ರಾಜ್ಯದ ನೆಲ ಜಲದ ಬಗ್ಗೆ ಬಿಜೆಪಿಗಿರುವ ಹಿತಾಸಕ್ತಿ, ಕಾಂಗ್ರೆಸ್‌ಗಿಲ್ಲವೆಂದ ಸಿ.ಟಿ.ರವಿಮಹದಾಯಿ ವಿವಾದ ಬಗೆಹರಿಸುವಲ್ಲಿ ಬಿಜೆಪಿಯದ್ದು ಪ್ರಾಮಾಣಿಕ ಪ್ರಯತ್ನ
ಬೆಂಗಳೂರು: ಬಿಜೆಪಿ ಕಚೇರಿ ಬಳಿ ಮಹದಾಯಿ ಹೋರಾಟಗಾರರ ಧರಣಿಗೆ ಆಕ್ಷೇಪಿಸಿರುವ ಶಾಸಕ ಸಿ.ಟಿ.ರವಿ, 'ರಾಜ್ಯದ ನೆಲ ಜಲದ ಬಗ್ಗೆ ಬಿಜೆಪಿಗಿರುವ ಹಿತಾಸಕ್ತಿ, ಕಾಂಗ್ರೆಸ್ಗಿಲ್ಲ,' ಎಂದು ಹೇಳಿದ್ದಾರೆ.
'ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ ರವಿ, 'ಕೆಲವರ ಚಿತಾವಣೆಯಿಂದ ಮಾಧ್ಯಮಗಳ ಗಮನ ಸೆಳೆಯಲು ಹೋರಾಟಗಾರರು ಯತ್ನಿಸುತ್ತಿದ್ದಾರೆ. ಮಹದಾಯಿ ವಿವಾದ ಬಗೆಹರಿಸುವ ಬದ್ಧತೆ ಬಿಜೆಪಿಗಿದೆ. ಬಿಜೆಪಿ ಸಮ್ಮಿಶ್ರ ಸರಕಾರವಿದ್ದಾಗಲೇ ಮಹದಾಯಿ ಯೋಜನೆಗಾಗಿ 100 ಕೋಟಿ ರೂ. ಮಂಜೂರು ಮಾಡಿತ್ತು. ಈಗಲೂ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸಮ್ಮತಿ ಸೂಚಿಸಿರುವುದು ಬಿಜೆಪಿಯ ಶ್ರಮಕ್ಕೆ ಕಟ್ಟುಬಿದ್ದು,' ಎಂದಿದ್ದಾರೆ.
'ಗೋವಾ ಚುನಾವಣೆ ವೇಳೆ ಹನಿ ನೀರೂ ಕೊಡುವುದಿಲ್ಲವೆಂದಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಹದಾಯಿ ವಿಚಾರದಲ್ಲಿ ಈಗ ನಾಟಕವಾಡುತ್ತಿದ್ದಾರೆ. ಗೋವಾ ಮುಖ್ಯಮಂತ್ರಿ ಪತ್ರದಿಂದ ಅಸಂತೃಪ್ತರಾದ ಕಾಂಗ್ರೆಸ್ ನಾಯಕರು, ರಾಜಕೀಯ ಪ್ರೇರಣಿಯಿಂದ ಬಿಜೆಪಿ ಕಚೇರಿ ಮುಂದೆ ಧರಣಿ ಮಾಡಿಸುತ್ತಿದ್ದಾರೆ,' ಎಂದು ರವಿ ಆರೋಪಿಸಿದ್ದಾರೆ.
'ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಕೆಲವರು ಚಿತಾವಣೆ ಮಾಡುತ್ತಿದ್ದು, ಮಹದಾಯಿ ವಿವಾದ ಬಗೆ ಹರಿಸುವ ನಿಟ್ಟಿನಲ್ಲಿ ಬಿಜೆಪಿ ಯಾವುದೇ ರಾಜಕೀಯವನ್ನೂ ಮಾಡುತ್ತಿಲ್ಲ,' ಎಂದು ಸ್ಪಷ್ಟಪಡಿಸಿದ್ದಾರೆ.
