ನವದೆಹಲಿ(ಜು.02): ಕಾನೂನು ಕೈಗೆತ್ತಿಕೊಳ್ಳುವ ಪಕ್ಷದ ಶಾಸಕರಿಗೆ ಮತ್ತು ಸಂಸದರಿಗೆ, ಪ್ರಧಾನಿ ನರೇಂದ್ರ ಮೋದಿ ನೀಡಿರುವ ಎಚ್ಚರಿಕೆ ಕೇವಲ ನಾಟಕ ಎಂದು ಕಾಂಗ್ರೆಸ್ ಹರಿಹಾಯ್ದಿದೆ.

ಮಧ್ಯಪ್ರದೇಶದ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯ್ ವರ್ಗೀಯ ಅವರ ಪುತ್ರ ಆಕಾಶ್ ವಿಜಯ್ ವರ್ಗೀಯ, ಕರ್ತವ್ಯನಿರತ ಅಧಿಕಾರಿ ಮೇಲೆ ಬ್ಯಾಟ್’ನಿಂದ ಹಲ್ಲೆ ನಡೆಸಿದ್ದರು.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಪ್ರಧಾನಿ ಮೋದಿ, ದುರ್ವರ್ತನೆ ತೋರುವ ಯಾರೇ ಆದರೂ ಅವರನ್ನು ಕಾನೂನು ಶಿಕ್ಷಿಸಲಿದೆ ಎಂದು ಎಚ್ಚರಿಕೆ ನೀಡಿದ್ದರು.

ಮೋದಿ ಅವರ ಎಚ್ಚರಿಕೆಯನ್ನು ಕಣ್ಣೋರೆಸುವ ತಂತ್ರ ಎಂದು ಜರೆದಿರುವ ಕಾಂಗ್ರೆಸ್, ಮೋದಿ ಅವರಿಗೆ ನಿಜಕ್ಕೂ ಕಾನೂನಿನ ಮೇಲೆ ಗೌರವವಿದ್ದರೆ ಅಧಿಕಾರಿ ಮೇಲೆ ಹಲ್ಲೆ ಮಾಡಿರುವ ತಮ್ಮ ಶಾಸಕನ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರೆ ಶೋಭಾ ಓಜಾ, ಶಾಸಕ ಆಕಾಶ್ ವಿಜಯ್ ವರ್ಗೀಯ ವಿರುದ್ಧ ಕ್ರಮ ಕೈಗೊಳ್ಳಲು ಮೋದಿ, ಅಮಿತ್ ಶಾ ಅವರನ್ನು ಯಾರು ತಡೆದಿದ್ದಾರೆ ಎಂದು ಪ್ರಶ್ನಿಸಿದ್ದಾರೆ.