ಹುಬ್ಬಳ್ಳಿ(ಜು. 02) ಕಾನೂನಿನ ರಚನೆ ಹಾಗೂ ಬಿಜೆಪಿ ಕೇಂದ್ರ ನಾಯಕರು ದೋಸ್ತಿ ಸರ್ಕಾರದ ಪತನಕ್ಕೆ ಅವಕಾಶ ಕೊಡಲ್ಲ‌. ನಾವು 120 ಶಾಸಕರ ಬಲ ಹೊಂದಿದ್ದೇವೆ. ಬಿಜೆಪಿಯದ್ದು ಕೇವಲ 105. ನಮ್ಮ 16ಜನ ರಾಜೀನಾಮೆ ನೀಡಿದ್ರೆ ಮಾತ್ರ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ಈಗ ಇಬ್ಬರು ಮಾತ್ರ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಅಸಿಂಧು ಆಗಲಿದೆ ಆನಂದ್ ಸಿಂಗ್ ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದಾರೆ. ಕರ್ನಾಟಕ ವಿಧಾನ ಮಂಡಲ ಕಾಯ್ದೆ ಪ್ರಕಾರ ಕೈ ಬರಹದಲ್ಲಿ ಸ್ಫೀಕರ್ ಗೆ ರಾಜೀನಾಮೆ ನೀಡಬೇಕು. ಹೀಗಾಗಿ ಆನಂದ ರಾಜೀನಾಮೆ ಅಸಿಂಧು ಆಗಲಿದೆ ಎಂದು ರಾಯರೆಡ್ಡಿ ವಿಶ್ಲೇಷಣೆ ಮಾಡಿದರು.

ಕರ್ನಾಟಕದಲ್ಲಿ ಸಿಎಂ ಬದಲಾಗಬಹುದು

ಇನ್ನು ರಮೇಶ ಜಾರಕಿಹೋಳಿ ತಮ್ಮ ರಾಜೀನಾಮೆಯನ್ನು ಫ್ಯಾಕ್ಸ್ ಮೂಲಕ ಕಳಿಸಿದ್ದಾರೆ. ಮೇಲಾಗಿ ಅವರೇ ಖುದ್ದು ಸ್ಪೀಕರ್ ಕೈಗೆ ಕೊಡಬೇಕಿತ್ತು. ರಾಜೀನಾಮೆ ಅಂಗೀಕಾರಕ್ಕೆ ಒಂದು ತಿಂಗಳ ಅವಧಿ ಇರುತ್ತದೆ. ರಾಜೀನಾಮೆಯ ತಕ್ಷಣವೇ ರಾಜ್ಯ ಸರ್ಕಾರ ಪತನಗೊಳ್ಳುತ್ತೆ ಅನ್ನೋದು ದೊಡ್ಡ ತಪ್ಪು ಕಲ್ಪನೆ ಎಂದರು.

ಜುಲೈ 12ಕ್ಕೆ ವಿಧಾನಮಂಡಲ ಅಧಿವೇಶನ ನಡೆಯಲಿದೆ ವಿಶ್ವಾಸಮತ ಕೇಳುವ ಅಧಿಕಾರ ಸಿಎಂ ಗೆ ಇದೆ. ಅವಿಶ್ವಾಸ ಕೇಳುವ ಅಧಿಕಾರ ವಿರೋಧ ಪಕ್ಷಕ್ಕಿದೆ. ಯಾವುದೇ ಬೆಳವಣಿಗೆ ಇದ್ದರೂ ಸಂವಿಧಾನ ಬದ್ಧವಾಗಿಯೇ ನಡೆಯಬೇಕು ಎಂದು ಹೇಳಿದರು.