Asianet Suvarna News Asianet Suvarna News

ಮಾಜಿ ಆಪ್ತರ ಹಣಿಯಲು ಸಿದ್ದು ಪ್ಲಾನ್‌! ಸಿದ್ಧವಾಗಿದೆ ಉಪ ಚುನಾವಣೆ ಅಭ್ಯರ್ಥಿಗಳ ಲಿಸ್ಟ್

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಇದೀಗ ಮಾಸ್ಟರ್ ಪ್ಲಾನ್ ಮಾಡಿದ್ದು, ತಮ್ಮ ಮಾಜಿ ಆಪ್ತರ ಹಣಿಯಲು ಉಪ ಚುನಾವಣೆ ಅಭ್ಯರ್ಥಿಗಳ ಲಿಸ್ಟ್ ಸಿದ್ದಮಾಡಿದ್ದಾರೆ. 

Congress Leader Siddaramaiah Prepare By Election Candidate List
Author
Bengaluru, First Published Aug 18, 2019, 9:08 AM IST
  • Facebook
  • Twitter
  • Whatsapp

ಬೆಂಗಳೂರು [ಆ.18]:  ಮೈತ್ರಿ ಸರ್ಕಾರ ಕುಸಿದು ಬೀಳಲು ಸಿದ್ದರಾಮಯ್ಯ ಆಪ್ತರು ಕಾರಣ ಎಂಬ ಹಣೆಪಟ್ಟಿಯಿಂದ ಹೊರಬರಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಂಬರುವ ಉಪ ಚುನಾವಣೆಗಳಲ್ಲಿ ತಮ್ಮ ಅಪ್ತರೆನಿಸಿದ್ದ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಈಗ ಪರಮಾಪ್ತರು ಹಾಗೂ ಪ್ರಭಾವಿಗಳನ್ನು ಕಣಕ್ಕೆ ಇಳಿಸಲು ಸಜ್ಜಾಗಿದ್ದಾರೆ.

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಅತೃಪ್ತ ಶಾಸಕರ ಪೈಕಿ ತಮ್ಮದೇ ಸಮುದಾಯಕ್ಕೆ ಸೇರಿದ ಕೆ.ಆರ್‌. ಪುರ ಕ್ಷೇತ್ರದ ಅನರ್ಹ ಶಾಸಕ ಬೈರತಿ ಬಸವರಾಜು ಹಾಗೂ ಹೊಸಕೋಟೆಯ ಎಂ.ಟಿ.ಬಿ.ನಾಗರಾಜು ಅವರು ಪಕ್ಷ ತೊರೆದಿದ್ದು ಸಿದ್ದರಾಮಯ್ಯ ಅವರಿಗೆ ಭಾರಿ ಮುಜುಗರ ತಂದಿತ್ತು. ಈ ಇಬ್ಬರು ಶಾಸಕರು ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿದ್ದರು. ಇಂತಹವರೇ ಪಕ್ಷ ತೊರೆದು ಸರ್ಕಾರಕ್ಕೆ ಕಂಟಕವಾಗಿದ್ದರಿಂದ ಸದರಿ ಬೆಳವಣಿಗೆಗಳಿಗೆ ಸಿದ್ದರಾಮಯ್ಯ ಅವರ ಪರೋಕ್ಷ ಸಮ್ಮತಿ ಇದೆ ಎಂದು ಬಿಂಬಿಸಲು ಪಕ್ಷದೊಳಗಿನ ಸಿದ್ದರಾಮಯ್ಯ ವಿರೋಧಿಗಳಿಗೆ ಸದವಕಾಶ ಸಿಕ್ಕಿತ್ತು.

ಕೆಪಿಸಿಸಿ ಅಧ್ಯಕ್ಷ ಗಾದಿಗೆ ಇನ್ನೂ ಪೈಪೋಟಿ ನಡೆದಿರುವ ಹಾಗೂ ಪ್ರತಿಪಕ್ಷ ನಾಯಕ ಸ್ಥಾನ ಘೋಷಣೆಯಾಗುವುದು ಬಾಕಿ ಇರುವ ಈ ಹಂತದಲ್ಲೂ ಈ ಅವಕಾಶವನ್ನು ಬಳಸಿಕೊಳ್ಳಲು ಪಕ್ಷದೊಳಗಿನ ಸಿದ್ದು ವಿರೋಧಿ ಬಣ ಪ್ರಯತ್ನ ನಡೆಸುತ್ತಲೇ ಇದೆ.

ಹೀಗಾಗಿ ಸಿದ್ದರಾಮಯ್ಯ ತಮ್ಮ ಆಪ್ತರು ಎನಿಸಿಕೊಂಡವರು ಮರು ಆಯ್ಕೆಯಾಗದಂತಹ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಅಭ್ಯರ್ಥಿಗಳನ್ನು ಸಜ್ಜುಗೊಳಿಸತೊಡಗಿದ್ದಾರೆ. ಇದರ ಪರಿಣಾಮವಾಗಿ ಕೆ.ಆರ್‌. ಪುರದಲ್ಲಿ ಬೈರತಿ ಕುಟುಂಬದ ನಡುವೆಯೇ ಭಾರಿ ಪೈಪೋಟಿ ನಡೆಯುವ ಸಾಧ್ಯತೆಯಿದೆ. ಏಕೆಂದರೆ, ತಮ್ಮ ಒಂದು ಕಾಲದ ಆಪ್ತ ಬೈರತಿ ಬಸವರಾಜು ವಿರುದ್ಧ ಕಣಕ್ಕೆ ಇಳಿಸಲು ಸಿದ್ದರಾಮಯ್ಯ ಅವರು ಆರಿಸಿಕೊಂಡಿರುವುದು ತಮ್ಮ ಆಪ್ತ ಬಳಗದ ಮತ್ತೊಬ್ಬ ಪ್ರಮುಖ ನಾಯಕ ಹಾಗೂ ಹಾಲಿ ಹೆಬ್ಬಾಳದ ಶಾಸಕ ಬೈರತಿ ಸುರೇಶ್‌ ಅವರ ಪತ್ನಿ ಪದ್ಮಾವತಿ ಅವರನ್ನು. ಬೈರತಿ ಸುರೇಶ್‌ ಹಾಗೂ ಬೈರತಿ ಬಸವರಾಜು ವಾರಿಗೆಯಲ್ಲಿ ಸೋದರ ಸಂಬಂಧಿಗಳು. ಹೀಗಾಗಿ ಈ ಕ್ಷೇತ್ರದಲ್ಲಿ ಸಂಬಂಧಿಗಳ ನಡುವೆಯೇ ತೀವ್ರ ಹಣಾಹಣಿ ನಡೆಯುವ ಸಾಧ್ಯತೆಯಿದೆ.

ತಮ್ಮ ಆಪ್ತ ಬಳಗದಲ್ಲಿದ್ದ ಬೈರತಿ ಬಸವರಾಜು ಅವರಿಗೆ ಈ ಕ್ಷೇತ್ರದ ಟಿಕೆಟ್‌ ಕೊಡಿಸಲು ಸಿದ್ದರಾಮಯ್ಯ ಅವರು ಪ್ರಭಾವಿ ನಾಯಕರಾಗಿದ್ದ ಎ.ಕೃಷ್ಣಪ್ಪ ಅವರ ವಿರೋಧ ಕಟ್ಟಿಕೊಳ್ಳಬೇಕಾಯಿತು. ಆದರೆ, ಕಡೆಗೆ ಬೈರತಿ ಬಸವರಾಜು ತಮ್ಮ ಮಾತು ಕೇಳದೆ ಪಕ್ಷಾಂತರ ಮಾಡಿ ಮುಜುಗರಕ್ಕೆ ಸಿಲುಕಿಸಿದರು ಎಂಬ ಬೇಸರ ಸಿದ್ದರಾಮಯ್ಯ ಅವರಿಗೆ ಇದೆ ಎನ್ನಲಾಗಿದೆ. ಹೀಗಾಗಿ ಬೈರತಿ ಬಸವರಾಜು ಅವರನ್ನು ಮಣಿಸಲು ಅವರಷ್ಟೇ ಪ್ರಬಲ ಹಾಗೂ ಸಂಪನ್ಮೂಲ ಕ್ರೋಡೀಕರಣದಲ್ಲಿ ಸಮರ್ಥ ಎನಿಸಿದ ಬೈರತಿ ಸುರೇಶ್‌ ಅವರ ಪತ್ನಿ ಪದ್ಮಾವತಿ ಅವರನ್ನು ಕಣಕ್ಕೆ ಇಳಿಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.

ಇನ್ನು ಹೊಸಕೋಟೆಯಲ್ಲಿ ಕಾಂಗ್ರೆಸ್‌ಗೆ ಕೈಕೊಟ್ಟಎಂ.ಟಿ.ಬಿ. ನಾಗರಾಜು ಅವರಿಗೆ ಬುದ್ಧಿ ಕಲಿಸಲು ಕಾಂಗ್ರೆಸ್‌ ನಿರ್ಧರಿಸಿದ್ದು, ಈ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ನಾಯಕ ಬಚ್ಚೇಗೌಡ ಅವರ ಪುತ್ರ ಶರತ್‌ ಬಚ್ಚೇಗೌಡ ಅವರಿಗೆ ಗಾಳ ಹಾಕಿದೆ ಎನ್ನಲಾಗಿದೆ. ಎಂ.ಟಿ.ಬಿ. ನಾಗರಾಜ್‌ ಆಗಮನದಿಂದಾಗಿ ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾದ ಶರತ್‌ ಬಚ್ಚೇಗೌಡ ಅವರಿಗೆ ಟಿಕೆಟ್‌ ದೊರೆಯುವುದು ಕಷ್ಟ. ಹೀಗಾಗಿ ಅವರು ಕಾಂಗ್ರೆಸ್‌ಗೆ ವಲಸೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.

ಒಂದು ವೇಳೆ ಕಾಂಗ್ರೆಸ್‌ಗೆ ಶರತ್‌ ಬಚ್ಚೇಗೌಡ ಬರದಿದ್ದರೂ ಅವರು ಪಕ್ಷೇತರರಾಗಿಯಾದರೂ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇಂತಹ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ಫ್ರೆಂಡ್ಲಿ ಫೈಟ್‌ಗೂ ಕಾಂಗ್ರೆಸ್‌ ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ.

ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಕಾಂಗ್ರೆಸ್‌ನ 13 ಶಾಸಕರು ರಾಜೀನಾಮೆ ನೀಡಿದ್ದರೂ ಸಿದ್ದರಾಮಯ್ಯ ಅವರು ಮುಜುಗರಕ್ಕೆ ಸಿಲುಕುವಂತಾಗಿದ್ದು ಬೈರತಿ ಬಸವರಾಜು ಹಾಗೂ ಎಂ.ಟಿ.ಬಿ. ನಾಗರಾಜು ಅವರ ರಾಜೀನಾಮೆಯಿಂದಾಗಿ. ಹೀಗಾಗಿ ಈ ಇಬ್ಬರನ್ನು ಸೋಲಿಸುವಂತಹ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವಲ್ಲಿ ತಮ್ಮ ಪಾತ್ರವೇನೂ ಇರಲಿಲ್ಲ ಎಂಬ ಸಂದೇಶವನ್ನು ಕಳುಹಿಸುವ ಒಳ ಉದ್ದೇಶವೂ ಸಿದ್ದರಾಮಯ್ಯ ಅವರಿಗೆ ಇದೆ ಎನ್ನಲಾಗುತ್ತಿದೆ.

ಇವರಲ್ಲದೆ, ಉಪ ಚುನಾವಣೆಯಲ್ಲಿ ಬೆಂಗಳೂರಿನಿಂದ ಇನ್ನಷ್ಟುಪ್ರಭಾವಿಗಳು ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಮುಖ್ಯವಾಗಿ ಸಿದ್ದರಾಮಯ್ಯ ಅವರ ಪಾಳಯದಲ್ಲಿ ಈಗ ಗುರುತಿಸಿಕೊಳ್ಳುತ್ತಿರುವ ಚೆಲುವರಾಯಸ್ವಾಮಿ ತಂಡದ ಪ್ರಮುಖ ನಾಯಕ ಮಾಗಡಿ ಬಾಲಕೃಷ್ಣ ಅವರು ಮಹಾಲಕ್ಷ್ಮೇ ಲೇಔಟ್‌ನಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಇದೇ ಕ್ಷೇತ್ರದಲ್ಲಿ ಎನ್‌ಎಸ್‌ಯುಐ ಅಧ್ಯಕ್ಷ ಮಂಜುನಾಥ್‌ ಸಹ ಆಕಾಂಕ್ಷಿಯಾಗಿದ್ದಾರೆ. ಯಶವಂತಪುರ ಅಥವಾ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಮಾಜಿ ಶಾಸಕ ಪ್ರಿಯಕೃಷ್ಣ ಅವರು ಕಣಕ್ಕೆ ಇಳಿಯಬಹುದು. ಒಂದು ವೇಳೆ ಪ್ರಿಯಕೃಷ್ಣ ಯಶವಂತಪುರ ಕ್ಷೇತ್ರದಲ್ಲಿ ಕಣಕ್ಕೆ ಇಳಿದರೆ, ಆಗ ಅಕಾಲಿಕ ಮರಣಕ್ಕೆ ಒಳಗಾದ ಐಎಎಸ್‌ ಅಧಿಕಾರಿ ಡಿ.ಕೆ. ರವಿ ಅವರ ಮಾವ ಹನುಮಂತರಾಯಪ್ಪ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಇನ್ನು ಶಿವಾಜಿನಗರ ಕ್ಷೇತ್ರದಿಂದ ವಿಧಾನಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌, ಅಬ್ದುಲ್‌ ವಾಜೀದ್‌ ಹಾಗೂ ಎಸ್‌.ಎ. ಹುಸೇನ್‌ ಅವರ ಹೆಸರು ಕೇಳಿಬರುತ್ತಿದೆ.

1. ಬೈರತಿ v/s ಬೈರತಿ ಪತ್ನಿ?

ಬೈರತಿ ಬಸವರಾಜು ಅವರ ಕೆ.ಆರ್‌.ಪುರದಿಂದ ಹೆಬ್ಬಾಳ ಶಾಸಕ ಬೈರತಿ ಸುರೇಶ್‌ ಪತ್ನಿ ಪದ್ಮಾವತಿಯನ್ನು ಕಣಕ್ಕಿಳಿಸುವ ಸಾಧ್ಯತೆ. ಬಸವರಾಜು ಹಾಗೂ ಸುರೇಶ್‌ ಸೋದರ ಸಂಬಂಧಿಗಳು.

2. ಹೊಸಕೋಟೆಗೆ ಶರತ್‌?

ಎಂ.ಟಿ.ಬಿ.ನಾಗರಾಜ್‌ ಅವರ ಹೊಸಕೋಟೆಯಿಂದ ಬಿಜೆಪಿ ಸಂಸದ ಬಿ.ಎನ್‌.ಬಚ್ಚೇಗೌಡರ ಪುತ್ರ ಶರತ್‌ರನ್ನು ಕಣಕ್ಕಿಳಿಸುವ ಅಥವಾ ಅವರು ಪಕ್ಷೇತರರಾಗಿ ಸ್ಪರ್ಧಿಸಿದರೆ ಬೆಂಬಲಿಸುವ ಸಾಧ್ಯತೆ.

3. ಮಾಗಡಿ ಬಾಲಕೃಷ್ಣ ಕಣಕ್ಕೆ?

ಸಿದ್ದರಾಮಯ್ಯಗೆ ಆಪ್ತರಾಗಿರುವ ಚೆಲುವರಾಯಸ್ವಾಮಿ ತಂಡದ ಮಾಗಡಿ ಬಾಲಕೃಷ್ಣ ಮಹಾಲಕ್ಷ್ಮೇ ಲೇಔಟ್‌ನಿಂದ ಸ್ಪರ್ಧಿಸುವ ಸಾಧ್ಯತೆ. ಎನ್‌ಎಸ್‌ಯುಐ ಅಧ್ಯಕ್ಷ ಮಂಜುನಾಥ್‌ ಕೂಡ ಆಕಾಂಕ್ಷಿ

4. ಪ್ರಿಯ ಕೃಷ್ಣ ಸ್ಪರ್ಧೆ ಸಂಭವ

ಯಶವಂತಪುರ ಅಥವಾ ರಾಜರಾಜೇಶ್ವರಿನಗರದಿಂದ ಪ್ರಿಯಕೃಷ್ಣ ಸ್ಪರ್ಧಿಸಬಹುದು. ಪ್ರಿಯಕೃಷ್ಣ ಯಶವಂತಪುರದಲ್ಲಿ ಸ್ಪರ್ಧಿಸಿದರೆ, ರಾಜರಾಜೇಶ್ವರಿನಗರದಲ್ಲಿ ಡಿ.ಕೆ.ರವಿ ಮಾವ ಹನುಮಂತರಾಯಪ್ಪ ಸಾಧ್ಯತೆ

5. ಶಿವಾಜಿನಗರ ರೇಸಲ್ಲಿ ಮೂವರು

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ವಿಧಾನಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌, ಅಬ್ದುಲ್‌ ವಾಜೀದ್‌ ಹಾಗೂ ಎಸ್‌.ಎ.ಹುಸೇನ್‌ ಅವರ ಹೆಸರು ಕೇಳಿಬರುತ್ತಿದೆ.

Follow Us:
Download App:
  • android
  • ios