ಅಥಣಿ [ಆ.28]:  ಬ್ಲ್ಯೂ ಫಿಲ್ಮಂ ನೋಡಿದವರಿಗೆ ಡಿಸಿಎಂ ಹುದ್ದೆ ನೀಡಿದ್ದಾರೆ. ಬಿಜೆಪಿ ಅವರಿಗೆ ಬುದ್ಧಿ ಇದೆಯಾ. ಇದು ಸಕಾರಾತ್ಮಕ ನಿರ್ಣಯವಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಸರ್ಕಾರಕ್ಕೆ ಜನಾದೇಶವಿಲ್ಲ. ವಾಮಮಾರ್ಗ ಹಿಡಿದು ಅಧಿಕಾರ ಸ್ವೀಕರಿಸಿದ್ದಾರೆ. ಆಪರೇಶನ್‌ ಕಮಲ ಮಾಡಿ ವಿಷ ಕುಡಿದವರನ್ನು ತಮ್ಮ ಕಡೆ ಇಟ್ಟು ಅಧಿಕಾರ ನಡೆಸುತ್ತಿದ್ದಾರೆ. ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದ ಅವರು, ಹಾಲು ಕುಡಿದ ಮಕ್ಕಳೆ ಬದುಕುವುದಿಲ್ಲ. ಅದರಂತೆ ವಿಷ ಕುಡಿದು ಮಕ್ಕಳು ಕೂಡ ಬದುಕಲು ಸಾಧ್ಯವಿಲ್ಲ ಎಂದು ಹೇಳಿದರು.

ಉಮೇಶ ಕತ್ತಿ ಅವರು ನನಗೆ ಒಮ್ಮೆಯೂ ಫೋನ್‌ ಮಾಡಿ ಕಣ್ಣಿನ ಆಪರೇಶನ್‌ ಬಗ್ಗೆ ವಿಚಾರಿಸಿದ್ದಾರೆ. ಆ ವೇಳೆ ನಿಮ್ಮನ್ನು ಭೇಟಿಯಾಗಲು ಬರುತ್ತೇನೆ ಎಂದು ತಿಳಿಸಿದ್ದರು. ಆದರೆ ಅವರು ಇದುವರೆಗೂ ಬಂದಿಲ್ಲ ಎಂದರು.

ನನ್ನ ಮತ್ತು ಡಿ.ಕೆ.ಶಿವಕುಮಾರ ಅವರ ನಡುವೆ ನಡೆದ ಮಾತುಗಳು ದೃಶ್ಯ ಮಾಧ್ಯಮದಲ್ಲಿ ನೇರ ಪ್ರಸಾರವಾಗಿವೆ. ಅದರ ಬಗ್ಗೆ ಏನೂ ಹೇಳುವ ಅವಶ್ಯಕತೆ ಇಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ಗುಂಪುಗಾರಿಕೆ ಇರುವುದಿಲ್ಲ. ನಾವೆಲ್ಲ ಒಳ್ಳೆಯ ಸ್ನೇಹಿತರಾಗಿದ್ದೇವೆ. ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದರು.