2016 ರಲ್ಲಿ ಡೊನಾಲ್ಡ್ ಟ್ರಂಪ್‌ರನ್ನು ಗೆಲ್ಲಿಸಲು  ಬ್ರಿಟನ್ ಮೂಲದ ಆನ್‌ಲೈನ್ ವಿಶ್ಲೇಷಣಾ ಕಂಪನಿಯೊಂದು ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿ ಕದ್ದು ಬಳಸಿದೆ ಎಂಬ ಆರೋಪ ಸ್ಫೋಟಿಸಿದ್ದು, ವಿಶ್ವಾದ್ಯಂತ ಭಾರೀ ಸಂಚಲನ ಮೂಡಿಸಿದೆ.

ನವದೆಹಲಿ (ಮಾ. 22):  2016 ರಲ್ಲಿ ಡೊನಾಲ್ಡ್ ಟ್ರಂಪ್‌ರನ್ನು ಗೆಲ್ಲಿಸಲು ಬ್ರಿಟನ್ ಮೂಲದ ಆನ್‌ಲೈನ್ ವಿಶ್ಲೇಷಣಾ ಕಂಪನಿಯೊಂದು ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿ ಕದ್ದು ಬಳಸಿದೆ ಎಂಬ ಆರೋಪ ಸ್ಫೋಟಿಸಿದ್ದು, ವಿಶ್ವಾದ್ಯಂತ ಭಾರೀ ಸಂಚಲನ ಮೂಡಿಸಿದೆ.

ಬ್ರಿಟನ್‌ನ ಕೇಂಬ್ರಿಜ್ ಅನಾಲಿಟಿಕಾ ಎಂಬ ಸಂಸ್ಥೆ 5 ಕೋಟಿಗೂ ಹೆಚ್ಚು ಫೇಸ್‌ಬುಕ್ ಬಳಕೆದಾರರ ವಿವರ ಪಡೆದು ಅಕ್ರಮವಾಗಿ ಬಳಸಿಕೊಂಡಿದೆ ಎಂದು ಅಮೆರಿಕನ್ ಮಾಧ್ಯಮಗಳು ತನಿಖಾ ವರದಿ ಪ್ರಕಟಿಸಿವೆ. ಇದೇ ವೇಳೆ, ಬ್ರಿಟನ್ ಸುದ್ದಿವಾಹಿನಿಯೊಂದು ಕೇಂಬ್ರಿಜ್ ಅನಾಲಿಟಿಕಾ ಅಧಿಕಾರಿಗಳ ಮೇಲೆ ರಹಸ್ಯ ಕಾರ‌್ಯಾಚರಣೆ ನಡೆಸಿದ್ದು, ಚುನಾವಣೆ ವೇಳೆ ಮತದಾರರ ಮೇಲೆ ಪ್ರಭಾವ ಬೀರಲು ಆಮಿಷ ಒಡ್ಡುವುದು, ತಪ್ಪು ಮಾಹಿತಿ ಪಸರಿಸುವುದಾಗಿ ಒಪ್ಪಿಕೊಂಡಿರುವುದು ಹಗರಣದ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಇದೇ ವೇಳೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಸಾಮಾಜಿಕ ಜಾಲತಾಣದ ಇಮೇಜ್ ವೃದ್ಧಿಸಿಕೊಳ್ಳಲು ಇದೇ ಕಂಪನಿಯನ್ನು ನೇಮಿಸಿಕೊಂಡಿದ್ದಾರೆ ಎನ್ನಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಜಾಗತಿಕ ಹಗರಣದ ಕಳಂಕ ಕಾಂಗ್ರೆಸ್‌ಗೂ ತಗುಲಿದೆ. 

ಏನಿದು ಪ್ರಕರಣ? 

ಚುನಾವಣಾ ಪ್ರಚಾರ ತಂತ್ರಗಾರ, ಬ್ರಿಟನ್‌ನ ಕೇಂಬ್ರಿಜ್ ಅನಾಲಿಟಿಕಾ ಹಾಗೂ ಫೇಸ್‌ಬುಕ್ ಕಂಪನಿ ಹಗರಣದ ಕೇಂದ್ರಬಿಂದು. 5 ಕೋಟಿ ಫೇಸ್‌ಬುಕ್ ಬಳಕೆದಾರರ ವಿವರ ಅಕ್ರಮವಾಗಿ ಪಡೆದು 2016 ರ ಅಮೆರಿಕ ಚುನಾವಣೆ ವೇಳೆ
ಟ್ರಂಪ್ ಪರ ಪ್ರಭಾವ ಬೀರಲಾಗಿತ್ತೆನ್ನಲಾಗಿದೆ.