ಬೆಂಗಳೂರು :  ತಮ್ಮದೇ ಪಕ್ಷದ ನಾಯಕರ ವಿರುದ್ಧ ಮತ್ತೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿರುವ ಶಿವಾಜಿನಗರ ಕಾಂಗ್ರೆಸ್‌ ಶಾಸಕ ಆರ್‌.ರೋಷನ್‌ ಬೇಗ್‌, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನೇ ದಾರಿ ತಪ್ಪಿಸಿದ ಕಾರಣಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನು ಅವರ ದಾಟಿಯಲ್ಲೇ ಟೀಕಿಸಿರುವ ರೋಷನ್‌ ಬೇಗ್‌, ಲೋಕಸಭಾ ಚುನಾವಣೆಗೂ ಮುನ್ನ ನಾನೇ ಮುಂದಿನ ಮುಖ್ಯಮಂತ್ರಿ, ನಾನೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಿದ್ದ ಸಿದ್ದರಾಮಯ್ಯ ಅವರ ಅಹಂ... ಈಗ ಇಳಿದು ಬಾ ಇಳಿದು ಬಾ ಅಂತ ಇಳಿಯಿತಾ ಎಂದು ಟಾಂಗ್‌ ನೀಡಿದ್ದಾರೆ.

ಅಲ್ಲದೆ, ಪಕ್ಷ ತಮಗೆ ನೀಡಿರುವ ನೋಟಿಸ್‌ಗೆ ಉತ್ತರ ಕೊಡೋದಿಲ್ಲ ಎಂದಿರುವ ಅವರು, ಮೊದಲು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿನಲ್ಲಿ ಮೈತ್ರಿ ಕೂಟದ ಅಭ್ಯರ್ಥಿಗಳ ಸೋಲಿಗೆ ಕಾರಣರಾದ ಕಾಂಗ್ರೆಸ್ಸಿಗರಿಗೆ ನೋಟಿಸ್‌ ನೀಡಲಿ ಎಂದು ಸವಾಲು ಹಾಕಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನೇಶ್‌ ಗುಂಡೂರಾವ್‌ ಅವರದ್ದು ಪರಿಪಕ್ವವಲ್ಲದ ನಡೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷಗಾದಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಸಿದ್ದರಾಮಯ್ಯ ಅವರದ್ದು ತನ್ನ ಮಾತೇ ನಡೆಯಬೇಕು, ತಾನು ಹೇಳಿದ ಹಾಗೇ ಆಗಬೇಕು ಎನ್ನುವ ಅಹಂ. ಇಂತಹ ನಾಯಕರು ರಾಹುಲ್‌ ಗಾಂಧಿಯಂತಹ ನಾಯಕರಿಗೂ ಮಿಸ್‌ ಗೈಡ್‌ ಮಾಡಿದರು. ದಯವಿಟ್ಟು ಕ್ಷಮಿಸಿ ರಾಹುಲ್‌ಗಾಂಧಿ ಸರ್‌, ಇದಕ್ಕಾಗಿ ನೀವು ರಾಜೀನಾಮೆ ನೀಡಬೇಕಾಗಿಲ್ಲ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಲಿಂಗಾಯತ ಸಮುದಾಯದ ವಿಭಜನೆಗೆ ಹೋಗಿ ಏನೋ ಸ್ವೀಪ್‌ ಮಾಡುತ್ತೇವೆ ಎಂದಿರಿ. ಆಗ ನಮ್ಮ ಮಾತು ಕೇಳಲಿಲ್ಲ. ಫಲಿತಾಂಶ ಏನಾಯ್ತು? ವಿಧಾನಸಭಾ ಚುನಾವಣೆ ವೇಳೆ ಅವರಪ್ಪರಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದಿಲ್ಲ ಅಂತ ಹೇಳಿ ಸೋತ ಮೇಲೆ ತಾವೇ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದಿರಲ್ಲಾ ಎಂದು ಸಿದ್ದರಾಮಯ್ಯ ಅವರನ್ನು ಟೀಕಿಸಿದರು.

ನೋಟಿಸ್‌ಗೆ ಉತ್ತರಿಸಲ್ಲ: ಪಕ್ಷದ ನಾಯಕರ ಬಗ್ಗೆ ಟೀಕೆ ಮಾಡಿದ್ದಕ್ಕೆ ಕೆಪಿಸಿಸಿ ನೀಡಿರುವ ನೋಟಿಸ್‌ ಬಗ್ಗೆಯೂ ತೀವ್ರ ಬೇಸರ ವ್ಯಕ್ತಪಡಿಸಿದ ರೋಷನ್‌ ಬೇಗ್‌, ಅದ್ಯಾವ ದೊಡ್ಡ ನೋಟಿಸ್‌? ಅದಕ್ಕೆ ನಾನು ಉತ್ತರ ಕೊಡೋದಿಲ್ಲ. ನೋಟಿಸ್‌ ಕೊಡಬೇಕಾದ್ದು ನನಗಲ್ಲ, ತುಮಕೂರಲ್ಲಿ ದೇವೇಗೌಡರ ವಿರುದ್ಧ, ಕೋಲಾರದಲ್ಲಿ ಮುನಿಯಪ್ಪ ವಿರುದ್ಧ, ಮಂಡ್ಯದಲ್ಲಿ ನಿಖಿಲ್‌ ಕುಮಾರ್‌ ವಿರುದ್ಧ ಬಹಿರಂಗವಾಗಿಯೇ ಕೆಲಸ ಮಾಡಿ ಸೋಲಿಗೆ ಕಾರಣವಾಗಿದ್ದು ನಮ್ಮ ಪಕ್ಷದವರೇ. ನೋಟಿಸ್‌ ಕೊಡುವುದಾದರೆ ಅವರಿಗೆ ಕೊಡಲಿ. ಆದರೆ, ಅವರಾರ‍ಯರಿಗೂ ಈ ವರೆಗೂ ನೋಟಿಸ್‌ ನೀಡಿಲ್ಲ ಏಕೆ ಎಂದು ಪ್ರಶ್ನಿಸಿದರು.

ಪಕ್ಷಕ್ಕಾದ ಹಿನ್ನಡೆಗೆ ಎಲ್ಲ ಸತ್ಯಗಳೂ ಕಣ್ಣ ಮುಂದೆ ಇದ್ದರೂ ಸೋಲಿನ ಕಾರಣ ತಿಳಿಯುವ ನೆಪದಲ್ಲಿ ಸತ್ಯ ಶೋಧನಾ ಸಮಿತಿ ರಚಿಸಿದ್ದಾರೆ. ಇದನ್ನು ನೋಡಿದರೆ ನಗು ಬರುತ್ತಿದೆ ಎಂದು ವ್ಯಂಗ್ಯವಾಡಿದರು.