ಶಿವಮೊಗ್ಗ :  ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಡೈರಿಯ ನಕಲು ನನ್ನ ಮನೆಯಲ್ಲಿತ್ತು. ಅದನ್ನು ಐಟಿಯವರು ತೆಗೆದುಕೊಂಡು ಹೋಗಿದ್ದು ನಿಜ. ನನ್ನ ಬಳಿ ಅನೇಕರ ಸೀಕ್ರೆಟ್ಸ್‌ ಇದೆ. ಎಲ್ಲವನ್ನು ಹೇಳಿ ಅವರಿಗೆ ಮುಜುಗರ ಉಂಟು ಮಾಡುವುದು ಬೇಡ. ನಾನು ಸಿಎಂ ಆಗಿ ಪಟ್ಟವನ್ನು ಅಲಂಕರಿಸಿಲ್ಲ. ನಾನು ಚೀಫ್‌ ಮಿನಿಸ್ಟರ್‌ ಆದಾಗ ಎಲ್ಲವನ್ನೂ ಹೇಳುತ್ತೇನೆ. ಆದರೆ, ನಾನು ಸಿಎಂ ಆಗೋದಕ್ಕೆ ಇನ್ನೂ ಸಮಯ ಇದೆ ಎಂದು ಕಾಂಗ್ರೆಸ್‌ನ ಪ್ರಭಾವಿ ನಾಯಕ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ತಾವೂ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪನವರು ಶಿವಕುಮಾರ್‌ ಮನೆಗೆ ಹೋಗಿದ್ದು ಡೈರಿ ಕೇಳಲಷ್ಟೇ ಹೊರತು ನೀರಾವರಿ ವಿಷಯಕ್ಕಲ್ಲ ಎಂಬ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರತಿಯೊಂದನ್ನೂ ಹೇಳಲು ಸಾಧ್ಯವಿಲ್ಲ. ನಮ್ಮಲ್ಲಿ ಅನೇಕ ರಹಸ್ಯಗಳಿರುತ್ತವೆ. ಎಲ್ಲವನ್ನೂ ಬಯಲು ಮಾಡಲು ಸಾಧ್ಯವಿಲ್ಲ ಎಂದರು.

ನಾನೇ ಮುಂದಿನ ಸಿಎಂ. ದಮ್‌ ಇದ್ದರೆ ಈಶ್ವರಪ್ಪ ಕೂಡ ಹೀಗೆ ಹೇಳಲಿ ಎಂಬ ಸಿದ್ದರಾಮಯ್ಯನವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿರುವ ಎಲ್ಲರಿಗೂ ಅದನ್ನು ಹೇಳುವ ಸ್ವಾತಂತ್ರ್ಯವಿರುತ್ತದೆ. ಈ ಬಗ್ಗೆ ನಾನೇನೂ ಹೆಚ್ಚಿಗೆ ಹೇಳುವುದಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದರು.