Asianet Suvarna News Asianet Suvarna News

ಅತೃಪ್ತ ಶಾಸಕರಿಗೆ ಕಠಿಣ ಪಾಠ ಕಲಿಸಲು ಕಾಂಗ್ರೆಸ್‌ ನಿರ್ಧಾರ

ಅತೃಪ್ತರಾಗಿ ಮುಂಬೈಗೆ ತೆರಳಿರುವ ನಾಯಕರ ವಿರುದ್ಧ ಕೈ ಮುಖಂಡರು ಗರಂ ಆಗಿದ್ದು, ಸರ್ಕಾರ ಪತನಕ್ಕೆ ಕಾರಣರಾದ ಇವರೆಲ್ಲರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

Congress Leaders Decided To Action Against Rebel Leaders
Author
Bengaluru, First Published Jul 25, 2019, 8:18 AM IST

ಬೆಂಗಳೂರು[ಜು.25] :  ಪಕ್ಷದ್ರೋಹ ಮಾಡಿ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಅತೃಪ್ತ ಕಾಂಗ್ರೆಸ್‌ ಶಾಸಕರಿಗೆ ತಕ್ಕ ಶಾಸ್ತಿ ಮಾಡಲು ಕಾಂಗ್ರೆಸ್‌ ನಾಯಕತ್ವ ನಿರ್ಧರಿಸಿದ್ದು, ಈ ದಿಸೆಯಲ್ಲಿ ಎರಡು ಹಂತದ ಕಾರ್ಯತಂತ್ರ ರೂಪಿಸಿದೆ.

1. ಅನಾರೋಗ್ಯದ ನೆಪ ನೀಡಿ ವಿಶ್ವಾಸ ಮತ ನಿರ್ಣಯ ಮತಕ್ಕೆ ಹಾಕುವ ದಿನವೇ ಕಲಾಪಕ್ಕೆ ಗೈರಾದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ ಸೇರಿದಂತೆ ಎಲ್ಲಾ ಕಾಂಗ್ರೆಸ್‌ ಅತೃಪ್ತ ಶಾಸಕರನ್ನು ವಿಪ್‌ ಉಲ್ಲಂಘನೆ ಹಿನ್ನೆಲೆಯಲ್ಲಿ ಅನರ್ಹ ಮಾಡುವಂತೆ ಸ್ಪೀಕರ್‌ ಅವರ ಮೇಲೆ ಒತ್ತಡ ನಿರ್ಮಾಣ ಮಾಡುವುದು.

2. ಅನರ್ಹತೆ ನಂತರ ಎದುರಾಗುವ ಉಪ ಚುನಾವಣೆಯಲ್ಲಿ ಈ ಎಲ್ಲಾ ಶಾಸಕರು ಸೋಲುಣ್ಣುವಂತೆ ಮಾಡಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು. ಈ ದಿಸೆಯಲ್ಲಿ ಅತೃಪ್ತ ಶಾಸಕರ ಕ್ಷೇತ್ರಗಳಲ್ಲಿ ಈ ಕ್ಷಣದಿಂದಲೇ ಚುನಾವಣೆ ತಯಾರಿ ಆರಂಭಿಸುವುದು.

ಬುಧವಾರ ನಡೆದ ಕಾಂಗ್ರೆಸ್‌ನ ಹಿರಿಯ ನಾಯಕರ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲೇ ಸ್ಪೀಕರ್‌ ರಮೇಶ್‌ ಕುಮಾರ್‌ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ನಿಯೋಗ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ ಅವರ ವಿರುದ್ಧವೂ ವಿಪ್‌ ಉಲ್ಲಂಘನೆ ದೂರು ಸಲ್ಲಿಸಿತು. ಜತೆಗೆ, ರಾಜೀನಾಮೆ ನೀಡಿರುವ 12 ಮಂದಿ ಕಾಂಗ್ರೆಸ್‌ ಶಾಸಕರು, ಅನಾರೋಗ್ಯದ ನೆಪದಲ್ಲಿ ಗೈರಾದ ಶ್ರೀಮಂತ ಪಾಟೀಲ್‌ ಮತ್ತು ಕಾಂಗ್ರೆಸ್‌ನ ಸಹ ಸದಸ್ಯನಾಗಿದ್ದುಕೊಂಡು ಕೈಕೊಟ್ಟಆರ್‌.ಶಂಕರ್‌ ಸೇರಿ ಒಟ್ಟು 14 ಮಂದಿ ಶಾಸಕರನ್ನು ಅನರ್ಹಗೊಳಿಸುವಂತೆ ಮತ್ತೊಮ್ಮೆ ಒತ್ತಾಯ ಮಾಡಿತು.

ಈ ವೇಳೆ ಕಾಂಗ್ರೆಸ್‌ ಪರ ಸ್ಪೀಕರ್‌ ರಮೇಶ್‌ ಕುಮಾರ್‌ ಎದುರು ಕಾಂಗ್ರೆಸ್‌ ಪಕ್ಷದ ಪರ ವಕೀಲ ಶಶಿಕಿರಣ್‌ ಶೆಟ್ಟಿವಾದ ಮಂಡಿಸಿ, ಶಾಸಕರನ್ನು ಅನರ್ಹಗೊಳಿಸಲು ಪೂರಕವಾದ ದಾಖಲೆಗಳನ್ನು (ಅತೃಪ್ತ ಶಾಸಕರು ಬಿಜೆಪಿ ನಾಯಕರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಕ್ಕೆ ದಾಖಲೆಗಳು. ಬಿಜೆಪಿಯವರು ಆಪರೇಷನ್‌ ಕಮಲ ಯತ್ನ ನಡೆಸಿರುವ ಬಗ್ಗೆ ಆಡಿಯೋ ಸಾಕ್ಷ್ಯಾಧಾರ. ಅತೃಪ್ತ ಶಾಸಕರಿಗೆ ಒದಗಿಸಲಾದ ವಿಶೇಷ ವಿಮಾನ ವ್ಯವಸ್ಥೆ ಹಾಗೂ ಈ ವೇಳೆ ಅತೃಪ್ತ ಶಾಸಕರ ಜತೆ ಬಿಜೆಪಿ ನಾಯಕರು ಕಾಣಿಸಿಕೊಂಡ ಬಗ್ಗೆ ಛಾಯಾಚಿತ್ರ) ಸಲ್ಲಿಸಿದರು.

ಜತೆಗೆ, ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡದೆ ತಮಗೆ ಅನ್ಯಾಯ ಮಾಡಿದ್ದಾರೆ ಎಂಬುದು ಅತೃಪ್ತ ಶಾಸಕರು ರಾಜೀನಾಮೆಗೆ ನೀಡಿರುವ ಪ್ರಮುಖ ಕಾರಣಗಳಲ್ಲೊಂದು. ಆದರೆ ಎಲ್ಲಾ ಶಾಸಕರಿಗಿಂತಲೂ ಹೆಚ್ಚು ಅನುದಾನವನ್ನು ಅತೃಪ್ತ ಶಾಸಕರೇ ಸರ್ಕಾರದಲ್ಲಿ ಪಡೆದಿದ್ದಾರೆ. ಹೀಗಾಗಿ ಅವರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಅವರು ಹಣ, ಆಮಿಷ ಹಾಗೂ ಒತ್ತಡಗಳಿಗೆ ಬಲಿಯಾಗಲು ಹಾಗೂ ಬಿಜೆಪಿ ಜತೆ ಸೇರಿ ಅಧಿಕಾರ ಪಡೆಯುವ ಸಲುವಾಗಿಯೇ ಪಕ್ಷಾಂತರ ಮಾಡಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನ ಎರಡು ಶಾಸಕಾಂಗ ಪಕ್ಷದ ಸಭೆ ಹಾಗೂ ಅಧಿವೇಶನಕ್ಕೆ ಗೈರು ಹಾಜರಾಗುವ ಮೂಲಕ ಮೂರು ಬಾರಿ ಈ ಶಾಸಕರು ವಿಪ್‌ ಉಲ್ಲಂಘನೆ ಮಾಡಿದ್ದಾರೆ. ಅಲ್ಲದೆ, ಸಂವಿಧಾನದ 10ನೇ ಪರಿಚ್ಛೇದದ ಅಡಿ ವಿಪ್‌ ನೀಡುವುದು ಶಾಸಕಾಂಗ ಪಕ್ಷದ ನಾಯಕರ ಹಕ್ಕು ಎಂದು ನೀವು ಸ್ಪಷ್ಟಪಡಿಸಿ ಸದನದಲ್ಲೇ ಆದೇಶ ಮಾಡಿದ್ದೀರಿ. ಹೀಗಾಗಿ ಸುಪ್ರೀಂಕೋರ್ಟ್‌ ನೀಡಿರುವ ಮಧ್ಯಂತರ ತೀರ್ಪಿನಿಂದಾಗಿ ಇವರು ತಪ್ಪಿಸಿಕೊಳ್ಳಲು ಆಗುವುದಿಲ್ಲ. ನೀವು ಸಂವಿಧಾನದ ಪ್ರಕಾರ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈ ವೇಳೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು ಎಂದು ತಿಳಿದು ಬಂದಿದೆ.

ಇದೇ ವೇಳೆ ಪಕ್ಷೇತರ ಶಾಸಕ ಆರ್‌. ಶಂಕರ್‌ ಅವರು ಸ್ಪೀಕರ್‌ ವಿರುದ್ಧ ಸುಪ್ರೀಂಕೋರ್ಟ್‌ಗೆ ಹೋಗಿರುವ ಬಗ್ಗೆಯೂ ಚರ್ಚೆ ನಡೆಸಲಾಯಿತು. ಶಂಕರ್‌ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದ್ದಾರೆ. ಹೀಗಾಗಿ ಅವರಿಗೆ ವಿಪ್‌ ನೀಡಿದ್ದು, ವಿಪ್‌ ಉಲ್ಲಂಘಿಸಿದ ಕಾರಣ ಕ್ರಮ ಕೈಗೊಳ್ಳಬೇಕು. ಈ ಮೂಲಕ ನನ್ನ ಸಂವಿಧಾನಬದ್ಧ ಹಕ್ಕಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಉಪ ಚುನಾವಣೆಗೆ ತಕ್ಷಣದಿಂದಲೇ ಸಿದ್ಧತೆ: ಇದೇ ವೇಳೆ ಈ ಅತೃಪ್ತ ಶಾಸಕರ ಅನರ್ಹತೆಯೋ ಅಥವಾ ರಾಜೀನಾಮೆ ಅಂಗೀಕಾರದಿಂದಲೋ ಎದುರಾಗಲಿರುವ ಉಪ ಚುನಾವಣೆಗೆ ತಕ್ಷಣದಿಂದಲೇ ಸಿದ್ಧತೆ ನಡೆಸಲು ಕಾಂಗ್ರೆಸ್‌ ನಾಯಕರು ತೀರ್ಮಾನಿಸಿದರು.

ಈ ದಿಸೆಯಲ್ಲಿ ಬೆಂಗಳೂರಿನ ಶಾಸಕರು ಸೇರಿದಂತೆ ಎಲ್ಲಾ ಅತೃಪ್ತರ ಕ್ಷೇತ್ರಗಳಲ್ಲೂ ಪ್ರಬಲ ಅಭ್ಯರ್ಥಿಯನ್ನು ಗುರುತಿಸಿ ಕಣಕ್ಕೆ ಇಳಿಸುವುದು. ಪ್ರಬಲ ಅಭ್ಯರ್ಥಿ ಪಕ್ಷದೊಳಗೆ ದೊರಕಿದರೆ ಸರಿ, ಇಲ್ಲದಿದ್ದಲ್ಲಿ ಅನ್ಯ ಪಕ್ಷಗಳಿಂದ (ವಿಶೇಷವಾಗಿ ಬಿಜೆಪಿ) ಕರೆತರಬೇಕಾದರೂ ಹಿಂಜರಿಯಬಾರದು. ಒಟ್ಟಾರೆ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಅತೃಪ್ತರು ಸೋಲುಣ್ಣುವಂತೆ ಮಾಡಬೇಕು. ಇದಕ್ಕಾಗಿ ಉಪ ಚುನಾವಣೆ ನಡೆಯಲಿರುವ ಎಲ್ಲಾ ಕ್ಷೇತ್ರಗಳಲ್ಲಿ ಕೂಡಲೇ ಉಸ್ತುವಾರಿಯನ್ನು ಹಾಗೂ ತಳಮಟ್ಟಕ್ಕೆ ಇಳಿದು ಕೆಲಸ ಮಾಡುವ ಪಕ್ಷದ ತಂಡವನ್ನು ತಕ್ಷಣದಿಂದಲೇ ನಿಯೋಜಿಸಬೇಕು. ಉಪ ಚುನಾವಣೆಯಲ್ಲಿ ಈ ಅತೃಪ್ತರಿಗೆ ಸೋಲುಣಿಸಿದರೆ ಬಿಜೆಪಿ ಸರ್ಕಾರದ ಆಯಸ್ಸು ಕೊನೆಗೊಳ್ಳುತ್ತದೆ. ಹೀಗಾಗಿ ಅತೃಪ್ತರು ಯಾವುದೇ ಕಾರಣಕ್ಕೂ ಗೆಲ್ಲದಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮೂಲಗಳು ಹೇಳಿವೆ.

Follow Us:
Download App:
  • android
  • ios