ನವದೆಹಲಿ(ಡಿ.15): ರಫೆಲ್ ಒಪ್ಪಂದ ಕುರಿತಂತೆ ತನಿಖೆ ನಡೆಸುವ ಅಗತ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ನಡುವೆಯೂ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರ ನಿಂತಿಲ್ಲ.

ತೀರ್ಪಿನ ಬಳಿಕ ಎರಡೂ ಪಕ್ಷದವರೂ ತಮ್ಮ ವಾದ ಮುಂದಿಡುತ್ತಿದ್ದು, ಇದು ಇಲ್ಲಿಗೆ ನಿಲ್ಲುವ ಸಮರ ಅಲ್ಲ ಎಂಬ ಸ್ಪಷ್ಟ ಸಂದೇಶ ಕಳುಹಿಸುತ್ತಿವೆ.

ತೀರ್ಪು ಪ್ರಕಟವಾದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ , ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಅರುಣ್ ಜೇಟ್ಲಿ ಮತ್ತು ರವಿಶಂಕರ್ ಪ್ರಸಾದ್, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ.       

ಆಡಳಿತಾರೂಢ ಸರ್ಕಾರದ ಪರ ಸಚಿವರು, ಬಿಜೆಪಿ ನಾಯಕರು ಬ್ಯಾಟಿಂಗ್ ಮಾಡುತ್ತಿದ್ದು, ರಫೆಲ್ ಹಗರಣ ಎಂಬ ಸುಳ್ಳನ್ನು ಹಬ್ಬಿಸಿದ್ದ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ದೇಶದ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಇತ್ತ ಕಾಂಗ್ರೆಸ್ ನಾಯಕರು ಈಗಲೂ ರಫೆಲ್ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಹೇಳುತ್ತಿದ್ದು, ಪ್ರಧಾನಿ ಮೋದಿ, ಅನಿಲ್ ಅಂಬಾನಿ ಭ್ರಷ್ಟಾಚಾರವನ್ನು ದೇಶದ ಜನರ ಮುಂದೆ ಇಡುವುದಾಗಿ ವಾಗ್ದಾನ ಮಾಡಿದೆ.

ಇದೀಗ ರಫೆಲ್ ಕುರಿತು ಪ್ರಶ್ನೆ ಮಾಡುವ ಸರದಿ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರದ್ದು. ರಫೆಲ್ ಕುರಿತು ಟ್ವೀಟ್ ಮಾಡಿರುವ ಚಿದಂಬರಂ, ವಾಯುಸೇನೆಗೆ ಬೇಕಾದ ಸ್ಕ್ವಾಡರ್ನ್ ಗಳ ಕುರಿತು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ವಾಯುಸೇನೆ ಬೇಡಿಕೆ ಪ್ರಕಾರ ಒಟ್ಟು 7 ಸ್ಕ್ವಾಡರ್ನ್ ಗಳ (126 ಯುದ್ಧ ವಿಮಾನ) ಅವಶ್ಯಕತೆ ಇದ್ದು, ಕೇಂದ್ರ ಸರ್ಕಾರ ಕೇವಲ 2 ಸ್ಕ್ವಾಡರ್ನ್ ಗಳ(36 ಯುದ್ಧ ವಿಮಾನ) ಕುರಿತಷ್ಟೇ ಏಕೆ ಒಪ್ಪಂದ ಮಾಡಿಕೊಂಡಿದೆ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.