Asianet Suvarna News Asianet Suvarna News

ಬಿಎಸ್‌ವೈ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಅಬ್ಬರ : ಎಚ್ಚರಿಕೆ!

ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಸಿಡಿದೆದ್ದಿದ್ದಾರೆ. ರಸ್ತೆಗಿಳಿದು ಕಾಮಗ್ರೆಸ್ ನಾಯಕರು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Congress Leaders Protest Against Karnataka BJP Govt
Author
Bengaluru, First Published Aug 30, 2019, 7:47 AM IST
  • Facebook
  • Twitter
  • Whatsapp

ಬೆಂಗಳೂರು[ಆ.30]:  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಪ್ರಥಮ ಬಾರಿಗೆ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್‌ ರಸ್ತೆಗಿಳಿದು ಪ್ರತಿಭಟನೆ ನಡೆಸಿದೆ. ನೆರೆ ಹಾಗೂ ಬರ ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿವೆ ಎಂದು ಬೀದಿಗಿಳಿದ ಕಾಂಗ್ರೆಸ್‌ ನಾಯಕರು ಗುರುವಾರ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನಾ ಧರಣಿ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರಾಜ್ಯದಲ್ಲಿ ಉಂಟಾಗಿರುವ ತೀವ್ರ ನೆರೆ ಹಾಗೂ ಬರ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ ಎಂದು ಆರೋಪ ಮಾಡಿದರು.

ರಾಜ್ಯದಲ್ಲಿ 104 ತಾಲೂಕುಗಳಲ್ಲಿ ಉಂಟಾಗಿರುವ ನೆರೆಯಿಂದ 88 ಮಂದಿ ಮೃತಪಟ್ಟಿದ್ದಾರೆ. 1 ಲಕ್ಷ ಕೋಟಿ ರು. ಮೊತ್ತದ ಹಾನಿ ಆಗಿದೆ. ಲಕ್ಷಾಂತರ ಹೆಕ್ಟೇರ್‌ ಬೆಳೆ ನಾಶವಾಗಿದೆ. 1 ಲಕ್ಷಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಉಳಿದ ತಾಲೂಕುಗಳು ತೀವ್ರ ಬರದಿಂದ ತತ್ತರಿಸಿವೆ. ಹೀಗಿದ್ದರೂ ಕೇಂದ್ರ ಸರ್ಕಾರ ಬಿಡಿಗಾಸು ಪರಿಹಾರವನ್ನೂ ನೀಡಿಲ್ಲ. ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಪ್ರಯತ್ನಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಸಂಜೆ ರಾಜಭವನದಲ್ಲಿ ರಾಜ್ಯಪಾಲ ವಿ.ಆರ್‌. ವಾಲಾ ಅವರನ್ನು ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದ ಕಾಂಗ್ರೆಸ್‌ ನಿಯೋಗವು, ಕರ್ನಾಟಕದ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ 5 ಸಾವಿರ ಕೋಟಿ ರು. ಮಧ್ಯಂತರ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿತು.

ರಾಜ್ಯಪಾಲರ ಮೂಲಕ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ನೆರೆ ಹಾನಿ ಕುರಿತು ವೈಮಾನಿಕ ಸಮೀಕ್ಷೆ ನಡೆಸಬೇಕು. ಪ್ರಸಕ್ತ ಸಾಲಿನಲ್ಲಿ ಬರ ಎದುರಿಸುತ್ತಿರುವ ಪ್ರದೇಶಗಳಿಗೆ ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಯಿತು.

ಗುರುವಾರ ಬೆಳಗ್ಗೆ 11.30ಕ್ಕೆ ಮೌರ್ಯ ವೃತ್ತದಲ್ಲಿರುವ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸರ್ಕಾರದ ವಿರುದ್ಧ ಧರಣಿ ಕುಳಿತ ಕಾಂಗ್ರೆಸ್‌ ನಾಯಕರು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನಾವಿನ್ನು ಸುಮ್ಮನೆ ಕೂರುವುದಿಲ್ಲ-ಸಿದ್ದರಾಮಯ್ಯ:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, 1914ರ ಬಳಿಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ನೆರೆ ಪರಿಸ್ಥಿತಿ ಉಂಟಾಗಿದೆ. 104 ತಾಲೂಕುಗಳಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ರಾಜ್ಯ ಸರ್ಕಾರವು ಈ ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯಬೇಕು. ಇನ್ನು ಮುಂದೆ ಜನರ ಸಮಸ್ಯೆಗೆ ಸ್ಪಂದಿಸದೆ ನೀವು ಸುಮ್ಮನಾದರೂ ನಾವು ಸುಮ್ಮನೆ ಕೂರುವುದಿಲ್ಲ. ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದರು.

ಹಲವು ತಾಲೂಕುಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಜನ ತುಂಬಾ ಸಂಕಷ್ಟಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಪ್ರತಿ ಕುಟುಂಬಕ್ಕೆ 10 ಸಾವಿರ ರು. ಪರಿಹಾರ ನೀಡಬೇಕು. ಕಡ್ಡಾಯವಾಗಿ ಫಲಾನುಭವಿಗಳಿಗೆ ಹಣ ಸೇರುವಂತೆ ಕ್ರಮ ವಹಿಸಬೇಕು. 1 ಎಕರೆ ಬೆಳೆ ಹಾನಿಗೆ 50 ಸಾವಿರ ರು. ಹಾಗೂ ಹೆಕ್ಟೇರಿಗೆ 1.25 ಲಕ್ಷ ರು. ಪರಿಹಾರ ನೀಡಬೇಕು. ಶುಕ್ರವಾರ ಮತ್ತೆ ಕೊಡಗು ಭಾಗಕ್ಕೆ ಹೋಗ್ತಿದ್ದೇನೆ. ಸರ್ಕಾರ ಸ್ಪಂದಿಸದಿದ್ದರೆ ಹೋರಾಟದ ಹಾದಿ ಹಿಡಿಯುತ್ತೇವೆ ಎಂದರು.

ಜನರ ನಂಬಿಕೆಗೆ ದ್ರೋಹ:

2009ರಲ್ಲಿ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿದ್ದಾಗಲೂ ರಾಜ್ಯದಲ್ಲಿ ಪ್ರವಾಹ ಉಂಟಾಗಿತ್ತು. ಈ ವೇಳೆ ಖುದ್ದು ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ಅವರು ಪರಿಶೀಲನೆ ನಡೆಸಿ 1,600 ಕೋಟಿ ರು. ಬಿಡುಗಡೆ ಮಾಡಿದ್ದರು. ಇದೀಗ ರಾಜ್ಯದಿಂದ 25 ಮಂದಿ ಸಂಸದರನ್ನು ಗೆಲ್ಲಿಸಿ ಕಳುಹಿಸಲಾಗಿದೆ. ಮೂವರು ಕೇಂದ್ರ ಸಚಿವರಾಗಿ ಆಯ್ಕೆಯಾಗಿದ್ದೀರಿ. ಜನರು ನಿಮ್ಮ ಮೇಲಿಟ್ಟನಂಬಿಕೆಗೆ ದ್ರೋಹ ಮಾಡಿದ್ದೀರಿ ಎಂದು ದೂರಿದರು.

ಪ್ರಧಾನಮಂತ್ರಿ ಬರುವುದಕ್ಕೆ ಸಾಧ್ಯವಾಗಲಿಲ್ಲ. ಹೋಗಲಿ ಕಾಟಾಚಾರಕ್ಕೆ ಬಂದು ಹೋದ ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌ ಮೂಲಕವಾದರೂ ನೆರವು ಘೋಷಿಸಬೇಕಾಗಿತ್ತು. 50 ಸಾವಿರ ಕೋಟಿ ರು. ನಷ್ಟಎಂದು ಬಿ.ಎಸ್‌. ಯಡಿಯೂರಪ್ಪ ಒಪ್ಪಿಕೊಂಡಿದ್ದರು. ತಕ್ಷಣಕ್ಕೆ 5 ಸಾವಿರ ಕೋಟಿ ಪಡೆಯಲೂ ಸಹ ಆಗಲಿಲ್ಲ. ನಿಮಗೆ ಧೈರ್ಯ ಇಲ್ಲದಿದ್ದರೆ ನಮ್ಮನ್ನಾದರೂ ಕೇಂದ್ರದ ಬಳಿ ಕರೆದೊಯ್ಯಿರಿ, ಮಾತನಾಡುತ್ತೇವೆ ಎಂದು ತರಾಟೆ ತೆಗೆದುಕೊಂಡರು.

ಮೋದಿ ಟ್ವೀಟ್‌ ಕೂಡ ಮಾಡಿಲ್ಲ- ದಿನೇಶ್‌:

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, 22 ಜಿಲ್ಲೆಗಳ 103 ತಾಲೂಕು ಪ್ರವಾಹದಿಂದ ತತ್ತರಿಸಿವೆ. ಪ್ರವಾಹ ಪೀಡಿತ ಸ್ಥಳಗಳಿಗೆ ನಮ್ಮ ತಂಡ ಭೇಟಿ ನೀಡಿದೆ. ಈ ವಿಚಾರದಲ್ಲಿ ಸರ್ಕಾರಕ್ಕೆ ಸಹಕಾರ ನೀಡಿದ್ದೆವು. ಆದರೆ, ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸಣ್ಣಪುಟ್ಟಹುಟ್ಟುಹಬ್ಬಕ್ಕೂ ಟ್ವೀಟ್‌ ಮಾಡುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಷ್ಟೊಂದು ಮಟ್ಟದ ಪ್ರವಾಹಕ್ಕೆ ಟ್ವೀಟ್‌ ಸಹ ಮಾಡಿಲ್ಲ. ರಾಜ್ಯಕ್ಕೆ ಪ್ರಧಾನಮಂತ್ರಿ ಬರುವುದು ಚುನಾವಣೆ ಸಮಯದಲ್ಲಿ ಮಾತ್ರ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಮಾತನಾಡಿ, ಬಿಜೆಪಿಗೆ ಅಧಿಕಾರದ ಮೇಲಿರುವ ಆತುರ-ಪ್ರೀತಿ, ಬಡವರ ಮೇಲಿಲ್ಲ. ಅಧಿಕಾರ ಇಲ್ಲದಿದ್ದಾಗ ಬಿಜೆಪಿ ನಾಯಕರು ಬಡವರ ಮೇಲೆ ತೋರುತ್ತಿದ್ದ ಹೃದಯ ಶ್ರೀಮಂತಿಕೆಯನ್ನು ಅಧಿಕಾರಕ್ಕೆ ಬಂದ ಮೇಲೆ ತೋರುತ್ತಿಲ್ಲ ಎಂದು ಟೀಕಿಸಿದರು.

ಪ್ರವಾಹ ಬಂದ ಮೂರೇ ದಿನಕ್ಕೆ 50 ಸಾವಿರ ಕೋಟಿ ನಷ್ಟಎಂದು ಹೇಳಿದರು. ಇದೀಗ 1 ಲಕ್ಷ ಕೋಟಿ ರು.ವರೆಗೆ ನಷ್ಟಆಗಿದೆ ಎನ್ನುತ್ತಿದ್ದಾರೆ. ಯಡಿಯೂರಪ್ಪನವರೇ, ಕೇಂದ್ರ, ರಾಜ್ಯ ಸರ್ಕಾರದಲ್ಲಿ ನೀವೇ ಅಧಿಕಾರದಲ್ಲಿದ್ದೀರಿ. ಆದರೂ ನಯಾ ಪೈಸೆ ಪರಿಹಾರ ನೀಡಿಲ್ಲ ಎಂದರೆ ಏನು ಅರ್ಥ? ಕೂಡಲೇ ಎನ್‌ಡಿಆರ್‌ಎಫ್‌ ನಿಯಮ ಸಡಿಲಿಸಿ ಜನರಿಗೆ ನೆರವಾಗಿ ಎಂದರು.

ತಾಕತ್ತಿದ್ದರೆ ಅಧಿವೇಶನ ಕರೆಯಿರಿ-ಉಗ್ರಪ್ಪ:

ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಮಾತನಾಡಿ, ಕೇಂದ್ರ ಸಚಿವ ಅಮಿತ್‌ ಶಾ ರಾಜ್ಯಕ್ಕೆ ಶೋಕಿಗಾಗಿ ಭೇಟಿ ಕೊಟ್ಟಿದ್ದರೇ? 25 ಸಂಸದರು ಪರಿಹಾರಕ್ಕೆ ಒತ್ತಡ ಹೇರದೆ ಗೆಣಸು ಕೆತ್ತುತ್ತಿದ್ದೀರಾ? ನೀವೇಕೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ? ಒಂದು ವಾರದೊಳಗಾಗಿ ವಿಧಾನಮಂಡಲ ಅಧಿವೇಶನ ಕರೆಯಿರಿ. ನಿಮಗೆ ತಾಕತ್ತಿದ್ದರೆ ಅಧಿವೇಶನ ಕರೆಯಿರಿ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸವಾಲು ಹಾಕಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮಾತನಾಡಿ, 4 ಕೋಟಿ ಜನ ಪ್ರವಾಹದಿಂದ ತತ್ತರಿಸಿದ್ದಾರೆ. ಉಳಿದವರು ಬರದಿಂದ ಸಂಕಷ್ಟಎದುರಿಸುತ್ತಿದ್ದಾರೆ. 40 ಸಾವಿರ ಕೋಟಿ ರು. ಹಾನಿಯಾಗಿದೆ ಎಂದು ಅಧಿಕಾರಿಗಳು ವರದಿ ನೀಡುತ್ತಿದ್ದರೆ, ಸರ್ಕಾರಕ್ಕೆ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ವರದಿಯನ್ನೇ ಒಪ್ಪುತ್ತಿಲ್ಲ ಎಂದು ಆರೋಪಿಸಿದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕಾಂಗ್ರೆಸ್‌ ಹಿರಿಯ ನಾಯಕ ಎಚ್‌.ಕೆ. ಪಾಟೀಲ್‌ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಹಣ ನೀಡುವುದಿಲ್ಲ ಎನ್ನಬೇಡಿ: ದಿನೇಶ್‌

ಧರಣಿ ವೇಳೆ ವೇದಿಕೆ ಮೇಲಿದ್ದ ಕಾರ್ಯಕರ್ತರು ಕೇಂದ್ರ ಸರ್ಕಾರ ಪರಿಹಾರ ನೀಡುವವರೆಗೂ ನೀವು ಯಾರೂ ಮುಖ್ಯಮಂತ್ರಿಗಳ ಪರಿಹಾರ ಖಾತೆಗೆ ಹಣ ನೀಡಬೇಡಿ ಎಂದು ಕಾಯಕರ್ತರಿಗೆ ಕರೆ ನೀಡಿದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ನಮ್ಮ ಪಕ್ಷದ ಶಾಸಕರೇ ಒಂದು ತಿಂಗಳ ವೇತನವನ್ನು ನೀಡುವುದಾಗಿ ಘೋಷಿಸಿದ್ದೇವೆ. ಹಲವು ನಾಯಕರು, ಕಾರ್ಯಕರ್ತರು ಪರಿಹಾರ ನೀಡಿದ್ದೇವೆ. ಪರಿಹಾರ ನೀಡಲು ನಮ್ಮ ತಕರಾರಿಲ್ಲ. ಈ ಹೇಳಿಕೆ ವಾಪಸು ಪಡೆಯುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಕಾಂಗ್ರೆಸ್‌ ಒತ್ತಾಯವೇನು?

ಕರ್ನಾಟಕದ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ 5 ಸಾವಿರ ಕೋಟಿ ರು. ಮಧ್ಯಂತರ ಪರಿಹಾರ ಘೋಷಿಸಬೇಕು. ಕೂಡಲೇ ವೈಮಾನಿಕ ಸಮೀಕ್ಷೆ ನಡೆಸಬೇಕು. ಪ್ರಸಕ್ತ ಸಾಲಿನಲ್ಲಿ ಬರ ಎದುರಿಸುತ್ತಿರುವ ಪ್ರದೇಶಗಳಿಗೆ ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ನೆರೆ ನಿರ್ವಹಣೆ ಬಗ್ಗೆ ಕೂಡಲೇ ಸರ್ವ ಪಕ್ಷಗಳ ಸಭೆ ಕರೆಯಬೇಕು. ಬಳಿಕ ತುರ್ತು ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸಬೇಕು.

Follow Us:
Download App:
  • android
  • ios