ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲೇ ರಾಷ್ಟ್ರಮಟ್ಟದಲ್ಲೂ ಬಿಜೆಪಿ ವಿರುದ್ಧ ‘ಕ್ವಿಟ್ ಬಿಜೆಪಿ’ ಆಂದೋಲನದ ಮೂಲಕ ರಣಕಹಳೆ ಮೊಳಗಿಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ. ಇದಕ್ಕಾಗಿ ಕಾಂಗ್ರೆಸ್‌'ನ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಆ.16ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ‘ಕ್ವಿಟ್ ಬಿಜೆಪಿ’ ಘೋಷಣೆ ಮೊಳಗಿಸಲು ಬೃಹತ್ ರ್ಯಾಲಿಯೊಂದನ್ನು ಆಯೋಜಿಸಿದೆ. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬುಧವಾರ ಪ್ರಕಟಿಸಿದರು.

ಬೆಂಗಳೂರು(ಆ.10): ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲೇ ರಾಷ್ಟ್ರಮಟ್ಟದಲ್ಲೂ ಬಿಜೆಪಿ ವಿರುದ್ಧ ‘ಕ್ವಿಟ್ ಬಿಜೆಪಿ’ ಆಂದೋಲನದ ಮೂಲಕ ರಣಕಹಳೆ ಮೊಳಗಿಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ. ಇದಕ್ಕಾಗಿ ಕಾಂಗ್ರೆಸ್‌'ನ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಆ.16ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ‘ಕ್ವಿಟ್ ಬಿಜೆಪಿ’ ಘೋಷಣೆ ಮೊಳಗಿಸಲು ಬೃಹತ್ ರ್ಯಾಲಿಯೊಂದನ್ನು ಆಯೋಜಿಸಿದೆ. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬುಧವಾರ ಪ್ರಕಟಿಸಿದರು.

ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಮಾತ್ರವಲ್ಲ ಕೇಂದ್ರದಲ್ಲೂ ಮತ್ತೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ರಾಜ್ಯದಿಂದಲೇ ನಾಂದಿ ಹಾಡಬೇಕಾಗಿದೆ. ಈ ಉದ್ದೇಶದಿಂದ ಬ್ರಿಟಿಷರನ್ನು ಭಾರತದಿಂದ ಹೊರಹಾಕಲು ನಡೆದ ‘ಕ್ವಿಟ್ ಇಂಡಿಯಾ’ ಮಾದರಿಯಲ್ಲಿ ದೇಶದ ಆಡಳಿತದಿಂದ ಬಿಜೆಪಿ ತೊಲಗಿಸಲು ‘ಕ್ವಿಟ್ ಬಿಜೆಪಿ’ ಚಳವಳಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕೆಪಿಸಿಸಿ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬು‘ವಾರ ಆಯೋಜಿಸಲಾಗಿದ್ದ ‘ಕ್ವಿಟ್ ಇಂಡಿಯಾ ಚಳವಳಿಯ 75ನೇ ವರ್ಷಾಚರಣೆ’ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು. ಮೊದಲಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ, ಆರ್‌ಎಸ್‌ಎಸ್ ಮತ್ತು ಭಜರಂಗ ದಳದಿಂದ ದೇಶದ ಸಾಮಾಜಿಕ ನ್ಯಾಯ ಹಾಗೂ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ಬಂದಿದೆ. ಇದನ್ನು ತಡೆಯಬೇಕಾದ ದೊಡ್ಡ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ. ಈ ಜವಾಬ್ದಾರಿಯನ್ನು ಪಕ್ಷ ನಿಭಾಯಿಸಬೇಕಾದರೆ ಜನರು ಮತ್ತೆ ಕಾಂಗ್ರೆಸ್‌'ಗೆ ಅಧಿಕಾರ ನೀಡಬೇಕು. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಮುಂದೆಂದೂ ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬಾರದಂತೆ ತಡೆಯುತ್ತೇವೆ ಎಂಬ ದೃಢ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಆ.12ಕ್ಕೆ ರಾಯಚೂರಿಗೆ ಬರಲಿದ್ದಾರೆ. ಹಾಗೆಯೇ ಆ.16ಕ್ಕೆ ಬೆಂಗಳೂರಿಗೆ ಬರಲಿದ್ದಾರೆ. ರಾಯಚೂರಿನಲ್ಲಿ 2 ಲಕ್ಷ ಹಾಗೂ ಬೆಂಗಳೂರಿನಲ್ಲಿ ೫೦ ಸಾವಿರ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ‘ಕ್ವಿಟ್ ಬಿಜೆಪಿ’ ರಣಕಹಳೆ ಮೊಳಗಿಸಬೇಕು. ಬಿಜೆಪಿಯನ್ನು ದೇಶದಿಂದ ಓಡಿಸಲು ಸಂಕಲ್ಪ ಮಾಡಬೇಕು ಎಂದು ಕಾರ್ಯಕರ್ತರಿಗೆ ಮುಖ್ಯಮಂತ್ರಿಗಳು ಕರೆ ನೀಡಿದರು.

ಐದು ವರ್ಷದ ಹಿಂದೆ ಬೆಂಗಳೂರಿನಿಂದ ಬಳ್ಳಾರಿಗೆ ನಡೆದ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಆಂದೋಲನಕ್ಕೆ ರಾಜ್ಯದ ಜನರು ಸ್ಪಂದಿಸಿ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ನೀಡುವ ಮೂಲಕ ಅಧಿಕಾರ ನೀಡಿದ್ದಾರೆ. ಅಂದೇ ರಾಜ್ಯದಲ್ಲಿ ಬಿಜೆಪಿಯ ಅಧೋಗತಿ ಆರಂಭವಾಗಿತ್ತು. ಕೇಂದ್ರದಲ್ಲಿನ ಜನವಿರೋಧಿ ನೀತಿಗಾಗಿ ರಾಜ್ಯದಲ್ಲಿ ಬಿಜೆಪಿಗೆ ಬಂದಿರುವ ಗತಿಯೇ ಕೇಂದ್ರ ಮಟ್ಟದಲ್ಲೂ ಬರುತ್ತದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷ ‘ಕ್ವಿಟ್ ಬಿಜೆಪಿ’ ಚಳವಳಿ ಮೂಲಕ ಬಿಜೆಪಿ ಸರ್ಕಾರ ಕಿತ್ತೊಗೆಯಲು ಸಜ್ಜಾಗಬೇಕಾದ ಸಮಯ ಬಂದಿದೆ. ಈ ಚಳವಳಿ ಮೂಲಕ 2016ರ ಲೋಕಸಭಾ ಚುನಾವಣೆ ಮತ್ತು 2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮಾತನಾಡಿ, ದೇಶದ ಯುವ ಜನತೆಗೆ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ತಿಳಿಸಬೇಕು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಖಂಡರಿಗೆ ಸ್ವಾತಂತ್ರ್ಯ ಹೋರಾಟದ ಅರಿವಿಲ್ಲ. ತ್ಯಾಗದ ಜೀವನ ಗೊತ್ತಿಲ್ಲ ಎಂದು ಟೀಕಿಸಿದರು.