ಬೆಂಗಳೂರು :  ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಡಿಸಿರುವ ಬಜೆಟ್‌ಗೆ ಮಿತ್ರಪಕ್ಷವಾದ ಕಾಂಗ್ರೆಸ್‌ಸ ಕೆಲವು ಮುಖಂಡರಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಹಿರಿಯ ಶಾಸಕ ಎಚ್‌.ಕೆ. ಪಾಟೀಲ ಹಾಗೂ ಕೆಪಿಸಿಸಿ ನಿಯೋಜಿತ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ‘ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ’ ಎಂದು ಕಿಡಿಕಾರಿದ್ದಾರೆ.

ಬಜೆಟ್‌ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌.ಕೆ. ಪಾಟೀಲರು, ‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಡಿಸಿರುವ ಬಜೆಟ್‌ನಲ್ಲಿ ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂಬ ಭಾವನೆ ಜನರಿಗೆ ಬಂದಿದೆ. ಉತ್ತರ ಕರ್ನಾಟಕದ ಹಿತಕ್ಕಾಗಿ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಕೇವಲ ಕೆಲ ಜಿಲ್ಲೆಗಳಿಗೆ ಸೀಮಿತವಾಗಿ ಬಜೆಟ್‌ ರೂಪಿಸಿದ್ದಾರೆ ಎಂಬ ವಾತಾವರಣ ನಿರ್ಮಾಣವಾಗಿದೆ’ ಎಂದರು.

‘ಜತೆಗೆ ಅಲ್ಪಸಂಖ್ಯಾತ ಇಲಾಖೆಯಲ್ಲೂ ಯಾವುದೇ ಕಾರ್ಯಕ್ರಮ ಘೋಷಿಸಿಲ್ಲ. ಸಿದ್ದರಾಮಯ್ಯ ಬಜೆಟ್‌ನಲ್ಲಿ 2800 ಕೋಟಿ ರು. ಅನುದಾನ ನೀಡಲಾಗಿತ್ತು. ಆದರೆ ಈ ಬಜೆಟ್‌ನಲ್ಲಿ ಯಾವುದೇ ಕಾರ್ಯಕ್ರಮ ನೀಡಿಲ್ಲ. ಈ ಬಗ್ಗೆ ಶಾಸಕರಿಗೆ ಅಸಮಾಧಾನವಿದೆ’ ಎಂದರು.

ಇನ್ನು ಈಶ್ವರ ಖಂಡ್ರೆ ಪ್ರತಿಕ್ರಿಯಿಸಿ, ‘ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗೆ ತಕ್ಕಂತೆ ಬಜೆಟ್‌ನಲ್ಲಿ ಕಾರ್ಯಕ್ರಮಗಳನ್ನು ನೀಡಿಲ್ಲ. ಉತ್ತರ ಕರ್ನಾಟಕ ಭಾಗದ ಜನರನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ ಎಂಬ ಅಭಿಪ್ರಾಯ ಮೂಡಿದೆ. ಉದಾ: ಅನುಭವ ಮಂಟಪದ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಬೇಕಾಗಿತ್ತು. ಆದರೆ, ಆಗಿಲ್ಲ ಹೀಗಾಗಿ ಅಸಮಾಧಾನ ಇದೆ’ ಎಂದರು.