ವಿನಯ್ ಪ್ರಧಾನ್ ಅವರು ಕಾಂಗ್ರೆಸ್ ಉಪಾಧ್ಯಕ್ಷರನ್ನು ಅವಹೇಳನ ಮಾಡಲು ಈ ಮೆಸೇಜ್ ಹಾಕಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ದ್ವಿವೇದಿ, ಮೀರತ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಉಚ್ಛಾಟಿಸುವ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ನವದೆಹಲಿ(ಜೂನ್ 14): ರಾಹುಲ್ ಗಾಂಧಿಯನ್ನು 'ಪಪ್ಪು' ಎಂದು ಸಂಬೋಧಿಸಿ ವಾಟ್ಸಾಪ್ ಮೆಸೇಜ್ ಹರಿಬಿಟ್ಟ ಉತ್ತರಪ್ರದೇಶದ ಕಾಂಗ್ರೆಸ್ ಮುಖಂಡನೊಬ್ಬನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ. ಕಾಂಗ್ರೆಸ್'ನ ಮೀರತ್ ಜಿಲ್ಲಾಧ್ಯಕ್ಷ ವಿನಯ್ ಪ್ರಧಾನ್ ಅವರನ್ನು ಪಕ್ಷದ ಎಲ್ಲಾ ಸ್ಥಾನಗಳಿಂದ ಕಿತ್ತುಹಾಕಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ವಿನಯ್ ತಪ್ಪೇನು?
"ಅದಾನಿ, ಅಂಬಾನಿ ಮತ್ತು ಮಲ್ಯರೊಂದಿಗೆ ಪಪ್ಪು ಕೈಜೋಡಿಸಬಹುದಿತ್ತು. ಆದರೆ, ಹಾಗೆ ಮಾಡಲಿಲ್ಲ. ಪಪ್ಪು ಸಚಿವರೋ ಅಥವಾ ಪ್ರಧಾನಿ ಕೂಡ ಆಗಬಹದಿತ್ತು, ಆದರೆ ಅವರು ಆ ಹಾದಿ ತುಳಿಯಲಿಲ್ಲ. ಅದರ ಬದಲು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಮಂಡಸೌರ್'ಗೆ ಹೋಗಲು ನಿರ್ಧರಿಸಿದರು," ಎಂದು ವಿನಯ್ ಪ್ರಧಾನ್ ಅವರು ವಾಟ್ಸಾಪ್'ನಲ್ಲಿ ಮೆಸೇಜ್ ಹಾಕಿದ್ದರು. ಇದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂಬ ವಾಟ್ಸಾಪ್ ಗ್ರೂಪ್'ನಲ್ಲಿ ವಿನಯ್ ಮೆಸೇಜ್ ಪೋಸ್ಟ್ ಮಾಡಿದ್ದರು.

ವಿನಯ್ ಪ್ರಧಾನ್ ಅವರು ಕಾಂಗ್ರೆಸ್ ಉಪಾಧ್ಯಕ್ಷರನ್ನು ಅವಹೇಳನ ಮಾಡಲು ಈ ಮೆಸೇಜ್ ಹಾಕಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ದ್ವಿವೇದಿ, ಮೀರತ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಉಚ್ಛಾಟಿಸುವ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. "ಇದು ಪಕ್ಷದ ನಾಯಕತ್ವಕ್ಕೆ ಮಸಿ ಬಳಿಯುವ ಪ್ರಯತ್ನ. ಇದರಲ್ಲಿ ಬೇರೆ ಪಕ್ಷಗಳೂ ಭಾಗಿಯಾಗಿರುವಂತೆ ತೋರುತ್ತಿದೆ. ಕಾಂಗ್ರೆಸ್ ಪಕ್ಷದ ಸಂವಿಧಾನವನ್ನು ಉಲ್ಲಂಘಿಸಿದ ಅಪರಾಧ ವಿನಯ್ ಪ್ರಧಾನ್ ಮಾಡಿದ್ದಾರೆ," ಎಂದು ದ್ವಿವೇದಿ ಹೇಳಿದ್ದಾರೆ.

ತಾನು ಅಮಾಯಕ ಎಂದ ಪ್ರಧಾನ್:
ಪಕ್ಷವು ತನ್ನಿಂದ ಸ್ವಲ್ಪವೂ ವಿವರಣೆ ಕೇಳದೆ ಏಕಪಕ್ಷೀಯವಾಗಿ ತನ್ನನ್ನು ಉಚ್ಛಾಟಿಸುವ ಕ್ರಮ ಕೈಗೊಂಡಿದೆ ಎಂದು ವಿನಯ್ ಪ್ರಧಾನ್ ಬೇಸರಿಸಿದ್ದಾರೆ. ರಾಹುಲ್ ಗಾಂಧಿಗೆ ತಾನು ಅಂತಹ ಪದ ಬಳಕೆ ಮಾಡಿಲ್ಲ. ಯಾರೋ ದುಷ್ಕರ್ಮಿಗಳು ಸ್ಕ್ರೀನ್'ಶಾಟ್ ತೆಗೆದು ಫೋಟೋಶಾಪ್'ನಲ್ಲಿ ಎಡಿಟ್ ಮಾಡಿ ಶೇರ್ ಮಾಡಿದ್ದಾರೆ ಎಂದವರು ಪ್ರತ್ಯಾರೋಪಿಸಿದ್ದಾರೆ. ತಮ್ಮ ಪಕ್ಷದವರಲ್ಲೇ ಕೆಲವರು ಈ ಕೃತ್ಯ ಎಸಗಿರಬಹುದೆಂದೂ ಶಂಕಿಸಿರುವ ವಿನಯ್ ಪ್ರಧಾನ್, ಶೀಘ್ರದಲ್ಲೇ ತಾನು ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಪ್ರಕರಣದಲ್ಲಿ ವಿವರಣೆ ನೀಡುವುದಾಗಿ ತಿಳಿಸಿದ್ದಾರೆ.