Asianet Suvarna News Asianet Suvarna News

ಕಾಂಗ್ರೆಸ್‌ ಬಿಗಿಪಟ್ಟಿನಿಂದ ‘ದಳ’ದೊಳಗೆ ಚಡಪಡಿಕೆ!

 ಸರ್ಕಾರ ರಚನೆವರೆಗೆ ಮೃದು ಧೋರಣೆ ಹೊಂದಿದ್ದ ಕಾಂಗ್ರೆಸ್‌ ಪಕ್ಷ ನಂತರ ನಿಧಾನವಾಗಿ ಪಟ್ಟು ಬಿಗಿ ಗೊಳಿಸುತ್ತಿರುವ ಬೆಳವಣಿಗೆ ಜೆಡಿಎಸ್‌ ಪಾಳೆಯದಲ್ಲಿ ಸಣ್ಣದಾಗಿ ಅಸಮಾಧಾನ ಹಾಗೂ ಚಡಪಡಿಕೆ ಹುಟ್ಟುಹಾಕತೊಡಗಿದೆ.

Congress, JD-S 'tug of war' over portfolios continues

ಬೆಂಗಳೂರು :  ಸರ್ಕಾರ ರಚನೆವರೆಗೆ ಮೃದು ಧೋರಣೆ ಹೊಂದಿದ್ದ ಕಾಂಗ್ರೆಸ್‌ ಪಕ್ಷ ನಂತರ ನಿಧಾನವಾಗಿ ಪಟ್ಟು ಬಿಗಿ ಗೊಳಿಸುತ್ತಿರುವ ಬೆಳವಣಿಗೆ ಜೆಡಿಎಸ್‌ ಪಾಳೆಯದಲ್ಲಿ ಸಣ್ಣದಾಗಿ ಅಸಮಾಧಾನ ಹಾಗೂ ಚಡಪಡಿಕೆ ಹುಟ್ಟುಹಾಕತೊಡಗಿದೆ.

ಆರಂಭದಲ್ಲಿ ಇದ್ದಂಥ ರಾಜಿ ಮನೋಭಾವ ಈಗ ಕಾಂಗ್ರೆಸ್‌ ಕಡೆಯಿಂದ ಕಂಡುಬರುತ್ತಿಲ್ಲ. ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲಾಗಿದೆ ಎಂಬ ಕಾರಣಕ್ಕಾಗಿ ಇನ್ನುಳಿದ ಎಲ್ಲ ಹಂತಗಳಲ್ಲೂ ಕಾಂಗ್ರೆಸ್‌ ತಾನು ಹೇಳಿದ್ದೇ ಆಗಬೇಕು ಎಂಬ ಹಿರಿಯಣ್ಣನ ರೀತಿಯ ವಾದ ಮುಂದಿಡತೊಡಗಿದೆ ಎಂಬ ಭಾವನೆ ಪಕ್ಷದಲ್ಲಿ ವ್ಯಕ್ತವಾಗುತ್ತಿದೆ.

ಹೇಗಿದ್ದರೂ ಚುನಾವಣೆಗೆ ಮೊದಲು ಬಿಜೆಪಿ ಜತೆ ಮೈತ್ರಿ ಆಗಬಹುದು ಎಂಬಂಥ ವಾತಾವರಣ ನಿರ್ಮಾಣವಾಗಿತ್ತು. ಅದೇ ರೀತಿ ಮಾಡಬಹುದಿತ್ತು. ಅಥವಾ ಗಡಿಬಿಡಿಯಲ್ಲಿ ಕಾಂಗ್ರೆಸ್‌ ಜೊತೆ ಕೈಜೋಡಿಸದೇ ಇದ್ದಿದ್ದರೆ ಪಕ್ಷದ ಚೌಕಾಸಿ ಪಟ್ಟು ಬಿಗಿ ಮಾಡಬಹುದಿತ್ತು. ಈಗ ಪಟ್ಟು ಬಿಗಿಗೊಳಿಸಲು ಕಾಂಗ್ರೆಸ್‌ಗೆ ಅವಕಾಶ ಸಿಕ್ಕಿದೆ. ಇದರ ಬದಲು, ಅಂದು ಒತ್ತಡದಲ್ಲಿದ್ದ ಬಿಜೆಪಿ ನಮಗೆ ಹೆಚ್ಚಿನ ಬಲ ನೀಡಲು ಒಪ್ಪುತ್ತಿತ್ತು. ಅಲ್ಲದೇ, ಬಿಜೆಪಿ ಜತೆ ಮೈತ್ರಿ ಸರ್ಕಾರ ರಚಿಸಿದ್ದಲ್ಲಿ ಕೇಂದ್ರ ಸರ್ಕಾರದಿಂದ ವಿಶೇಷ ಪ್ಯಾಕೇಜ್‌ ಮಾದರಿಯಲ್ಲಿ ಹೆಚ್ಚಿನ ಅನುದಾನವನ್ನೂ ತರಬಹುದಿತ್ತು. ಆದರೆ, ಈಗ ಕಾಂಗ್ರೆಸ್‌ ಜೊತೆಗೇ ಗುದ್ದಾಡಿಯಾದರೂ ಅಧಿಕಾರ ಮುಂದುವರೆಸಬೇಕಾದ ಅನಿವಾರ್ಯತೆಗೆ ಸಿಲುಕಿದಂತಾಗಿದೆ ಎಂಬ ಚಡಪಡಿಕೆ ಪಕ್ಷದ ಹಲವು ಮುಖಂಡರಲ್ಲಿ ಕಂಡುಬರುತ್ತಿದೆ.

ಜನಾದೇಶ ಕಾಂಗ್ರೆಸ್‌ ಸರ್ಕಾರದ ವಿರುದ್ಧವಾಗಿತ್ತು. ಹೀಗಿರುವಾಗ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಆ ಬಗ್ಗೆ ಟೀಕೆಗಳೂ ಕೇಳಿಬರುತ್ತಿರಲಿಲ್ಲ. ಆದರೆ, ಈಗ ಜನತೆಯಿಂದ ಟೀಕೆಯನ್ನೂ ಎದುರಿ ಸಬೇಕು. ಹೋಗಲಿ ರೈತರ ಸಾಲ ಮನ್ನಾದಂಥ ಜನಪ್ರಿಯ ಕಾರ್ಯಕ್ರಮಗಳನ್ನು ಪ್ರಕಟಿಸುವ ಮೂಲಕ ಜನರ ಮನಸ್ಸು ಗೆಲ್ಲಬೇಕು ಎಂದುಕೊಂಡರೆ ಅದಕ್ಕೂ ಕಾಂಗ್ರೆಸ್‌ ಸಹಕಾರ ಕೊಡುವ ಭರವಸೆ ಸಿಗುತ್ತಿಲ್ಲ. ಇದರಿಂದ ಜೆಡಿಎಸ್‌ ವರ್ಚಸ್ಸಿಗೆ ಧಕ್ಕೆ ಉಂಟಾಗಬಹುದು ಎಂಬ ಬೇಸರದ ಚರ್ಚೆ ಪಕ್ಷದ ಮುಖಂಡರಲ್ಲಿ ನಡೆಯುತ್ತಿದೆ ಎನ್ನಲಾಗಿದೆ.

ಐದು ವರ್ಷಗಳ ಕಾಲ ಎಚ್‌.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂಬ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಮುಖಂಡರು ನಂತರ ತಮ್ಮ ಮಾತಿನ ಧಾಟಿ ಬದಲಿಸಿದರು. ಆ ಬಗ್ಗೆ ಇನ್ನೂ ಚರ್ಚೆ ಆಗಬೇಕಿದೆ. ಯಾವುದೇ ನಿರ್ಧಾರವಾಗಿಲ್ಲ ಎಂಬ ಮಾತು ಹೇಳುತ್ತಿರುವುದು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸುಲಭವಾಗಿ ಆಡಳಿತ ನಡೆಸಲು ಜೆಡಿಎಸ್‌ಗೆ ಬಿಡುವುದಿಲ್ಲವೇನೋ ಎಂಬ ಆತಂಕ ಪಕ್ಷದ ಕಾರ್ಯಕರ್ತರನ್ನು ಕಾಡತೊಡಗಿದೆ.

ಅಲ್ಲದೇ, ಇನ್ನೂ ಅಧಿಕಾರಿಗಳ ವರ್ಗದ ವಿಷಯ ಹೆಚ್ಚು ಚರ್ಚೆಗೆ ಬರುತ್ತಿಲ್ಲ. ಅದು ಆರಂಭವಾದನಂತರ ಪರಿಸ್ಥಿತಿ ಗೋಜಲಾಗುವುದು ನಿಶ್ಚಿತ. ಮುಖ್ಯಮಂತ್ರಿಯಾಗಿಯೂ ತಮಗೆ ಬೇಕಾದ ಅಧಿಕಾರಿಯನ್ನು ಬೇಕಾದಲ್ಲಿಗೆ ವರ್ಗ ಮಾಡುವ ಸ್ವಾತಂತ್ರ್ಯ ಕುಮಾರ ಸ್ವಾಮಿಗೆ ಇರುವುದಿಲ್ಲ ಎನ್ನುವುದು ಇನ್ನೊಂದು ಚಿಂತೆಗೆ ಕಾರಣ.ಈ ವಿಚಾರಗಳ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರೂ ಸಹ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಜೆಡಿಎಸ್‌ನ ಹಿರಿಯ ಮುಖಂಡರೊಬ್ಬರು ಆತ್ಮೀಯ ವಲಯದಲ್ಲಿ ಮಾತನಾಡಿದ್ದಾರೆ.

ಮೇಲ್ಮಟ್ಟದಲ್ಲೇ ಹೊಂದಾಣಿಕೆಗೆ ಇಷ್ಟೊಂದು ಸರ್ಕಸ್‌ ನಡೆಸಬೇಕಾದಲ್ಲಿ ಕೆಳಹಂತದಲ್ಲಿ ಕಾಂಗ್ರೆಸ್‌ ಪಕ್ಷದೊಂದಿಗೆ ಬೀದಿ ಕಾಳಗ ನಡೆಸಿ ರಾಜಕೀಯ ಮಾಡಿರುವ ನಮ್ಮ ಪಕ್ಷದ ಕಾರ್ಯಕರ್ತರ ಪರಿಸ್ಥಿತಿ ಏನು? ಬಿಜೆಪಿ ಮುಖಂಡರ ಜತೆಗೆ ಕಾದಾಡಿದ ಉದಾಹರಣೆಗಳು ತೀರಾ ವಿರಳ. ಆದರೆ, ಕಾಂಗ್ರೆಸ್‌ ಮುಖಂಡರೊಂದಿಗೆ ಜಿದ್ದಾಜಿದ್ದಿಯ ರಾಜಕಾರಣ ಮಾಡಿಕೊಂಡು ಬಂದಿರುವ ನಾವು ಮುಂದೆ ಏನು ಮಾಡಬೇಕು ಎಂದು ಜೆಡಿಎಸ್‌ ಮುಖಂಡರೊಬ್ಬರು ಮಾರ್ಮಿಕವಾಗಿ ಪ್ರಶ್ನಿಸಿದರು.

ಮೊದಲು ಬಿಜೆಪಿ ಜೊತೆ ಮೈತ್ರಿ ಸರ್ಕಾರ ನಡೆಸಿ, ಅದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ಸಿಗದಿದ್ದಾಗ ಕಾಂಗ್ರೆಸ್‌ ಜೊತೆ ಕೈಜೋಡಿಸಿದ್ದರೆ ಸೂಕ್ತವಾಗುತ್ತಿತ್ತು. ಆದರೆ, ಈಗ ಕಾಂಗ್ರೆಸ್‌ ಜೊತೆ ಮೈತ್ರಿ ಸರಿಯಾಗಿ ನಡೆಯದಿದ್ದರೂ ತಕ್ಷಣಕ್ಕೆ ಬಿಜೆಪಿ ಜೊತೆಗೆ ಹೆಜ್ಜೆ ಹಾಕಲು ಸಾಧ್ಯವಾಗುವುದಿಲ್ಲ. ಹಾಗೆ ಮಾಡಿದರೂ ಜನತೆಯ ದೃಷ್ಟಿಯಲ್ಲಿ ಜೆಡಿಎಸ್‌ ಖಳನಾಯಕನ ರೀತಿ ಬಿಂಬಿತವಾಗಬಹುದು. ಯಾವುದಕ್ಕೂ ಕಾಂಗ್ರೆಸ್‌ ಜೊತೆಗೆ ಪಕ್ಷದ ವರಿಷ್ಠರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂಬ ಸಲಹೆ ರೂಪದ ಮಾತುಗಳು ಕೇಳಿಬರುತ್ತಿವೆ.

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಪಕ್ಷದ ಹಿರಿಯ ಮುಖಂಡರೊಬ್ಬರು, ಸರಿಯೋ ಅಥವಾ ತಪ್ಪೋ ಗೊತ್ತಿಲ್ಲ. ಕಾಂಗ್ರೆಸ್‌ ಜೊತೆಗೆ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದೇವೆ ಎಂಬ ಏಕೈಕ ಕಾರಣಕ್ಕಾಗಿ ಆಡಳಿತದ ಇನ್ನುಳಿದ ಹಂತಗಳಲ್ಲಿ ಎಲ್ಲವೂ ತಾವು ಹೇಳಿದಂತೆಯೇ ಆಗಬೇಕು ಎಂಬ ಧೋರಣೆಯನ್ನು ಕಾಂಗ್ರೆಸ್‌ ಕೈಬಿಡಬೇಕು. ಇದು ಪಕ್ಷದ ಕಾರ್ಯಕರ್ತರಿಗೆ ಬೇಸರ ತಂದಿದೆ. ಹಾಗಂತ ಜೆಡಿಎಸ್‌ ಪಕ್ಷದ ನಾಯಕರು ಕಾಂಗ್ರೆಸ್‌ ಪಕ್ಷಕ್ಕೆ ಶರಣಾಗಬೇಕಾಗಿಲ್ಲ. ನಮ್ಮ ಅಂತಿಮ ಗುರಿ ಜನತೆಗೆ ಒಳ್ಳೆಯದನ್ನು ಮಾಡಬೇಕು ಎಂಬುದು. ಹೀಗಾಗಿ, ಮೈತ್ರಿ ಧರ್ಮ ಪಾಲನೆಯ ವ್ಯಾಪ್ತಿಯೊಳಗೆ ಚರ್ಚೆಗಳು ನಡೆದು ಉತ್ತಮ ಆಡಳಿತ ನೀಡುವಂತಾಗಲಿ. ಇಲ್ಲದಿದ್ದರೆ ಪಕ್ಷಕ್ಕೇ ಧಕ್ಕೆ ಉಂಟಾಗಬಹುದು ಎಂದು ಅಭಿಪ್ರಾಯಪಟ್ಟರು.

Follow Us:
Download App:
  • android
  • ios