ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ರಾಜಧಾನಿ ನವದೆಹಲಿಯಲ್ಲಿ ಸೋಮವಾರ ಸಂಜೆ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ನಡೆದಿದ್ದು, ಇಂದು ಸಂಜೆ 130ರಿಂದ 140 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಅಂತಿಮಗೊಳ್ಳುವ ನಿರೀಕ್ಷೆಯಿದೆ

ನವದೆಹಲಿ : ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ರಾಜಧಾನಿ ನವದೆಹಲಿಯಲ್ಲಿ ಸೋಮವಾರ ಸಂಜೆ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ನಡೆದಿದ್ದು, ಇಂದು ಸಂಜೆ 130ರಿಂದ 140 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಅಂತಿಮಗೊಳ್ಳುವ ನಿರೀಕ್ಷೆಯಿದೆ. ಯಾವುದೇ ಗೊಂದಲವಿಲ್ಲದ ಕ್ಷೇತ್ರಗಳ ಹಾಲಿ ಶಾಸಕರ, ಇತರೆ ಪಕ್ಷಗಳಿಂದ ವಲಸೆ ಬಂದವರ ಹೆಸರುಗಳು ಮೊದಲ ಪಟ್ಟಿಯಲ್ಲಿ ಇರುವ ಸಾಧ್ಯತೆ ಹೆಚ್ಚಾಗಿದೆ.

ಸೋಮವಾರ ಸಂಜೆ 5:30 ಕ್ಕೆ ಕಾಂಗ್ರೆಸ್‌ನ ವಾರ್‌ ರೂಮ್ 15, ಜಿಆರ್‌ವಿ ರೋಡ್‌ನಲ್ಲಿ ಪ್ರಾರಂಭಗೊಂಡಿರುವ ಪರಿಶೀಲನಾ ಸಮಿತಿಯ ಸಭೆ ತಡ ರಾತ್ರಿಯವರೆಗೂ ನಡೆಯಿತು. ಮಂಗಳವಾರವು ಮುಂದುವರಿಯಲಿದೆ. ಮಂಗಳವಾರ ಸಂಜೆ ರಾಹುಲ… ಗಾಂಧಿ ಅವರೊಂದಿಗೂ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಚರ್ಚೆ ನಡೆಯಲಿದ್ದು ಈ ಚರ್ಚೆಯಲ್ಲೇ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಅಂತಿಮಗೊಳ್ಳಲಿದೆ.

ಪರಿಶೀಲನಾ ಸಭೆಯು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮಧುಸೂದನ್‌ ಮಿಸ್ತ್ರಿ ನೇತ್ರತ್ವದಲ್ಲಿ ಥಾರ್ಮ ಚಂದ್‌ ಸಾಹು, ಗೌರವ್‌ ಗೊಗಯ್ ಅವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಮತ್ತು ರಾಜ್ಯ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಭೆಯಲ್ಲಿ ಭಾಗಿಯಾದರು. ರಾತ್ರಿ 8 ಗಂಟೆ ಹೊತ್ತಿಗೆ ಮಲ್ಲಿಕಾರ್ಜುನ ಖರ್ಗೆ ಕೂಡ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದರು. ಅರ್ಧ ಗಂಟೆಯಲ್ಲಿ ಅವರು ನಿರ್ಗಮಿಸಿದರು.

ಪರಿಶೀಲನಾ ಸಮಿತಿಯ ಸಭೆಗೆ ಮುಂಚಿತವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಾಯಕರೊಂದಿಗೆ ಎಸ್‌.ಆರ್‌.ಪಾಟೀಲ್, ದಿನೇಶ್‌ ಗುಂಡೂರಾವ್‌, ಕೆ.ಎಚ್‌. ಮುನಿಯಪ್ಪ, ರೆಹಮಾನ್‌ ಖಾನ್‌, ಆರ್‌.ವಿ.ದೇಶಪಾಂಡೆ, ಬಿ.ವಿ.ನಾಯಕ್‌, ಚಂದ್ರಪ್ಪ ಮುಂತಾದವರು ಭಾಗಿಯಾಗಿದ್ದರು.