ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಹೆಚ್ಚಿನ ಸ್ಥಾನದಲ್ಲಿ ಗೆಲುವು ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಸಲಹೆ ನೀಡಿದ್ದಾರೆ. 

ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಪಕ್ಷವನ್ನು ಸಜ್ಜುಗೊಳಿಸುವ ಕೆಲಸವನ್ನು ಪ್ರಾರಂಭಿಸಿ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ನಿಯೋಜಿತ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ನಡೆಯಲಿರುವ ತಮ್ಮ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಮುನ್ನಾ ದಿನವಾದ ಮಂಗಳವಾರ ದೆಹಲಿಯಲ್ಲಿ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ದಿನೇಶ್‌ ಗುಂಡೂರಾವ್‌ ಮತ್ತು ಈಶ್ವರ ಖಂಡ್ರೆ ಮಾತುಕತೆ ನಡೆಸಿದರು.

ಲೋಕಸಭಾ ಚುನಾವಣೆಗೆ ಮುಂಚಿತವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸ್ಥಳೀಯ ನಾಯಕತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ, ಅದನ್ನು ಬಲಿಷ್ಠಗೊಳಿಸುವ ಕೆಲಸ ಮಾಡಿ. ಅದೇ ರೀತಿ ಪ್ರತಿ ಲೋಕಸಭಾ ಕ್ಷೇತ್ರದ ತಳ ಮಟ್ಟದ ಮಾಹಿತಿಯನ್ನು ಸಂಗ್ರಹಿಸಿ, ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸಿ ಎಂದು ರಾಹುಲ್‌ಗಾಂಧಿ ಹೇಳಿದ್ದಾರೆ.

ರಾಹುಲ್‌ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್‌ ಗುಂಡೂರಾವ್‌, ಸರಿಯಾದ ದಿಕ್ಕಿನಲ್ಲಿ ಸಮ್ಮಿಶ್ರ ಸರ್ಕಾರವನ್ನು ನಡೆಸಿಕೊಂಡು ಹೋಗಿ, ಸಮ್ಮಿಶ್ರ ಸರ್ಕಾರಕ್ಕೆ ಶಕ್ತಿ ತುಂಬಿ, ಜನಸಾಮಾನ್ಯರಿಗೆ ಕಾರ್ಯಕ್ರಮ ಮುಟ್ಟುವ ರೀತಿಯಲ್ಲಿ ಸರ್ಕಾರಕ್ಕೆ ಸಹಕಾರ ನೀಡಿ ಎಂದು ರಾಹುಲ್‌ ಗಾಂಧಿ ಹೇಳಿದರು ಎಂದು ತಿಳಿಸಿದರು.

ಬುಧವಾರ ಪದಗ್ರಹಣ ನಡೆಯುತ್ತಿದ್ದಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ. ಪಕ್ಷದ ಹಿರಿಯ ನಾಯಕರು, ಸಾಮಾನ್ಯ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸುತ್ತೇನೆ, ರಾಜ್ಯದ 28 ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ ಗೆಲ್ಲುವಂತೆ ಮಾಡುವುದು ನನ್ನ ಗುರಿ ಎಂದರು. ಹಿರಿ-ಕಿರಿಯರನ್ನೆಲ್ಲ ಒಟ್ಟಿಗೆ ಕರೆದುಕೊಂಡು ಹೋಗಿ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯನ್ನು ಮಣಿಸುವುದೇ ನಮ್ಮ ಆದ್ಯತೆಯಾಗಬೇಕೆಂದು ರಾಹುಲ್‌ ಕಿವಿಮಾತು ಹೇಳಿದರೆಂದರು.

ಬಿಜೆಪಿಯವರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರಿಗೆ ಮುಂಬರುವ ದಿನಗಳಲ್ಲಿ ತಕ್ಕ ಉತ್ತರವನ್ನು ಕಾಂಗ್ರೆಸ್‌ ನೀಡಲಿದೆ. ನಾನು 5 ಬಾರಿ ಶಾಸಕನಾಗಿದ್ದು 48 ವರ್ಷ ವಯಸ್ಸಾಗಿದೆ ಎನ್ನುವ ಮೂಲಕ ತಮ್ಮ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದವರಿಗೆ ಸೂಕ್ಷ್ಮವಾಗಿ ತಿರುಗೇಟು ನೀಡಿದರು.ನನ್ನ ಮೇಲೆ ವಿಶ್ವಾಸವಿಟ್ಟು ಮಹತ್ತರ ಜವಾಬ್ದಾರಿ ನೀಡಿದ ರಾಹುಲ್‌ಗಾಂಧಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಈಶ್ವರ್‌ ಖಂಡ್ರೆ ಹೇಳಿದರು.

ರಾಹುಲ್‌ ಭೇಟಿಗೂ ಮುನ್ನ ಹಿರಿಯ ನಾಯಕರಾದ ಎ.ಕೆ.ಆಂಟನಿ, ಅಶೋಕ್‌ ಗೆಹ್ಲೋಟ್‌ ಅವರನ್ನು ದಿನೇಶ್‌ ಗುಂಡೂರಾವ್‌ ಮತ್ತು ಈಶ್ವರ ಖಂಡ್ರೆ ಭೇಟಿಯಾದರು. ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಈ ಸಂದರ್ಭದಲ್ಲಿದ್ದರು.