವ ನಿರೀಕ್ಷೆಯಲ್ಲಿ ಈ ಲಾಬಿ ಆರಂಭಗೊಂಡಿದೆ.

ಅ. 15ರೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ಬಹಿರಂಗವಾಗಿ ಹೇಳುತ್ತಾರೆ. ಆದರೆ, ಈ ನಾಯಕರ ಆಪ್ತ ಮೂಲಗಳ ಪ್ರಕಾರ ಈ ಬಾರಿಯೂ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಕಡಿಮೆಯಿದೆ. ಆದರೂ ಸಚಿವ ಸ್ಥಾನಾಕಾಂಕ್ಷಿಗಳು ಮಾತ್ರ ಹುದ್ದೆ ಪಡೆಯಲು ಲಾಬಿ ನಡೆಸುವುದನ್ನು ನಿಲ್ಲಿಸಿಲ್ಲ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ನಗರಕ್ಕೆ ಹಿಂತಿರುಗಿದ ನಂತರ ಸಂಪುಟ ವಿಸ್ತರಣೆ ಕುರಿತು ಒಂದು ಸ್ಪಷ್ಟಸೂಚನೆ ದೊರೆಯುವ ನಿರೀಕ್ಷೆ ಸಚಿವ ಸ್ಥಾನಕಾಂಕ್ಷಿಗಳಿಗೆ ಇದೆ. ಹೀಗಾಗಿಯೇ ಕಾಂಗ್ರೆಸ್‌ನ ಸಚಿವ ಸ್ಥಾನಾಕಾಂಕ್ಷಿಗಳ ಕಣ್ಣು ಗುರುವಾರ ಬೆಳವಣಿಗೆಗಳ ಮೇಲೆ ನೆಟ್ಟಿದೆ.

ಕಣ್ಣು ನೋವು-ಸಿದ್ದು ರೆಸ್ಟ್‌:  ಈ ನಡುವೆ ಬುಧವಾರ ಹಲವು ಸಚಿವ ಸ್ಥಾನಾಕಾಂಕ್ಷಿಗಳು ರಾಜ್ಯ ನಾಯಕರ ನಿವಾಸಗಳಿಗೆ ಭೇಟಿ ನೀಡಿ ಲಾಬಿ ನಡೆಸಲು ಯತ್ನಿಸಿದರು. ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್‌ಗೆ ಸಚಿವ ಸ್ಥಾನ ನೀಡಬೇಕು ಎಂದು ಅವರ ನೂರಾರು ಅಭಿಮಾನಿಗಳು ಬುಧವಾರ ಸಿದ್ದರಾಮಯ್ಯ ಅವರ ನಿವಾಸದ ಬಳಿ ನೆರೆದು ಒತ್ತಾಯ ಮಾಡಿದರು. ಆದರೆ, ಕಣ್ಣು ನೋವಿನ ಕಾರಣಕ್ಕೆ ಸಿದ್ದರಾಮಯ್ಯ ಅವರು ಯಾರನ್ನೂ ಭೇಟಿಯಾಗಲಿಲ್ಲ.

ಇಷ್ಟಾದರೂ ಸಂಗಮೇಶ್‌ ಅಭಿಮಾನಿಗಳು ಸಿದ್ದರಾಮಯ್ಯ ನಿವಾಸದ ಬಳಿ ಪ್ರತಿಭಟನೆ ನಡೆಸಿದರು. ಅನಂತರ ಸಂಗಮೇಶ್‌ ಹಾಗೂ ಬೆಂಬಲಿಗರು ಡಿ.ಕೆ.ಶಿವಕುಮಾರ್‌ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ದೊರಕಿಸಿಕೊಡುವಂತೆ ಒತ್ತಾಯ ಮಾಡಿದರು. ಇನ್ನು ಸಿದ್ದರಾಮಯ್ಯ ನಿವಾಸಕ್ಕೆ ಶಿವರಾಮ ಹೆಬ್ಬಾರ್‌ ಸೇರಿದಂತೆ ಹಲವು ಆಕಾಂಕ್ಷಿಗಳು ತೆರಳಿದರೂ, ಸಿದ್ದರಾಮಯ್ಯ ಯಾರನ್ನು ಭೇಟಿಯಾಗಲಿಲ್ಲ.