ಇಂದು ಕಾಂಗ್ರೆಸ್ ಅಂತಿಮ ಪಟ್ಟಿ ಪ್ರಕಟ

Congress Final List Release Today
Highlights

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಮೊದಲ ಪಟ್ಟಿಯಲ್ಲಿ ಘೋಷಿಸಿದ್ದ ಕೆಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾಯಿಸಿ ಹಾಗೂ ಬಾಕಿ ಉಳಿಸಿಕೊಂಡಿರುವ 5 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಕೊನೆಯ ಪಟ್ಟಿಯನ್ನು ಇಂದು ಪ್ರಕಟಿಸಲಿದೆ.

ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಮೊದಲ ಪಟ್ಟಿಯಲ್ಲಿ ಘೋಷಿಸಿದ್ದ ಕೆಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾಯಿಸಿ ಹಾಗೂ ಬಾಕಿ ಉಳಿಸಿಕೊಂಡಿರುವ 5 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಕೊನೆಯ ಪಟ್ಟಿಯನ್ನು ಇಂದು ಪ್ರಕಟಿಸಲಿದೆ.

ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ 218 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು. ಬಾಕಿ ಉಳಿದ ಆರು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರ (ಮೇಲುಕೋಟೆ)ಗೆ ರೈತನಾಯಕ ಪುಟ್ಟಣ್ಣಯ್ಯ ಅವರ ಪುತ್ರನಿಗೆ ಬೆಂಬಲ ನೀಡಿತ್ತು. ಉಳಿದ ಐದು ಕ್ಷೇತ್ರಗಳಾದ ಶಾಂತಿನಗರ, ಕಿತ್ತೂರು, ಸಿಂಧಗಿ, ನಾಗಠಾಣ ಹಾಗೂ ರಾಯಚೂರು ನಗರ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಪ್ರಕಟಿಸಲಿದೆ. ಇದಲ್ಲದೆ, ಸಿಎಂ ಸಿದ್ದರಾಮಯ್ಯ 2ನೇ ಕ್ಷೇತ್ರವಾಗಿ ಸ್ಪರ್ಧಿಸಬಯಸಿರುವ ಬಾದಾಮಿ ಕ್ಷೇತ್ರವೂ ಸೇರಿದಂತೆ 6 ಕ್ಷೇತ್ರಗಳ ಅಭ್ಯರ್ಥಿಗಳು ಬದಲಾವಣೆಯಾಗಬೇಕು ಎಂಬ ಬೇಡಿಕೆಯ ಬಗ್ಗೆಯೂ ನಿರ್ಧಾರ ಶನಿವಾರ ಪ್ರಕಟವಾಗಲಿದೆ.

ಅಪ್ರಕಟಿತ ಕ್ಷೇತ್ರಗಳ ಪೈಕಿ ಶಾಂತಿನಗರದಲ್ಲಿ ಎನ್.ಎ.ಹ್ಯಾರೀಸ್, ಕಿತ್ತೂರಿಗೆ ಡಿ.ಬಿ.ಇನಾಂದಾರ್, ರಾಯಚೂರು ಸಿಟಿ ಟಿಕೆಟ್ ಜಾಫರ್ ಷರೀಫ್ ಅಳಿಯ ಮಹಮ್ಮದ್ ಯಾಸೀನ್ ಅವರಿಗೆ ದೊರೆಯುವ ಸಂಭವವಿದೆ. ನಾಗಠಾಣ ಹಾಗೂ ಸಿಂಧಗಿ ಕ್ಷೇತ್ರಗಳಿಗೆ ಯಾರಿಗೆ ಟಿಕೆಟ್ ದೊರೆಯಲಿದೆ ಎಂಬುದು ಖಚಿತವಿಲ್ಲ.

ಪ್ರಕಟಿತ ಕ್ಷೇತ್ರಗಳ ಪೈಕಿ ಬಾದಾಮಿ, ಜಗಳೂರು, ತಿಪಟೂರು, ಮಡಿಕೇರಿ ಕ್ಷೇತ್ರಗಳ ಅಭ್ಯರ್ಥಿ ಬದಲಾವಣೆಗೆ ಒತ್ತಡವಿದೆ. ಇನ್ನು ಸಚಿವ ಸೀತಾರಾಂ ಅವರು ಸ್ಪರ್ಧೆಗೆ ಹಿಂಜರಿದ ಕಾರಣ ಮಲ್ಲೇಶ್ವರ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿ (ಬಹುತೇಕ ವಕೀಲರಾದ ದಿವಾಕರ್) ಆಯ್ಕೆಯಾಗಬೇಕಿದೆ. ಉಳಿದಂತೆ ಸಿಎಂ ಸಿದ್ದರಾಮಯ್ಯ, ಪದ್ಮನಾಭನಗರ, ಯಾವಗಲ್ ಟಿಕೆಟ್ ಬದಲಾವಣೆ ಬಗ್ಗೆಯೂ ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಬಾದಾಮಿ ಕ್ಷೇತ್ರದಿಂದ ಖುದ್ದು ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸುವ ಬಯಕೆಯಿದ್ದು, ಬಹುತೇಕ ಅವರ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ ಎಂದೇ ಮೂಲಗಳು ಹೇಳುತ್ತವೆ. ಒಂದು ವೇಳೆ ಹೈಕಮಾಂಡ್ ಸ್ಪರ್ಧೆ ಬೇಡ ಎಂದು ಹೇಳಿದರೆ, ಆಗ ಹಾಲಿ ಟಿಕೆಟ್ ನೀಡಿರುವ ಡಾ. ದೇವರಾಜ ಪಾಟೀಲ್ ಬದಲು ಹಾಲಿ ಶಾಸಕ ಚಿಮ್ಮನಕಟ್ಟಿಗೆ ಟಿಕೆಟ್ ದೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಜಗಳೂರಿನಲ್ಲೂ ಘೋಷಿತ ಅಭ್ಯರ್ಥಿ ಪುಷ್ಪ ಅವರ ಬದಲು ರಾಜೇಶ್ ಅವರಿಗೆ , ತಿಪಟೂರಿನಲ್ಲಿ ಶಾಸಕ ಷಡಕ್ಷರಿ ಹಾಗೂ ಘೋಷಿತ ಅಭ್ಯರ್ಥಿ ನಂಜಾಮರಿ ನಡುವೆ ಪೈಪೋಟಿಯಿದೆ. ಮಡಿಕೇರಿಯಲ್ಲಿ ಘೋಷಿತ ಅಭ್ಯರ್ಥಿ ಚಂದ್ರಮೌಳಿ ಅವರು ಬ್ಯಾಂಕ್‌ಗೆ ವಂಚಿಸಿ ದೇಶದಿಂದ ಪರಾರಿಯಾದ ಮೇಹುಲ್ ಚೋಕ್ಸಿ ಪರ ವಕೀಲರಾಗಿದ್ದರು ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅವರಿಗೆ ಬಿ-ಫಾರಂ ತಡೆಹಿಡಿಯಲಾಗಿತ್ತು. ಈಗ ಅವರಿಗೆ ಬಿ-ಫಾರಂ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಉಳಿದಂತೆ ಮಾಜಿ ಸಚಿವ, ಶಾಸಕ ಮನೋಹರ್ ತಹಶೀಲ್ದಾರ್ ಅವರ ಬದಲಿಗೆ ಹಾನಗಲ್‌ನಲ್ಲಿ ಶ್ರೀನಿವಾಸ್ ಮಾನೆ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಸಿಎಂ, ಮನೋಹರ್ ತಹಶೀಲ್ದಾರ್‌ಗೆ ಟಿಕೆಟ್ ಕೊಡಿಸುವ ಬಯಕೆ ಹೊಂದಿದ್ದಾರೆ ಎನ್ನಲಾಗಿದೆ. ಇನ್ನು ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಲ್ಲಿ ಗುರಪ್ಪನಾಯ್ಡು ಅವರಿಗೆ ಟಿಕೆಟ್ ದೊರಕಿದೆ. ಆದರೆ, ಬಿಜೆಪಿಯ ಆರ್. ಅಶೋಕ್ ಶಾಸಕರಾಗಿರುವ ಈ ಕ್ಷೇತ್ರದಲ್ಲಿ ಶ್ರೀನಿವಾಸ್ ಪ್ರಬಲ ಅಭ್ಯರ್ಥಿಯಾಗಬಲ್ಲರು ಎಂಬುದು ಸಿಎಂ ಅಭಿಪ್ರಾಯ. ಹೀಗಾಗಿ ಗುರಪ್ಪನಾಯ್ಡು ಬದಲಾವಣೆ ಸಾಧ್ಯತೆ ಇದೆ.

loader