ಕಾರವಾರ :  ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರು ಲೋಕಸಭೆ ಚುನಾವಣಾ ಪ್ರಚಾರದಲ್ಲಿ ಮನಃಪೂರ್ವಕವಾಗಿ ಕೆಲಸ ಮಾಡಿದ್ದರೆ ನಾನೇ ಗೆಲ್ಲುತ್ತಿದ್ದೆ ಎನ್ನುವ ಮೂಲಕ ಮೈತ್ರಿ ಅಭ್ಯರ್ಥಿ ಆನಂದ್‌ ಅಸ್ನೋಟಿಕರ್‌ ಹಿರಿಯ ಕಾಂಗ್ರೆಸ್‌ ಮುಖಂಡನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಜತೆಗೆ ಕ್ಷೇತ್ರದಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ತುಮಕೂರಿನಲ್ಲಿ ಎಚ್‌.ಡಿ. ದೇವೇಗೌಡ, ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ಸೋಲಲು ಮೈತ್ರಿಯೇ ಕಾರಣ. ಇವರಿಬ್ಬರೂ ಜೆಡಿಎಸ್‌ನಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ಗೆಲುವು ನಿಶ್ಚಿತವಾಗಿತ್ತು. ಎರಡೂ ಪಕ್ಷಗಳ ಮೈತ್ರಿ ಸರಿಯಾಗಿ ಕೆಲಸ ಮಾಡಿಲ್ಲ. ಆ ಬಗ್ಗೆ ತನಗೆ ನೋವಿದೆ ಎಂದೂ ತಿಳಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ನಾಯಕ ದೇಶಪಾಂಡೆ ತಮಗೆ ಬೆಂಬಲ ನೀಡುವಂತೆ ತಮ್ಮ ಪಕ್ಷದವರಿಗೆ ಖಡಕ್‌ ಸೂಚನೆ ನೀಡಿದ್ದರೆ ಸಾಕಿತ್ತು. ಮನಃಪೂರ್ವಕವಾಗಿ ಆಶೀರ್ವಾದ ಮಾಡಿದ್ದರೆ ತಮ್ಮ ಗೆಲುವು ನಿಶ್ಚಿತವಾಗಿತ್ತು. ಅವರು ಪ್ರಚಾರ ಮಾಡಿಲ್ಲ ಎಂದು ತಾವು ಹೇಳುತ್ತಿಲ್ಲ. ಆದರೆ ಮನಃಪೂರ್ವಕವಾಗಿ ಮಾಡಿಲ್ಲ ಎಂದು ಪುನರುಚ್ಚರಿಸಿದರು.

ದೇಶದಲ್ಲಿ ಮೋದಿ ಅಲೆ ಹೇಗಿದೆಯೋ ಹಾಗೆಯೇ ಉತ್ತರ ಕನ್ನಡದಲ್ಲೂ ಇತ್ತು. ಆದರೆ ಅದಕ್ಕಿಂತ ಹೆಚ್ಚು ಅನಂತಕುಮಾರ್‌ ಹೆಗಡೆ ವಿರೋಧಿ ಅಲೆ ಇತ್ತು. ಮೋದಿ ಹೆಸರಿನಲ್ಲಿ ಒಬ್ಬ ಅಯೋಗ್ಯ ಆಯ್ಕೆಯಾಗಿದ್ದಾನೆ. ಬಹುತೇಕ ಮತಗಳು ಮೋದಿ ಹೆಸರಿನಲ್ಲಿ ಬಿದ್ದಿವೆ. 22 ವರ್ಷಗಳ ಕಾಲ ಸಂಸದರಾಗಿ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ಯಾವ ಜನಾಂಗಕ್ಕೂ ನೆರವಾಗಿಲ್ಲ ಎಂದು ಅನಂತಕುಮಾರ್‌ ಹೆಗಡೆ ವಿರುದ್ಧ ಹರಿಹಾಯ್ದರು.