ಬೆಂಗಳೂರು :  ನಿಗಮ ಮಂಡಳಿ ನೇಮಕದ ಬಗ್ಗೆ ಜೆಡಿ​ಎಸ್‌ ನಾಯ​ಕ​ತ್ವದ ‘ನಿಧಾ​ನದ್ರೋಹ’ ​ದಿಂದ ಕ್ರುದ್ಧ​ರಾ​ಗಿ​ರುವ ಕಾಂಗ್ರೆಸ್‌ ಶಾಸ​ಕರು, ಈ ಕುರಿತ ಆದೇಶ ಹೊರ​ಡಿ​ಸಲು ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವ​ರಿಗೆ ಮಂಗ​ಳ​ವಾ​ರ​ (ಜ.8)ವ​ರೆಗೂ ಗಡುವು ವಿಧಿ​ಸಿದ್ದು, ಆ ವೇಳೆಗೆ ಆದೇಶ ಪ್ರಕ​ಟ​ವಾ​ಗ​ದಿ​ದ್ದರೆ ಪರಿ​ಸ್ಥಿತಿ ವಿಕೋಪಕ್ಕೆ ಹೋಗ​ಲಿದೆ. ಅದು ಸಮ್ಮಿಶ್ರ ಸರ್ಕಾ​ರದ ಅಸ್ತಿ​ತ್ವಕ್ಕೆ ಧಕ್ಕೆ ತರುವ ಹಂತ​ವನ್ನು ಮುಟ್ಟ​ಬ​ಹುದು ಎಂದು ಪರೋ​ಕ್ಷ​ವಾಗಿ ಎಚ್ಚ​ರಿ​ಕೆ ನೀಡಿ​ದ್ದಾರೆ ಎಂದು ತಿಳಿ​ದು​ಬಂದಿ​ದೆ.

ತನ್ಮೂ​ಲಕ ಸಮ್ಮಿಶ್ರ ಸರ್ಕಾ​ರದ ಪಾಲು​ದಾ​ರ​ ಪಕ್ಷ​ಗ​ಳಾದ ಕಾಂಗ್ರೆಸ್‌ ಹಾಗೂ ಜೆಡಿ​ಎಸ್‌ ನಡು​ವಿನ ಮುಸು​ಕಿನ ಗುದ್ದಾಟ ಶನಿ​ವಾರ ಮತ್ತೊಂದು ಮಜಲು ಮುಟ್ಟಿದಂತಾ​ಗಿ​ದೆ.

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಅಂತಿಮಗೊಳಿದ ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿಯನ್ನು ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಅವರೇ ಖುದ್ದಾಗಿ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವ​ರಿಗೆ ನೀಡಿ ಜ.7ಕ್ಕೆ 15 ದಿನ​ವಾ​ಗ​ಲಿದೆ. ಆದರೆ, ಈ ಬಗ್ಗೆ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಯಾವುದೇ ಕ್ರಮ ಕೈಗೊಂಡಿಲ್ಲ. ಉದ್ದೇಶಪೂರ್ವ​ಕ​ವಾ​ಗಿಯೇ ಜೆಡಿ​ಎಸ್‌ ನಾಯ​ಕತ್ವ ಈ ಧೋರಣೆ ಪ್ರದ​ರ್ಶಿ​ಸು​ತ್ತಿದ್ದು, ತನ್ಮೂ​ಲಕ ಕಾಂಗ್ರೆಸ್‌ ಪಕ್ಷ ಹಾಗೂ ಕಾಂಗ್ರೆ​ಸ್‌ನ ಅತೃಪ್ತ ಶಾಸ​ಕ​ರಿಗೆ ಸಂದೇಶ ನೀಡಲು ಯತ್ನಿ​ಸು​ತ್ತಿ​ದ್ದಾರೆ.

ಅಲ್ಲದೆ, ಕುಮಾ​ರ​ಸ್ವಾಮಿ ಅವರು ಪ್ರಧಾ​ನ​ಮಂತ್ರಿ ನರೇಂದ್ರ ಮೋದಿ ಅವ​ರನ್ನು ಭೇಟಿ ಮಾಡಿದ ನಂತರ ಜೆಡಿ​ಎಸ್‌ ನಾಯ​ಕತ್ವವು ಕಾಂಗ್ರೆಸ್‌ ಜತೆ​ಗಿನ ತನ್ನ ವರ್ತ​ನೆ​ಯಲ್ಲಿ ಭಾರಿ ಬದ​ಲಾ​ವಣೆ ತೋರ​ತೊ​ಡ​ಗಿದೆ. ಇದೇ ಧೋರಣೆ ಮುಂದು​ವ​ರೆ​ದರೇ ಪರಿ​ಸ್ಥಿತಿ ವಿಕೋ​ಪಕ್ಕೆ ಹೋಗ​ಬ​ಹುದು ಎಂದೂ ಶಾಸ​ಕರು ಎಚ್ಚ​ರಿಕೆ ನೀಡಿ​ದ್ದಾ​ರೆ.

ಜೆಡಿ​ಎ​ಸ್‌ನ ಈ ನಿಧಾನದ್ರೋಹದ ಬಗ್ಗೆ ಶಾಸಕರಾದ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ಪಡೆ​ದಿ​ರುವ ಎಸ್‌.ಟಿ. ಸೋಮಶೇಖರ್‌, ಡಾ. ಸುಧಾಕರ್‌, ಬೈರತಿ ಸುರೇಶ್‌, ಬೈರತಿ ಬಸ​ವ​ರಾಜು, ನಾರಾಯಣರಾವ್‌ ಸೇರಿ​ದಂತೆ ಹನ್ನೊಂದು ಮಂದಿ ಕಾಂಗ್ರೆಸ್‌ ಶಾಸ​ಕರು ನಗ​ರದಲ್ಲಿ ಸುಮಾರು ಒಂದೂ​ವರೆ ತಾಸು ಸಭೆ ನಡೆ​ಸಿ​ದರು. ಅನಂತರ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಭೇಟಿ ಮಾಡಿ ತಮ್ಮ ನಿಲುವು ಸ್ಪಷ್ಟ​ಪ​ಡಿ​ಸಿ​ದ​ರು.

ಈ ವೇಳೆ ಶಾಸ​ಕರು, ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಅಂತಿಮಗೊಳಿಸಿರುವ ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿಹೊರ ಬಿದ್ದು 15 ದಿನ ಕಳೆಯುತ್ತಿದೆ. ಹೀಗಿದ್ದರೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ನೇಮಕಾತಿ ಆದೇಶ ಮಾಡದೆ ನೇರ​ವಾಗಿ ರಾಹುಲ್‌ಗಾಂಧಿಯವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಪಟ್ಟಿಪ್ರಕ​ಟಿಸಿ ಇಷ್ಟುದಿನ​ವಾ​ದರೂ ಸರ್ಕಾರ ನೇಮಕ ಮಾಡ​ಲಿಲ್ಲ ಎಂದರೆ ಸಾರ್ವ​ಜ​ನಿ​ಕ​ವಾಗಿ ಶಾಸ​ಕ​ರಿಗೆ ಅವ​ಮಾನ, ಮುಜು​ಗರ ಆಗು​ವು​ದಿ​ಲ್ಲವೇ? ಇದೇ ಪರಿ​ಸ್ಥಿತಿ ಕುಮಾ​ರ​ಸ್ವಾಮಿ ಅವ​ರಿಗೆ ಬಂದಿ​ದ್ದರೆ ಹೇಗಿ​ರು​ತ್ತಿತ್ತು. ಕಾಂಗ್ರೆಸ್‌ ಪಕ್ಷವು ಬೇಷರತ್‌ ಬೆಂಬಲ ವ್ಯಕ್ತಪಡಿಸಿದ ಬಳಿಕ ಹದಿನೈದು ದಿನಗಳ ಕಾಲ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಲು ಬಿಡ​ದಿ​ದ್ದರೆ ಅವರು ಸಹಿ​ಸಿ​ಕೊ​ಳ್ಳು​ತ್ತಿ​ದ್ದರಾ? ಎಂದು ಪ್ರಶ್ನಿ​ಸಿದ್ದಾ​ರೆ.

ಅಲ್ಲದೆ, ಜೆಡಿಎಸ್‌ ನಡವಳಿಕೆ ನೋಡಿದರೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎನಿಸುತ್ತಿದೆ. ಮಂಗಳವಾರದ ಒಳಗಾಗಿ ನೇಮಕ ಮಾಡದಿದ್ದರೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರಿಗೆ ದೂರು ನೀಡುವುದಾಗಿ ಸಿದ್ದರಾಮಯ್ಯ ಅವರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಎಚ್‌ಡಿಕೆ ಬದಲಾಗಿದ್ದಾರೆ:

ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತುಂಬಾ ಬದಲಾಗಿದ್ದಾರೆ. ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎನಿಸುತ್ತಿದೆ. ಮೋದಿ ಭೇಟಿ ಬಳಿಕ ಕಾಂಗ್ರೆಸ್‌ ಪಕ್ಷಕ್ಕೆ ಬೆಲೆ ನೀಡುತ್ತಿಲ್ಲ. ಕಾಂಗ್ರೆಸ್‌ ಪಕ್ಷದೊಂದಿಗೆ ಲೋಕಸಭೆ ಸೀಟು ಹಂಚಿಕೆ ಬಗ್ಗೆ ಯಾವುದೇ ಚರ್ಚೆ ಮಾಡದೆ 12 ಸೀಟುಗಳನ್ನು ಗೆಲ್ಲಿಸಿಕೊಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಕಾಂಗ್ರೆಸ್‌ ವಿರುದ್ಧವಾಗಿ ಜೆಡಿಎಸ್‌ ಪಕ್ಷದ ನಾಯಕರೆಲ್ಲರೂ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸಿನವರು ತಾವು ಹೇಳಿದಂತೆ ಕೇಳದಿದ್ದರೆ ಬಿಜೆಪಿ ಜತೆ ಸಖ್ಯ ಬೆಳೆಸುವುದಾಗಿ ಪರೋಕ್ಷ ಸಂದೇಶ ನೀಡುವ ಪ್ರಯತ್ನ ಜೆಡಿ​ಎಸ್‌ ನಾಯ​ಕ​ತ್ವ​ದಿಂದ ನಡೆ​ದಿದೆ. ಇಂತಹ ನಡ​ವ​ಳಿಕೆ ಸಮ್ಮಿಶ್ರ ಸರ್ಕಾ​ರದ ಮೇಲೆ ಪರಿ​ಣಾಮ ಬೀರ​ಬ​ಹುದು ಎಂದು ಹೇಳಿ​ದರು ಎನ್ನ​ಲಾ​ಗಿ​ದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೆ ಸ್ಪಂದಿಸಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪರಿ​ಸ್ಥಿ​ತಿ​ಯನ್ನು ಸರಿ​ಪ​ಡಿ​ಸಲು ಸೋಮ​ವಾ​ರ​ದ​ವ​ರೆಗೂ ತಮಗೆ ಸಮ​ಯಾ​ವ​ಕಾ​ಶ​ವನ್ನು ನೀಡು​ವಂತೆ ಶಾಸ​ಕ​ರಿಗೆ ಸೂಚಿ​ಸಿ​ದ್ದಾರೆ ಎಂದು ತಿಳಿ​ದು​ಬಂದಿದೆ. ಈ ಹಿನ್ನೆ​ಲೆ​ಯಲ್ಲಿ ಮಂಗ​ಳ​ವಾ​ರದವ​ರೆಗೂ ಕಾದು ಅನಂತರ ಮುಂದಿನ ನಿರ್ಧಾರ ಪ್ರಕ​ಟಿ​ಸಲು ಸಭೆ ನಡೆ​ಸು​ವು​ದಾಗಿ ತಿಳಿ​ಸಿ​ದ್ದಾರೆ ಎಂದು ಮೂಲ​ಗಳು ಹೇಳಿ​ವೆ.