ಬೆಂಗಳೂರು (ಆ. 25): ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ದೆಹಲಿಯಲ್ಲಿ ಬೀಡು ಬಿಟ್ಟು ತೀವ್ರ ಲಾಬಿ ನಡೆಸುತ್ತಿರುವ ಬೆನ್ನ ಹಿಂದೆಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್‌ ಅವರು ಸೋಮವಾರ ನಗರಕ್ಕೆ ಆಗಮಿಸಲಿದ್ದು, ಕೆಪಿಸಿಸಿ ಅಧ್ಯಕ್ಷರು ಈಗ ಬದಲಾಗಬೇಕೋ ಅಥವಾ ಬೇಡವೋ ಎಂಬ ಬಗ್ಗೆ ರಾಜ್ಯ ಕಾಂಗ್ರೆಸ್‌ನ ಹಿರಿಯ ಮುಖಂಡರ ಅಭಿಪ್ರಾಯ ಸಂಗ್ರಹ ನಡೆಸಲಿದ್ದಾರೆ. ಸೋಮವಾರ ನಗರಕ್ಕೆ ಆಗಮಿಸಿ ರಾಜ್ಯ ಕಾಂಗ್ರೆಸ್‌ನ ಎಲ್ಲಾ ಪ್ರಮುಖ ನಾಯಕರ ಸಭೆ ನಡೆಸಲಿರುವ ಗುಲಾಂ ನಬಿ ಆಜಾದ್‌ ಅವರು ಈ ಸಂದರ್ಭದಲ್ಲಿ ಎರಡು ವಿಷಯಗಳ ಬಗ್ಗೆ ನಾಯಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

1- ಕೆಪಿಸಿಸಿ ಅಧ್ಯಕ್ಷರು ಈಗ ಬದಲಾಗಬೇಕೋ ಅಥವಾ ಬೇಡವೋ? ಬದಲಾಗಬೇಕಿದ್ದರೆ ಯಾರು ಆಗುವುದು ಸೂಕ್ತ?

2- ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಯಾರ ಹೆಸರನ್ನು ಅಂತಿಮಗೊಳಿಸಬೇಕು?

ಮೂಲಗಳ ಪ್ರಕಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಹೆಸರನ್ನು ಅಂತಿಮಗೊಳಿಸುವ ಉದ್ದೇಶ ಹೈಕಮಾಂಡ್‌ಗೆ ಇದೆ. ಆದರೆ, ಈ ಬಗ್ಗೆ ರಾಜ್ಯದ ಹಿರಿಯರ ಅಭಿಪ್ರಾಯವೇನಿದೆ ಎಂಬುದನ್ನು ಅರಿಯಲು ಗುಲಾಂ ನಬಿ ಆಗಮಿಸಲಿದ್ದಾರೆ. ಇನ್ನು ಕೆಪಿಸಿಸಿ ಹುದ್ದೆಗೆ ಶಿವಕುಮಾರ್‌ ಅವರು ತೀವ್ರ ಲಾಬಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ಈಗ ಬದಲಾಗಬೇಕೆ ಎಂಬ ಬಗ್ಗೆಯೂ ಅವರು ಚರ್ಚೆ ನಡೆಸಲಿದ್ದಾರೆ.

ದೆಹಲಿಯಲ್ಲಿ ಡಿ.ಕೆ.ಶಿ. ಲಾಬಿ:

ಈ ನಡುವೆ ದೆಹಲಿಯಲ್ಲಿ ಬೀಡು ಬಿಟ್ಟಿರುವ ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ತೀವ್ರ ಪ್ರಯತ್ನ ನಡೆಸಿದ್ದಾರೆ. ಈ ಲಾಬಿಯ ಭಾಗವಾಗಿ ಅವರು ಶನಿವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಅವರು ದೆಹಲಿಯಲ್ಲಿ ಎಐಸಿಸಿಯ ಪ್ರಮುಖ ನಾಯಕರಾದ ಅಹ್ಮದ್‌ ಪಟೇಲ್‌ ಹಾಗೂ ಚೆಲ್ಲಕುಮಾರ್‌ ಅವರನ್ನು ಭೇಟಿ ಮಾಡಿ ಕೆಪಿಸಿಸಿ ಹುದ್ದೆಗೆ ತಮ್ಮನ್ನು ಈ ಹಂತದಲ್ಲಿ ಏಕೆ ನೇಮಕ ಮಾಡಬೇಕು ಎಂದು ಮನದಟ್ಟು ಮಾಡಿಕೊಡಲು ಯತ್ನಿಸಿದರು ಎನ್ನಲಾಗಿದೆ. ಶಿವಕುಮಾರ್‌ ಹೈಕಮಾಂಡ್‌ನ ಕೆಲ ಪ್ರಮುಖ ನಾಯಕರು ಕೂಡ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಸಮ್ಮಿಶ್ರ ಸರ್ಕಾರದ ಪತನದ ನಂತರ ಒಕ್ಕಲಿಗ ಮತಬ್ಯಾಂಕ್‌ ಛಿದ್ರಗೊಂಡಿದ್ದು, ಜೆಡಿಎಸ್‌ನಿಂದ ದೂರ ಸರಿಯುವ ಸಾಧ್ಯತೆಯಿದೆ. ಈ ಮತ ಬ್ಯಾಂಕ್‌ ಅನ್ನು ಕಾಂಗ್ರೆಸ್‌ನತ್ತ ತಿರುಗಿಸಲು ಒಕ್ಕಲಿಗ ಸಮುದಾಯದ ನಾಯಕ ಎನಿಸಿರುವ ಶಿವಕುಮಾರ್‌ ಅವರಿಗೆ ಕೆಪಿಸಿಸಿ ಹುದ್ದೆ ನೀಡಿದರೆ ಅವಕಾಶ ಹೆಚ್ಚಾಗುತ್ತದೆ.

ಇದಾಗದ ಪಕ್ಷದಲ್ಲಿ ಒಕ್ಕಲಿಗ ಸಮುದಾಯ ಬಿಜೆಪಿಯತ್ತ ಸಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇನ್ನು ಶಿವಕುಮಾರ್‌ ಅವರ ವಿರುದ್ಧವಿರುವ ಪ್ರಕರಣಗಳನ್ನು ಬಳಸಿಕೊಂಡು ಬಿಜೆಪಿ ಶಿವಕುಮಾರ್‌ ಅವರಿಗೆ ತೊಂದರೆ ನೀಡಿದರೆ ಆಗಲೂ ಒಕ್ಕಲಿಗ ಸಮುದಾಯದ ಅನುಕಂಪ ಕಾಂಗ್ರೆಸ್‌ಗೆ ಲಭಿಸುತ್ತದೆ.

ಹೀಗಾಗಿ, ಶಿವಕುಮಾರ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತರಲು ಇದು ಸೂಕ್ತ ಸಮಯ ಎಂಬುದು ಶಿವಕುಮಾರ್‌ ಪರ ಲಾಬಿ ನಡೆಸುತ್ತಿರುವವರ ವಾದ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅರಿತುಕೊಳ್ಳಲು ಗುಲಾಂ ನಬಿ ಆಜಾದ್‌ ಸೋಮವಾರ ನಗರಕ್ಕೆ ಆಗಮಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.