ಬೆಂಗಳೂರು(ಸೆ.01): ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕೈ ಚೀಲದಲ್ಲಿ ಹಣ ಹಂಚುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ.

ಇಲ್ಲಿನ ಪಾದರಾಯನಪುರ ನಿವಾಸಿ ಮೆಹಬೂಬ್ ಪಾಷಾ ಎಂಬವರು ಇತ್ತೀಚಿಗೆ ಕ್ಯಾನ್ಸರ್’ನಿಂದ ನಿಧನರಾಗಿದ್ದರು. ಪಾಷಾ ಮನೆಗೆ ಭೇಟಿ ನೀಡಿದ್ದ ಜಮೀರ್ ಅಹ್ಮದ್, ಕೈಚೀಲದಲ್ಲಿ ತಂದಿದ್ದ 20 ಲಕ್ಷ ರೂ. ಹಣವನ್ನು ಧನಸಹಾಯವನ್ನಾಗಿ ನೀಡಿದ್ದಾರೆ.

2,000 ರೂ. ಮುಖಬೆಲೆಯ 11 ಲಕ್ಷ ರೂ. ಹಾಗೂ 500 ರೂ.  ಮುಖಬೆಲೆಯ 9 ಲಕ್ಷ ರೂ. ಗಳನ್ನು ಜಮೀರ್ ಅಹ್ಮದ್ ಪಾಷಾ ಕುಟುಂಬಕ್ಕೆ ನೀಡಿದ್ದಾರೆ.

ಈ ಕುರಿತಾದ  ವಿಡಿಯೋವನ್ನು ಖುದ್ದು ಜಮೀರ್ ಅಹ್ಮದ್ ತಮ್ಮ ಫೇಸ್’ಬುಕ್’ನಲ್ಲಿ ಶೇರ್ ಮಾಡಿದ್ದು, ಇಷ್ಟೊಂದು ಪ್ರಮಾಣದ ಹಣವನ್ನು ಜಮೀರ್ ಹಂಚಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.

ಅಲ್ಲದೇ 2 ಲಕ್ಷ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಯಾರಿಗೂ ಕೊಡುವಂತಿಲ್ಲ ಎಂಬ ನಿಯಮವಿದ್ದು, ಒಂದು ವೇಳೆ ಐಟಿ ಇಲಾಖೆ ಪಾಷಾ ಕುಟುಂಬವನ್ನು ಪ್ರಶ್ನಿಸಿದರೆ ಏನು ಎಂಬ ಪ್ರಶ್ನೆ ಮೂಡಿದೆ. ಮತ್ತೊಂದೆಡೆ ಜಮೀರ್ ಮಾನವೀಯ ಮೌಲ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದ್ದು, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ ಶಾಸಕರ ನಡೆ ಪ್ರಶಂಸೆಗೆ ಪಾತ್ರವಾಗಿದೆ.