ಪಕ್ಷದ ನಾಯಕರ ಮನೆ ಮೇಲೆ ಅನಪೇಕ್ಷಿತ ದಾಳಿ ನಡೆಸುವ ಮೂಲಕ ಒತ್ತಡ ಹೇರುವ ತಂತ್ರವನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದ್ದು, ಕೂಡಲೇ ಮಧ್ಯಪ್ರವೇಶಿಸಿ ಈ ನಡವಳಿಕೆ ತಡೆಗಟ್ಟಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ಮುಖಂಡರು ದೂರು ನೀಡಿದ್ದಾರೆ.

ಬೆಂಗಳೂರು : ಪಕ್ಷದ ನಾಯಕರ ಮನೆ ಮೇಲೆ ಅನಪೇಕ್ಷಿತ ದಾಳಿ ನಡೆಸುವ ಮೂಲಕ ಒತ್ತಡ ಹೇರುವ ತಂತ್ರವನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದ್ದು, ಕೂಡಲೇ ಮಧ್ಯಪ್ರವೇಶಿಸಿ ಈ ನಡವಳಿಕೆ ತಡೆಗಟ್ಟಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ಮುಖಂಡರು ದೂರು ನೀಡಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷದ ನಾಯಕರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಗಳು ನಡೆಯುತ್ತಿವೆ. ಇದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪ್ರೇರಿತ ದಾಳಿಯಾಗಿದೆ. ಐಟಿ, ಇಡಿ, ಸಿಬಿಐಯನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಈ ಮೂಲಕ ಕಾಂಗ್ರೆಸ್‌ ನಾಯಕರ ಮೇಲೆ ಒತ್ತಡ ಹೇರುತ್ತಿದ್ದು, ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರುವಂತೆ ಒತ್ತಡ ಹಾಕಲಾಗುತ್ತಿದೆ. ಕೆಲವು ಅಧಿಕಾರಿಗಳು ಐಟಿ ದಾಳಿಯ ಹಿಂದಿನ ಉದ್ದೇಶಗಳನ್ನು ಕೆಲವು ಮಾಧ್ಯಮಗಳಿಗೆ ಬಿಟ್ಟುಕೊಡುತ್ತಿದ್ದಾರೆ ಎಂದು ಸೋಮವಾರ ದೂರು ಸಲ್ಲಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದಾಗಿನಿಂದ ಆಡಳಿತಾತ್ಮಕ ಸಂಸ್ಥೆಗಳ ಮೇಲೆ ತನ್ನ ಪ್ರಭಾವ ಬೀರಿದೆ. ಇದರಿಂದ ಆ ಸಂಸ್ಥೆಗಳನ್ನು ತನಗೆ ಬೇಕೆಂದ ಹಾಗೆ ಸೂತ್ರದ ಗೊಂಬೆಯಂತೆ ಬಿಜೆಪಿ ಆಡಿಸುತ್ತಿದೆ. ಇದು ಅಸಾಂವಿಧಾನಾತ್ಮಕ ಕ್ರಿಯೆಯಾಗಿದ್ದು, ವಿರೋಧ ಪಕ್ಷಗಳ ಅಧಿಕಾರವನ್ನು ವಿಫಲಗೊಳಿಸುವ ಸಂಚಾಗಿದೆ.

ಮುಖ್ಯವಾಗಿ ಐಟಿ ಇಲಾಖೆ ಡಿಜಿ ಬಿ.ಆರ್‌.ಬಾಲಕೃಷ್ಣನ್‌ ಸೇರಿದಂತೆ ಹಲವು ಅಧಿಕಾರಿಗಳು ಕಾಂಗ್ರೆಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಕೂಡಲೇ ಅವರನ್ನು ವರ್ಗಾವಣೆ ಮಾಡಿಸಲು ಸೂಚನೆ ನೀಡಬೇಕು. ಈ ಮೂಲಕ ಒತ್ತಡ ರಹಿತ ಮತ್ತು ಪಾರದರ್ಶಕ ಚುನಾವಣೆ ನಡೆಯಲು ರಾಜ್ಯ ಚುನಾವಣಾ ಆಯೋಗ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.ದೂರು ಸಲ್ಲಿಕೆ ಸಂದರ್ಭದಲ್ಲಿ ಸಚಿವರಾದ ಎಚ್‌.ಎಂ.ರೇವಣ್ಣ, ಎಂ.ಆರ್‌.ಸೀತಾರಾಂ, ವಿಧಾನಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.